ಬೆಂಗಳೂರು: 2025-26ನೇ ಸಾಲಿನ ಆರ್.ಟಿ.ಇ. ಶುಲ್ಕ, ಮರುಪಾವತಿಗೆ ತಂತ್ರಾಂಶದ ಮೂಲಕ ಬೇಡಿಕೆ ಸಲ್ಲಿಸಲು ಅವಧಿ ವಿಸ್ತರಿಸಲಾಗಿದೆ.
ಮೇಲ್ಕಂಡ ವಿಷಯ ಹಾಗೂ ಉಲ್ಲೇಖಗಳಿಗೆ ಸಂಬಂಧಿಸಿದಂತೆ ಶಿಕ್ಷಣ ಹಕ್ಕು ಕಾಯಿದೆ 2009ರ ಸೆಕ್ಷನ್ 12(1)(ಸಿ) ಅಡಿ ಖಾಸಗಿ ಅನುದಾನರಹಿತ ಶಾಲೆಗಳಲ್ಲಿ ದಾಖಲಾದ ಮಕ್ಕಳ 2025-26ನೇ ಸಾಲಿನ ಪ್ರಥಮ ಕಂತಿನ ಶುಲ್ಕ ಮರುಪಾವತಿಗೆ ಸಂಬಂಧಿಸಿದ ಶಾಲೆಗಳು ಆನ್ಲೈನ್ ಮೂಲಕ ಬೇಡಿಕೆ ಸಲ್ಲಿಸಲು ದಿನಾಂಕ:12.12.2025 ರಿಂದ 28.02.2026ರವರೆಗೆ ಉಲ್ಲೇಖ (3)ರಂತೆ ತಂತ್ರಾಂಶವನ್ನು ಬಿಡುಗಡೆ ಮಾಡಲಾಗಿರುತ್ತದೆ. ಸದರಿ ಅವಧಿಯಲ್ಲಿ ಎಲ್ಲಾ ಶಾಲೆಗಳು ಬೇಡಿಕೆ ಸಲ್ಲಿಸದಿರುವುದರಿಂದ 2025-26ನೇ ಸಾಲಿನ ಆರ್.ಟಿ.ಇ. ಶುಲ್ಕ, ಮರುಪಾವತಿ ಬಾಕಿಯಿರುವ ಶಾಲೆಗಳಿಗೆ ಅರ್ಜಿ ಸಲ್ಲಿಸಲು ಅಂತಿಮ ಅವಕಾಶವಾಗಿ ದಿನಾಂಕ: 01.03.2026 ರಿಂದ 31.03.2026 ರವರೆಗೆ ಅವಧಿ ವಿಸ್ತರಿಸಿ, ಪ್ರಥಮ ಮತ್ತು ದ್ವಿತೀಯ ಕಂತಿನ ಶುಲ್ಕ ಮರುಪಾವತಿಗೆ ಸಂಬಂಧಿಸಿದ ಶಾಲೆಗಳು ಆನ್ಲೈನ್ ಮೂಲಕ ಬೇಡಿಕೆ ಸಲ್ಲಿಸಲು ತಂತ್ರಾಂಶದಲ್ಲಿ ಅವಕಾಶ ಕಲ್ಪಿಸಲಾಗಿದೆ.
ಉಪನಿರ್ದೇಶಕರು (ಆಡಳಿತ) ಹಾಗೂ ಕ್ಷೇತ್ರ ಶಿಕ್ಷಣಾಧಿಕಾರಿಗಳು ತಮ್ಮ ವ್ಯಾಪ್ತಿಯಲ್ಲಿ 2025-26ರ ಆರ್.ಟಿ.ಇ. ಶುಲ್ಕ ಮರುಪಾವತಿಗೆ ಈವರೆಗೆ ಬೇಡಿಕೆ ಸಲ್ಲಿಸಿಲ್ಲದ ಶಾಲೆಗಳನ್ನು ಗುರುತಿಸಿ, ನೀಡಿರುವ ಕಾಲಾವಧಿಯೊಳಗೆ ಬೇಡಿಕೆ ಸಲ್ಲಿಸುವಂತೆ ಶಾಲಾ ಆಡಳಿತ ಮಂಡಳಿಗಳಿಗೆ ಸೂಕ್ತ ಮಾರ್ಗದರ್ಶನ ನೀಡಿ ಅಗತ್ಯ ಕ್ರಮ ಕೈಗೊಳ್ಳಲು ಸೂಚಿಸಿದೆ. ಅಂತಿಮ ದಿನಾಂಕದ ಒಳಗೆ ಯಾವುದೇ ಶಾಲೆ ಅರ್ಜಿ ಸಲ್ಲಿಸದೇ ಪುನ: ಅವಕಾಶ ಕೋರಿ ಮನವಿಗಳು ಸ್ವೀಕೃತವಾದಲ್ಲಿ ಮುಂದಿನ ಆಗುಹೋಗುಗಳಿಗೆ ಸಂಬಂಧಿಸಿದ ಉಪನಿರ್ದೇಶಕರು (ಆಡಳಿತ) ಹಾಗೂ ಕ್ಷೇತ್ರ ಶಿಕ್ಷಣಾಧಿಕಾರಿಗಳನ್ನು ನೇರ ಹೊಣೆಗಾರರನ್ನಾಗಿ ಮಾಡಲಾಗುವುದೆಂದು ಸ್ಪಷ್ಟಪಡಿಸಿದೆ. ಉಳಿದಂತೆ ಉಲ್ಲೇಖ (3)ರ ಸುತ್ತೋಲೆಯಲ್ಲಿನ ಅಂಶಗಳು ಮುಂದುವರೆಯುತ್ತವೆ ಎಂದು ಹೇಳಲಾಗಿದೆ.


