HomeInternationalಇರಾನ್-ಇಸ್ರೇಲ್ ಸಂಘರ್ಷಕ್ಕೆ ಹೊಸ ತಿರುವು: ಯುಎಸ್ ನೌಕಾಪಡೆಯ ಫೋಟೋಗಳನ್ನು ಹಂಚಿದ ಚೀನಾ

ಇರಾನ್-ಇಸ್ರೇಲ್ ಸಂಘರ್ಷಕ್ಕೆ ಹೊಸ ತಿರುವು: ಯುಎಸ್ ನೌಕಾಪಡೆಯ ಫೋಟೋಗಳನ್ನು ಹಂಚಿದ ಚೀನಾ

ಇರಾನ್ ವಿರುದ್ಧ ಅಮೆರಿಕ ಮತ್ತು ಇಸ್ರೇಲ್ ಜಂಟಿಯಾಗಿ ನಡೆಸುತ್ತಿರುವ ಮಿಲಿಟರಿ ಕಾರ್ಯಾಚರಣೆಯ ನಡುವೆಯೇ, ಚೀನಾದ ಖಾಸಗಿ ಕಂಪನಿಯೊಂದು ಯುದ್ಧ ಭೂಮಿಯ ಅತೀ ಸೂಕ್ಷ್ಮ ಮತ್ತು ರಹಸ್ಯ ಮಾಹಿತಿಗಳನ್ನು ಬಹಿರಂಗಪಡಿಸಿ ಜಗತ್ತಿನ ಗಮನ ಸೆಳೆದಿದೆ. ಮಿಜಾರ್ ವಿಜನ್ ಹೆಸರಿನ ಚೀನಾದ ಈ ಸ್ಟಾರ್ಟಪ್ ಸಂಸ್ಥೆಯು ಪಶ್ಚಿಮ ಏಷ್ಯಾದಲ್ಲಿ ಅಮೆರಿಕ ನಿಯೋಜಿಸಿರುವ ಯುದ್ಧ ನೌಕೆಗಳು ಮತ್ತು ಇಸ್ರೇಲ್‌ನ ವಾಯುನೆಲೆಗಳ ಹೈ-ರೆಸಲ್ಯೂಶನ್ ಸ್ಯಾಟಲೈಟ್ ಚಿತ್ರಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದೆ.

ಫೆಬ್ರವರಿ 28ರಂದು ಇರಾನ್ ಮೇಲೆ ನಡೆದ ದಾಳಿಯ ನಂತರ, ಅರಬ್ಬಿ ಸಮುದ್ರದಲ್ಲಿರುವ ಅಮೆರಿಕದ ಯುಎಸ್ಎಸ್ ಅಬ್ರಹಾಂ ಲಿಂಕನ್ ಮತ್ತು ಮೆಡಿಟರೇನಿಯನ್ ಸಮುದ್ರದಲ್ಲಿರುವ ಯುಎಸ್ಎಸ್ ಫೋರ್ಡ್ ವಿಮಾನವಾಹಕ ನೌಕೆಗಳ ನಿಖರ ಸ್ಥಾನವನ್ನು ಈ ಸಂಸ್ಥೆ ಪತ್ತೆಹಚ್ಚಿದೆ. ಅಷ್ಟೇ ಅಲ್ಲದೆ, ಕತಾರ್‌ನ ಅಲ್ ಉದೈದ್ ವಾಯುನೆಲೆ, ಇಸ್ರೇಲ್‌ನ ಓವ್ಡಾ ಮತ್ತು ಸೌದಿ ಅರೇಬಿಯಾದ ಪ್ರಿನ್ಸ್ ಸುಲ್ತಾನ್ ವಾಯುನೆಲೆಗಳಲ್ಲಿ ಅಮೆರಿಕದ ವಿಮಾನಗಳ ಚಲನವಲನದ ಬಗ್ಗೆಯೂ ಫೋಟೋಗಳನ್ನು ಬಿಡುಗಡೆ ಮಾಡಿದೆ.

ವಿಶೇಷವೆಂದರೆ, ಇರಾನ್ ನಡೆಸಿದ ಪ್ರತೀಕಾರದ ದಾಳಿಯಿಂದ ಕುವೈತ್ ಮತ್ತು ದುಬೈನಲ್ಲಿ ಹಾನಿಗೊಳಗಾದ ಪ್ರದೇಶಗಳ ಚಿತ್ರಗಳನ್ನೂ ಈ ಸಂಸ್ಥೆ ಪ್ರಕಟಿಸಿದೆ. ದುಬೈನ ಜೆಬೆಲ್ ಅಲಿ ಬಂದರು ಮತ್ತು ಕುವೈತ್‌ನ ಅಲಿ ಅಲ್ ಸಾಲೆಮ್ ವಾಯುನೆಲೆಯಿಂದ ಹೊಗೆ ಏಳುತ್ತಿರುವ ದೃಶ್ಯಗಳು ಜಾಗತಿಕವಾಗಿ ಚರ್ಚೆಗೆ ಕಾರಣವಾಗಿವೆ. ಇತ್ತೀಚಿನ ಚಿತ್ರವೊಂದರಲ್ಲಿ ಇರಾನ್‌ನ ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್ (ಐಆರ್ಜಿಸಿ) ಕಟ್ಟಡವೊಂದು ನೆಲಸಮವಾಗಿರುವುದನ್ನು ಕೂಡ ತೋರಿಸಲಾಗಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಈ ಬಗ್ಗೆ ಪ್ರತಿಕ್ರಿಯಿಸಿರುವ ಚೀನಾದ ರಕ್ಷಣಾ ತಜ್ಞರು, ಈ ಫೋಟೋಗಳು ಅಮೆರಿಕದ ಉಪಗ್ರಹಗಳ ದತ್ತಾಂಶವನ್ನೇ ಆಧರಿಸಿರಬಹುದು ಎಂದು ಅಂದಾಜಿಸಿದ್ದಾರೆ. ತಂತ್ರಜ್ಞಾನದ ಈ ಯುಗದಲ್ಲಿ ಯಾವುದನ್ನೂ ಮುಚ್ಚಿಡಲು ಸಾಧ್ಯವಿಲ್ಲ ಎಂಬುದು ಇದರಿಂದ ಸಾಬೀತಾಗಿದೆ. ಈ ಬೆಳವಣಿಗೆಯಿಂದಾಗಿ ಚೀನಾದ ಬೇಹುಗಾರಿಕಾ ಸಾಮರ್ಥ್ಯ ಜಗತ್ತಿಗೆ ಪರಿಚಯವಾದಂತಾಗಿದೆ ಎಂದು ವಿಶ್ಲೇಷಿಸಲಾಗುತ್ತಿದೆ.

ಮಿಜಾರ್ ವಿಜನ್ ಸಂಸ್ಥೆಯು ಕೃತಕ ಬುದ್ಧಿಮತ್ತೆ ಬಳಸಿ ಸಮುದ್ರದಲ್ಲಿನ ಹಡಗುಗಳ ಗುರುತಿಸುವಿಕೆ ಮತ್ತು ಭೌಗೋಳಿಕ ಬದಲಾವಣೆಗಳನ್ನು ಪತ್ತೆಹಚ್ಚುವಲ್ಲಿ ಪರಿಣತಿ ಹೊಂದಿದ್ದು, ಈಗ ರಕ್ಷಣಾ ವಲಯದಲ್ಲಿ ಹೊಸ ಸಂಚಲನ ಮೂಡಿಸಿದೆ.

For Latest News Updates, Join Our Whatsapp Community🚩
RELATED ARTICLES

LEAVE A REPLY

Please enter your comment!
Please enter your name here

Most Popular