ನಿನ್ನೆ ( ಫೆಬ್ರವರಿ 24 ) ಪಲ್ಲೆಕೆಲೆ ಅಂತಾರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆದ ಐಸಿಸಿ ಪುರುಷರ ಟಿ ಟ್ವೆಂಟಿ ವಿಶ್ವಕಪ್ 2026ರ ಪಾಕಿಸ್ತಾನ ಹಾಗೂ ಇಂಗ್ಲೆಂಡ್ ತಂಡಗಳ ನಡುವಿನ ಸೂಪರ್ 8 ಪಂದ್ಯದಲ್ಲಿ ಇಂಗ್ಲೆಂಡ್ 2 ವಿಕೆಟ್ಗಳ ಗೆಲುವನ್ನು ಸಾಧಿಸಿತು.
ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಪಾಕಿಸ್ತಾನದ 20 ಓವರ್ಗಳಲ್ಲಿ 9 ವಿಕೆಟ್ ನಷ್ಟಕ್ಕೆ 164 ರನ್ ಕೆಲಹಾಕಿ ಇಂಗ್ಲೆಂಡ್ಗೆ 165 ರನ್ಗಳ ಗುರಿಯನ್ನು ನೀಡಿತ್ತು. ಈ ಗುರಿಯನ್ನು ಬೆನ್ನಟ್ಟಿದ ಇಂಗ್ಲೆಂಡ್ ಬೇಗನೆ ಮೂರು ವಿಕೆಟ್ ಕಳೆದುಕೊಂಡರೂ ನಾಯಕ ಹ್ಯಾರಿ ಬ್ರೂಕ್ ಶತಕದ ನೆರವಿನಿಂದ 19.1 ಓವರ್ಗಳಲ್ಲಿ 8 ವಿಕೆಟ್ ನಷ್ಟಕ್ಕೆ 166 ರನ್ ಕಲೆಹಾಕಿತು.
ಪಾಕಿಸ್ತಾನ ನೀಡಿದ ಈ ಗುರಿಯನ್ನು ಬೆನ್ನಟ್ಟಿದ್ದ ಇಂಗ್ಲೆಂಡ್ ಕೇವಲ 35 ರನ್ಗೆ ತನ್ನ 3 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತ್ತು. ಬೆನ್ನಲ್ಲೇ ಟಾಮ್ ಬ್ಯಾಂಟನ್ ಸಹ ವಿಕೆಟ್ ಒಪ್ಪಿಸಿದ ಕಾರಣ ಇಂಗ್ಲೆಂಡ್ ಕೇವಲ 58 ರನ್ಗೆ 4 ವಿಕೆಟ್ ಕಳೆದುಕೊಂಡಿತು.
ಹೀಗೆ ಒಂದೆಡೆ ವಿಕೆಟ್ ಬೀಳುತ್ತಿದ್ದರೆ ಮತ್ತೊಂದೆಡೆ ಇಂಗ್ಲೆಂಡ್ ನಾಯಕ, 27ರ ಯುವಕ ಹ್ಯಾರಿ ಬ್ರೂಕ್ ಎದೆಗುಂದದೇ 50 ಎಸೆತಗಳಲ್ಲಿ ಶತಕ ಬಾರಿಸಿ ಪಾಕಿಸ್ತಾನದ ಹಸ್ತದಲ್ಲಿದ್ದ ಪಂದ್ಯವನ್ನು ಕಿತ್ತುಕೊಂಡರು.
ಮೊದಲ ಎಸೆತದಲ್ಲೇ ಸ್ಪೋಟಕ ಆಟಗಾರ ಫಿಲ್ ಸಾಲ್ಟ್ ವಿಕೆಟ್ ಪಡೆದ ಪಾಕ್ ಬೇಗನೆ ಮೊದಲ ನಾಲ್ಕು ವಿಕೆಟ್ಗಳನ್ನು ಉರಳಿಸಿದ್ದನ್ನು ಕಂಡು ಈ ಪಂದ್ಯವನ್ನು ಪಾಕ್ ಸುಲಭವಾಗಿ ಗೆಲ್ಲಲಿದೆ ಎಂದೇ ಎಲ್ಲರೂ ಊಹಿಸಿದ್ದರು. ಪಾಕ್ ಆಟಗಾರರು ಸಹ ಅದೇ ವಿಶ್ವಾಸದಲ್ಲಿ ಆಟವನ್ನು ಮುಂದುವರಿಸಿದ್ದರು. ಆದರೆ ಹ್ಯಾರಿ ಬ್ರೂಕ್ ಆಟ ಅವರ ಆಸೆಗೆ ತಣ್ಣೀರು ಎರೆಚಿತ್ತು.
ಹೀಗೆ ಪಾಕಿಸ್ತಾನಕ್ಕೆ ನಿರಾಸೆ ಮೂಡಿಸಿದ ಬ್ರೂಕ್ ಆಟ ಈ ಹಿಂದೆ 2022ರ ಟಿ ಟ್ವೆಂಟಿ ವಿಶ್ವಕಪ್ ಟೂರ್ನಿಯಲ್ಲಿ ವಿರಾಟ್ ಕೊಹ್ಲಿ ಆಡಿದ್ದ ಆಟವನ್ನು ನೆನಪಿಸಿತು. ಪಾಕಿಸ್ತಾನ ನೀಡಿದ್ದ 160 ರನ್ಗಳ ಗುರಿಯನ್ನು ಬೆನ್ನಟ್ಟಿದ್ದ ಭಾರತ ಕೇವಲ 31 ರನ್ಗೆ 4 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತ್ತು. ಆದರೆ ನೆಲಕಚ್ಚಿ ನಿಂತ ವಿರಾಟ್ ಕೊಹ್ಲಿ 53 ಎಸೆತಗಳಲ್ಲಿ ಅಜೇಯ 82 ರನ್ ಬಾರಿಸಿ ತಂಡವನ್ನು ಗೆಲುವಿನ ದಡ ಸೇರಿಸಿದ್ದರು. ಅಂದು ಸುಲಭವಾಗಿ ಗೆದ್ದುಬಿಡುತ್ತೇವೆ ಎಂದುಕೊಂಡಿದ್ದ ಪಾಕಿಸ್ತಾನಕ್ಕೆ ಶಾಕ್ ನೀಡಿದ್ದರು.

