ಜಾರ್ಖಂಡ್‌ನಲ್ಲಿ ನಡೆದ ಅಪರೂಪದ ಘಟನೆಯೊಂದು ಪ್ರಸ್ತುತ ಸಾಮಾಜಿಕ ಜಾಲತಾಣಗಳಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದೆ. ಇಂಜಿನಿಯರಿಂಗ್ ಪದವಿ ಮುಗಿಸಿ ಪ್ರತಿಷ್ಠಿತ ಕಂಪನಿಯಲ್ಲಿ ತಿಂಗಳಿಗೆ ನಲವತ್ತು ಸಾವಿರ ರೂಪಾಯಿ ವೇತನ ಪಡೆಯುತ್ತಿದ್ದ ಯುವಕನೊಬ್ಬ, ಆ ಕೆಲಸವನ್ನು ತೊರೆದು ಬೈಕ್ ಟ್ಯಾಕ್ಸಿ ಚಾಲಕನಾಗಿ ಬದಲಾಗಿರುವ ಸುದ್ದಿ ಈಗ ಎಲ್ಲರ ಗಮನ ಸೆಳೆಯುತ್ತಿದೆ.
ಬೈಕ್ ಟ್ಯಾಕ್ಸಿ ಸೇವೆಯನ್ನು ಬಳಸಿದ ಮಹಿಳಾ ಪ್ರಯಾಣಿಕರೊಬ್ಬರು ಪ್ರಯಾಣದ ವೇಳೆ ಚಾಲಕನೊಂದಿಗೆ ನಡೆಸಿದ ಸಂಭಾಷಣೆಯನ್ನು ಸಾಮಾಜಿಕ ಜಾಲತಾಣವಾದ ಎಕ್ಸ್‌ನಲ್ಲಿ ಹಂಚಿಕೊಂಡಿದ್ದಾರೆ. 198 ರೂಪಾಯಿ ದರದ ಪ್ರಯಾಣದ ವೇಳೆ ಮಾತನಾಡಿದ ಚಾಲಕ, ತಾನು ಪ್ರಸ್ತುತ ಬೈಕ್ ಟ್ಯಾಕ್ಸಿ ಓಡಿಸುವ ಮೂಲಕ ತಿಂಗಳಿಗೆ ಒಂದು ಲಕ್ಷದಿಂದ ಒಂದು ಲಕ್ಷದ ಇಪ್ಪತ್ತು ಸಾವಿರ ರೂಪಾಯಿಯವರೆಗೆ ಸಂಪಾದಿಸುತ್ತಿರುವುದಾಗಿ ತಿಳಿಸಿದ್ದಾನೆ. ಈ ಮಾತುಗಳನ್ನು ಕೇಳಿ ಪ್ರಯಾಣಿಕರು ಸಂಪೂರ್ಣವಾಗಿ ಆಶ್ಚರ್ಯಚಕಿತರಾಗಿದ್ದಾರೆ.
ಇಂಜಿನಿಯರಿಂಗ್ ಕೆಲಸ ಬಿಡಲು ಕಾರಣವೇನು ?
ತನ್ನ ಹಳೆಯ ಉದ್ಯೋಗದ ಬಗ್ಗೆ ಮಾತನಾಡಿದ ಚಾಲಕ, ಇಂಜಿನಿಯರಿಂಗ್ ಕೆಲಸದಲ್ಲಿ ಸಿಗುತ್ತಿದ್ದ ನಲವತ್ತು ಸಾವಿರ ರೂಪಾಯಿ ಸಂಬಳವು ಕುಟುಂಬದ ಮಾಸಿಕ ವೆಚ್ಚಗಳನ್ನು ಸರಿದೂಗಿಸಲು ಸಾಕಾಗುತ್ತಿರಲಿಲ್ಲ ಎಂದು ವಿವರಿಸಿದ್ದಾನೆ. ಕೇವಲ ಉದ್ಯೋಗದ ಹುದ್ದೆ ಮತ್ತು ಸಾಮಾಜಿಕ ಗೌರವಕ್ಕಾಗಿ ಕಡಿಮೆ ವೇತನಕ್ಕೆ ದುಡಿಯುವ ಬದಲು, ಹೆಚ್ಛು ಆದಾಯ ತಂದುಕೊಡುವ ವೃತ್ತಿಯನ್ನು ಆಯ್ಕೆ ಮಾಡಿಕೊಳ್ಳುವುದು ಸೂಕ್ತ ಎಂದು ಭಾವಿಸಿ ಈ ನಿರ್ಧಾರಕ್ಕೆ ಬಂದಿರುವುದಾಗಿ ಹೇಳಿದ್ದಾನೆ.
ಪ್ರತಿದಿನ ನಾಲ್ಕು ಸಾವಿರ ರೂಪಾಯಿಯವರೆಗೆ ಆದಾಯ ಗಳಿಸುತ್ತಿದ್ದು, ಪ್ರಸ್ತುತ ಸ್ವಂತ ಊರಿನಲ್ಲೇ ಇದ್ದುಕೊಂಡು ಕೆಲಸ ಮಾಡುತ್ತಿರುವುದು ತನಗೆ ಅತ್ಯಂತ ಸಂತಸ ತಂದಿದೆ ಎಂದು ಆತ ಹಂಚಿಕೊಂಡಿದ್ದಾನೆ. “ಈಗ ನಾನು ನನ್ನ ಸ್ವಂತ ನಗರದಲ್ಲೇ ಕೆಲಸ ಮಾಡುತ್ತಿದ್ದೇನೆ ಮತ್ತು ನನ್ನ ಸಂಪಾದನೆಯಿಂದ ತುಂಬಾ ಸಂತುಷ್ಟನಾಗಿದ್ದೇನೆ. ಉತ್ತಮವಾಗಿ ಗಳಿಸುತ್ತಿದ್ದೇನೆ ಮತ್ತು ಸ್ವಂತ ಊರಿನಲ್ಲೇ ಇರಲು ಸಾಧ್ಯವಾಗುತ್ತಿದೆ” ಎಂದು ಚಾಲಕ ಹೆಮ್ಮೆಯಿಂದ ಹೇಳಿಕೊಂಡಿದ್ದಾನೆ.
ಯಶಸ್ಸಿನ ವ್ಯಾಖ್ಯಾನದ ಬಗ್ಗೆ ಚರ್ಚೆ
ಈ ಘಟನೆಯನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡ ಮಹಿಳೆ, ಉದ್ಯೋಗದ ಯಶಸ್ಸಿನ ಕುರಿತು ಸಮಾಜದಲ್ಲಿರುವ ಸಾಂಪ್ರದಾಯಿಕ ಕಲ್ಪನೆಗಳ ಬಗ್ಗೆ ಮರುಚಿಂತನೆ ನಡೆಸುವಂತೆ ಮಾಡಿದೆ ಎಂದು ಬರೆದುಕೊಂಡಿದ್ದಾರೆ. ದೊಡ್ಡ ಕಂಪನಿಯ ಹುದ್ದೆ ಮತ್ತು ಪದವಿಗಳು ಸಾಮಾಜಿಕ ಗೌರವ ತಂದುಕೊಡಬಹುದು, ಆದರೆ ಅವು ದಿನನಿತ್ಯದ ಜೀವನ ನಿರ್ವಹಣೆಗೆ ಅಗತ್ಯವಿರುವಷ್ಟು ಆದಾಯ ನೀಡದಿದ್ದರೆ ಪ್ರಯೋಜನವಿಲ್ಲ ಎಂಬುದಕ್ಕೆ ಈ ಘಟನೆ ಉದಾಹರಣೆಯಾಗಿದೆ.
ಆಪ್ ಆಧಾರಿತ ಚಾಲನೆಯಲ್ಲಿ ಗಳಿಸುವ ಆದಾಯವು ನಗರ, ಕೆಲಸದ ಅವಧಿ, ಇಂಧನ ವೆಚ್ಚ ಮತ್ತು ವಾಹನದ ನಿರ್ವಹಣಾ ವೆಚ್ಚಗಳನ್ನು ಅವಲಂಬಿಸಿರುತ್ತದೆ. ಪ್ರತಿಯೊಬ್ಬರಿಗೂ ಇದೇ ಮಟ್ಟದ ಆದಾಯ ಸಿಗದಿರಬಹುದು. ಆದಾಗ್ಯೂ, ಕೇವಲ ಉದ್ಯೋಗದ ಹೆಸರು ಮತ್ತು ಹುದ್ದೆಗಿಂತ ಕುಟುಂಬದ ಅಗತ್ಯತೆಗಳು ಹಾಗೂ ಜೀವನದ ನೆಮ್ಮದಿ ಮುಖ್ಯ ಎಂದು ತೋರಿಸಿಕೊಟ್ಟ ಯುವಕನ ಈ ನಿರ್ಧಾರಕ್ಕೆ ಸಾರ್ವಜನಿಕ ವಲಯದಲ್ಲಿ ವ್ಯಾಪಕ ಮೆಚ್ಚುಗೆ ವ್ಯಕ್ತವಾಗುತ್ತಿದೆ.

