HomeKarnatakaಬಡವರ ಬದುಕಿಗೆ ಪಂಚ ಗ್ಯಾರಂಟಿಗಳು ಪಂಚಾಮೃತದಂತೆ ಆಸರೆ

ಬಡವರ ಬದುಕಿಗೆ ಪಂಚ ಗ್ಯಾರಂಟಿಗಳು ಪಂಚಾಮೃತದಂತೆ ಆಸರೆ

“ಸರ್ಕಾರದ ಪಂಚ ಗ್ಯಾರಂಟಿ ಯೋಜನೆಗಳು ಕೇವಲ ಭರವಸೆಗಳಲ್ಲ, ಬಡವರ ಪಾಲಿನ ಆರ್ಥಿಕ ಶಕ್ತಿಯಾಗಿ ಮಾರ್ಪಟ್ಟಿದ್ದಲ್ಲದೆ ಅವು ಪಂಚಾಮೃತವಾಗಿದೆ” ಎಂದು ಗಣಿ ಮತ್ತು ಭೂ ವಿಜ್ಞಾನ, ತೋಟಗಾರಿಕೆ ಮತ್ತು ದಾವಣಗೆರೆ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್.ಮಲ್ಲಿಕಾರ್ಜುನ ಹೇಳಿದರು.

ಬುಧವಾರ ತಾಲ್ಲೂಕು ಮಟ್ಟದ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿಗಳ ಸಂಯುಕ್ತಾಶ್ರಯದಲ್ಲಿ ಗುಂಡಿ ಮಹಾದೇವಪ್ಪ ಕಲ್ಯಾಣ ಮಂಟಪದಲ್ಲಿ ನಡೆದ ಜಿಲ್ಲಾ ಮಟ್ಟದ ಕಾರ್ಯಾಗಾರದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

“ದಾವಣಗೆರೆ ಜಿಲ್ಲೆಯ 12.42 ಲಕ್ಷ ಜನರಿಗೆ 5 ಕೆ.ಜಿ. ಅಕ್ಕಿ ಮತ್ತು 5 ಕೆ.ಜಿ ಅಕ್ಕಿ ಬದಲು ಹಣ ನೀಡಲು ಒಟ್ಟು 347.54 ಕೋಟಿ ರೂ. ಗಳನ್ನು ಅನ್ನಭಾಗ್ಯ ಯೋಜನೆಯಡಿ ವ್ಯಯಿಸಲಾಗಿದೆ, ಮನೆ ಯಜಮಾನಿಯರ ಸಬಲೀಕರಣಕ್ಕಾಗಿ 3,74,581 ಮಹಿಳೆಯರ ಖಾತೆಗೆ 1835 ಕೋಟಿ ರೂ. ಗಳನ್ನು ಗೃಹಲಕ್ಷ್ಮಿ ಯೋಜನೆಯಡಿ ಜಮೆ ಮಾಡಲಾಗಿದೆ” ಎಂದರು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

“ಮಹಿಳೆಯರ ಉಚಿತ ಪ್ರಯಾಣ ಮಾಡಲು ಜಿಲ್ಲೆಯಲ್ಲಿ 12.82 ಕೋಟಿ ಬಾರಿ ಉಚಿತ ಪ್ರಯಾಣ ಮಾಡಿದ್ದು ಸರ್ಕಾರದಿಂದ 377 ಕೋಟಿ ರೂ. ಗಳನ್ನು ಶಕ್ತಿ ಯೋಜನೆಗೆ ಭರಿಸಲಾಗಿದೆ. ಜಿಲ್ಲೆಯ 519963 ಲಕ್ಷ ಮನೆಗಳಿಗೆ ‘ಉಚಿತ’ ವಿದ್ಯುತ್ ಸಿಕ್ಕಿದ್ದು, ಸರ್ಕಾರ 200 ಯುನಿಟ್ ಮಿತಿಯೊಳಗಿನ ಗ್ರಾಹಕರಿಗೆ 603 ಕೋಟಿ ರೂ. ಗಳನ್ನು ಗೃಹಜ್ಯೋತಿ ಯೋಜನೆಯಡಿ ವೆಚ್ಚ ಮಾಡಿದೆ. ನಿರುದ್ಯೋಗಿ ಯುವಶಕ್ತಿಗೆ ಆಸರೆಯಾಗಿ 10630 ಫಲಾನುಭವಿಗಳಿಗೆ 33.23 ಕೋಟಿ ರೂ.ಗಳನ್ನು ಯುವನಿಧಿ ಯೋಜನೆಯಡಿ ತಲುಪಿಸಲಾಗಿದೆ” ಎಂದು ಹೇಳಿದರು.

“ಪಂಚ ಗ್ಯಾರಂಟಿ ಯೋಜನೆಗಳು ಯಾವುದೇ ಒಂದು ವರ್ಗಕ್ಕೆ ಸೀಮಿತವಲ್ಲ. ಇದು ಸರ್ವಜನಾಂಗದ ಶಾಂತಿಯ ತೋಟದ ಪರಿಕಲ್ಪನೆ. ಪ್ರತಿಯೊಬ್ಬ ಬಡವನಿಗೂ ತಲುಪಬೇಕೆಂಬುದು ನಮ್ಮ ಉದ್ದೇಶ, ನಮ್ಮ ಕೆಲಸ ಮತ್ತು ಅಂಕಿ-ಅಂಶಗಳೇ ಟೀಕೆಗಳಿಗೆ ಉತ್ತರ ನೀಡುತ್ತಿವೆ, ಯಾವುದೇ ಫಲಾನುಭವಿಗಳಿಗೆ ಹಣ ಪಾವತಿ ವಿಳಂಬವಾಗದಂತೆ ನೋಡಿಕೊಳ್ಳಲು ಮತ್ತು ಬಾಕಿ ಇರುವ ಹಣವನ್ನು ಕೂಡಲೇ ಡಿ.ಬಿ.ಟಿ ಮೂಲಕ ವರ್ಗಾಯಿಸಲು ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಆದೇಶ ನೀಡಲಾಗಿದೆ” ಎಂದು ತಿಳಿಸಿದರು.

ರಾಜ್ಯ ಗ್ಯಾರಂಟಿ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಹೆಚ್.ಎಂ. ರೇವಣ್ಣ ಮಾತನಾಡಿ, “ದಾವಣಗೆರೆ ಜಿಲ್ಲೆಯು ಗ್ಯಾರಂಟಿ ಯೋಜನೆಗಳ ಅನುಷ್ಠಾನದಲ್ಲಿ ಶೇ. 98ರಷ್ಟು ಪ್ರಗತಿ ಸಾಧಿಸುವ ಮೂಲಕ ಇಡೀ ರಾಜ್ಯಕ್ಕೆ ಪ್ರಥಮ ಸ್ಥಾನದಲ್ಲಿದೆ” ಎಂದರು.

“ಈ ಯೋಜನೆಗಳು ಬದುಕಿರುವ ಎಲ್ಲರಿಗೂ ಶಕ್ತಿ ನೀಡುತ್ತಿವೆ. ಇವುಗಳು ಸರ್ವೋದಯ ತತ್ವವಾಗಿದೆ, ಗದಗದ ತಿಮ್ಮಾಪುರ ಗ್ರಾಮದ ಮಹಿಳೆಯರು ಗ್ಯಾರಂಟಿ ಹಣದಿಂದ ರೂ. 17.00 ಲಕ್ಷಗಳ ವೆಚ್ಚದಲ್ಲಿ ದೇವಸ್ಥಾನ ಕಟ್ಟಿಸಿರುವುದು ಯೋಜನೆಗಳ ಯಶಸ್ಸಿಗೆ ಸಾಕ್ಷಿಯಾಗಿದೆ” ಎಂದು ಬಣ್ಣಿಸಿದರು.

“ಡಿಜಿಟಲ್ ಕ್ರಾಂತಿಯ ಮೂಲಕ ಮಧ್ಯವರ್ತಿಗಳಿಲ್ಲದೆ ನೇರವಾಗಿ ಫಲಾನುಭವಿಗಳ ಖಾತೆಗೆ ಹಣ ತಲುಪುತ್ತಿದೆ, ಇದು ಪಾರದರ್ಶಕತೆಯಾಗಿದೆ ಎಂಬುದಕ್ಕೆ ನೀವೇ ಸಾಕ್ಷಿಗಳು, ಆದರೆ ರಾಜ್ಯ ದಿವಾಳಿಯಾಗುತ್ತದೆ ಎನ್ನುವವರ ಟೀಕೆಗಳಿಗೆ ಜನರ ಬದುಕಿನಲ್ಲಿ ಕಂಡುಬಂದಿರುವ ಬದಲಾವಣೆಯೇ ಉತ್ತರ” ಎಂದರು.

ದಾವಣಗೆರೆ ಸಂಸದೆ ಡಾ. ಪ್ರಭಾ ಮಲ್ಲಿಕಾರ್ಜುನ್ ಮಾತನಾಡಿ, “2023 ರಿಂದ ಜಾರಿಗೆ ಬಂದ ಗ್ಯಾರಂಟಿ ಯೋಜನೆಗಳು ಸ್ವಾವಲಂಭನೆ ಮತ್ತು ಆರ್ಥಿಕ ಅಭಿವೃದ್ದಿಗೆ ಒತ್ತು ನೀಡಿದೆ. ಗ್ಯಾರಂಟಿ ಟೀಕಾಕಾರರಿಗೆ ಜಾರಿಗೆ ತಂದಿರುವ ಯೋಜನೆಗಳ ಯಶಸ್ಸು ಪ್ರತ್ಯುತ್ತರವಾಗಿದೆ” ಎಂದರು.

For Latest News Updates, Join Our Whatsapp Community🚩
Abinandan
Abinandan
ನಿವೇದಿತಾ ಬಿ.ಎ.. ಬಿ.ಎಡ್ ಪದವೀಧರರು. ಡಿಜಿಟಲ್ ಪತ್ರಿಕೋದ್ಯಮದಲ್ಲಿ ಕಳೆದ 4 ವರ್ಷಗಳಿಂದ ಸಕ್ರಿಯರಾಗಿದ್ದಾರೆ. Revenufacts ವೆಬ್‌ಸೈಟ್‌ನಲ್ಲಿ 3 ವರ್ಷ ಹಾಗೂ ಕರುನಾಡು ಸುದ್ದಿ ಮಾಧ್ಯಮದಲ್ಲಿ 1 ವರ್ಷ ಕಾರ್ಯನಿರ್ವಹಿಸಿದ ಅನುಭವ ಹೊಂದಿದ್ದಾರೆ. ಆರೋಗ್ಯ, ವಾಣಿಜ್ಯ, ಲೈಫ್‌ಸ್ಟೈಲ್ ವಿಭಾಗದಲ್ಲಿ ವಿಶೇಷ ಪರಿಣತಿ ಹೊಂದಿದ್ದಾರೆ. Nivedita is a skilled digital content creator with a strong academic background in B.A. and B.Ed. 4 years of experience in digital journalism.
RELATED ARTICLES

LEAVE A REPLY

Please enter your comment!
Please enter your name here

Most Popular