ಬೆಂಗಳೂರು: ಎಂಜಿನಿಯರಿಂಗ್ ಸೇರಿದಂತೆ ಇತರ ವೃತ್ತಿಪರ ಕೋರ್ಸ್ ಗಳ ಪ್ರವೇಶಕ್ಕೆ ಅರ್ಜಿ ಸಲ್ಲಿಸಿರುವ ಹಾಗೂ ನೋಂದಣಿ ಮಾಡಿರುವ ಅಭ್ಯರ್ಥಿಗಳಿಗೆ ಶುಲ್ಕ ಪಾವತಿಸಲು ಮಾರ್ಚ್ 7ರವರೆಗೆ ದಿನಾಂಕ ವಿಸ್ತರಿಸಲಾಗಿದೆ.
ಇದುವರೆಗೆ ಒಟ್ಟು 3.47 ಲಕ್ಷ ಅಭ್ಯರ್ಥಿಗಳು ನೋಂದಣಿ ಮಾಡಿಕೊಂಡಿದ್ದು, ಈ ಪೈಕಿ 3.36 ಲಕ್ಷ ಮಂದಿ ನಿಗದಿತ ಶುಲ್ಕ ಪಾವತಿ ಮಾಡಿದ್ದಾರೆ. ಇನ್ನೂ 9 ಸಾವಿರ ಮಂದಿ ಶುಲ್ಕ ಪಾವತಿಸಬೇಕಿದ್ದು, ಅವರಿಗೆ ಅನುಕೂಲ ಆಗಲಿಯೆಂದು ದಿನಾಂಕ ವಿಸ್ತರಿಸಲಾಗಿದೆ ಎಂದು ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಆಡಳಿತಾಧಿಕಾರಿ ಇಸ್ಲಾವುದ್ದೀನ್ ಗದ್ಯಾಳ ತಿಳಿಸಿದ್ದಾರೆ.
ವೈದ್ಯಕೀಯ ಕೋರ್ಸ್
ಸ್ನಾತಕೋತ್ತರ ವೈದ್ಯಕೀಯ ಕೋರ್ಸ್ ಪ್ರವೇಶಕ್ಕೆ 3ನೇ ಸುತ್ತಿನಲ್ಲಿ ಸೀಟು ಹಂಚಿಕೆಯಾದವರಿಗೆ ಶುಲ್ಕ ಪಾವತಿಸಿ ಕಾಲೇಜಿಗೆ ವರದಿ ಮಾಡಿಕೊಳ್ಳಲು ಮಾ.5ರವರೆಗೆ ದಿನಾಂಕ ವಿಸ್ತರಿಸಲಾಗಿದೆ.
ಕೆಲವು ಅಭ್ಯರ್ಥಿಗಳು ಶುಲ್ಕ ಪಾವತಿಗೆ ಸಮಯ ಕೇಳಿದ್ದರಿಂದ ಈ ತೀರ್ಮಾನ ಮಾಡಿದ್ದು, ಸಂಜೆ 4ರೊಳಗೆ ಶುಲ್ಕ ಪಾವತಿಸಿ ಸಂಜೆ 5.30ರೊಳಗೆ ಕಾಲೇಜುಗಳಲ್ಲಿ ವರದಿ ಮಾಡಿಕೊಳ್ಳಲು ಸೂಚಿಸಲಾಗಿದೆ.
ಈ ಅವಧಿ ನಂತರವೂ ಯಾರು ಶುಲ್ಕ ಪಾವತಿಸಿ, ಕಾಲೇಜಿಗೆ ಹೋಗಿ ಪ್ರವೇಶ ಪಡೆಯುವುದಿಲ್ಲವೊ ಅಂತಹವರ ಸೀಟುಗಳನ್ನು 4ನೇ ಸುತ್ತಿನ ಹಂಚಿಕೆಗೆ ಪರಿಗಣಿಸಲಾಗುವುದು.

