ಚಿಕ್ಕಮಗಳೂರು : ಮಲೆನಾಡಿನ ಭಾಗದಲ್ಲಿ ಕಾಡಾನೆಗಳ ಅಟ್ಟಹಾಸ ಮಿತಿಮೀರಿದ್ದು, ಆನೆ ದಾಳಿಗೆ ಇಬ್ಬರು ಬಲಿಯಾದ ಬೆನ್ನಲ್ಲೇ ಚಿಕ್ಕಮಗಳೂರು ಜಿಲ್ಲೆಯ 12 ಗ್ರಾಮಗಳಲ್ಲಿ ಜಿಲ್ಲಾಡಳಿತ ಕಟ್ಟುನಿಟ್ಟಿನ ನಿಷೇಧಾಜ್ಞೆ (ಸೆಕ್ಷನ್ 144) ಜಾರಿಗೊಳಿಸಿದೆ.
ಜಿಲ್ಲೆಯಲ್ಲಿ ಕಾಡಾನೆಗಳ ಹಾವಳಿ ಮಿತಿಮೀರಿರುವ ಹಿನ್ನೆಲೆಯಲ್ಲಿ ಸಾರ್ವಜನಿಕರ ರಕ್ಷಣೆ ಮತ್ತು ಶಾಂತಿ ಸುವ್ಯವಸ್ಥೆ ಕಾಪಾಡುವ ದೃಷ್ಟಿಯಿಂದ ಚಿಕ್ಕಮಗಳೂರು ತಾಲೂಕಿನಾದ್ಯಂತ ಒಟ್ಟು 12 ಗ್ರಾಮಗಳಲ್ಲಿ ನಿಷೇಧಾಜ್ಞೆ (ಸೆಕ್ಷನ್ 163, BNSS) ಜಾರಿಗೊಳಿಸಿ ತಾಲೂಕು ದಂಡಾಧಿಕಾರಿಗಳು ಆದೇಶ ಹೊರಡಿಸಿದ್ದಾರೆ.
ಸತತವಾಗಿ ನಡೆಯುತ್ತಿರುವ ಆನೆಗಳ ದಾಳಿಯಿಂದ ಗ್ರಾಮಸ್ಥರು ತೀವ್ರ ಆತಂಕಕ್ಕೆ ಒಳಗಾಗಿದ್ದು, ಪರಿಸ್ಥಿತಿ ಉದ್ವಿಗ್ನಗೊಂಡಿರುವ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕಾ ಕ್ರಮವಾಗಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. ಪುಂಡಾನೆಗಳನ್ನು ಸೆರೆಹಿಡಿಯಲು ಅರಣ್ಯ ಇಲಾಖೆ ‘ಆಪರೇಷನ್ ಎಲಿಫೆಂಟ್’ ಕಾರ್ಯಾಚರಣೆಯನ್ನು ಚುರುಕುಗೊಳಿಸಿದ್ದು, ಕಾರ್ಯಾಚರಣೆಗೆ ಅಡ್ಡಿಯಾಗದಂತೆ ಜನಸಂಚಾರವನ್ನು ನಿಯಂತ್ರಿಸಲು ಈ ಕರ್ಫ್ಯೂ ವಿಧಿಸಲಾಗಿದೆ. ಸಂಜೆ 4 ಗಂಟೆಯಿಂದ ಬೆಳಗ್ಗೆ 6 ವರೆಗೆ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ.
ನಿಷೇಧಾಜ್ಞೆ ಜಾರಿಯಾದ ಪ್ರದೇಶಗಳು: ಚಿಕ್ಕಮಗಳೂರು ವಲಯ ವ್ಯಾಪ್ತಿಯ ಮುಗ್ತಿಹಳ್ಳಿ, ವಸ್ತಾರೆ, ಮಳಲೂರು, ದಂಟರಮಕ್ಕಿ, ನಲ್ಲೂರು, ಕಾಲೇನಹಳ್ಳಿ, ಉಕ್ಕುಂದ, ಗಂಟೆಹಳ್ಳಿ, ಜೋಳದಾಳ್, ದಂಬದಹಳ್ಳಿ, ಬಿಕ್ಕೋಡು ಮತ್ತು ಹಿರೇಗುಂದ ಗ್ರಾಮಗಳಲ್ಲಿ ಈ ಆದೇಶ ಅನ್ವಯವಾಗಲಿದೆ.
ನಿಷೇಧಾಜ್ಞೆ ಅವಧಿ: 1. ದಿನಾಂಕ 24-02-2026ರ ಸಂಜೆ 04:00 ಗಂಟೆಯಿಂದ 25-02-2026ರ ಬೆಳಗ್ಗೆ 08:00 ಗಂಟೆಯವರೆಗೆ. 2. ದಿನಾಂಕ 25-02-2026ರ ಸಂಜೆ 04:00 ಗಂಟೆಯಿಂದ 26-02-2026ರ ಬೆಳಗ್ಗೆ 08:00 ಗಂಟೆಯವರೆಗೆ.
ಸಾರ್ವಜನಿಕರಿಗೆ ನಿರ್ಬಂಧಗಳು:
- ನಿಗದಿತ ಪ್ರದೇಶಗಳಲ್ಲಿ ಐದಕ್ಕಿಂತ ಹೆಚ್ಚು ಜನರು ಗುಂಪು ಸೇರುವುದನ್ನು ನಿಷೇಧಿಸಲಾಗಿದೆ.
- ಯಾವುದೇ ಮಾರಕಾಸ್ತ್ರಗಳನ್ನು ಹಿಡಿದು ಓಡಾಡುವಂತಿಲ್ಲ.
- ಪಟಾಕಿ ಅಥವಾ ಯಾವುದೇ ಸ್ಫೋಟಕ ವಸ್ತುಗಳ ಬಳಕೆಯನ್ನು ನಿರ್ಬಂಧಿಸಲಾಗಿದೆ.
- ಕಾನೂನು ಬಾಹಿರ ಚಟುವಟಿಕೆಗಳಿಗೆ ಕಟ್ಟುನಿಟ್ಟಿನ ನಿಷೇಧ ಹೇರಲಾಗಿದೆ.
ಈ ಆದೇಶವು ಕರ್ತವ್ಯದಲ್ಲಿರುವ ಸರ್ಕಾರಿ ಅಧಿಕಾರಿಗಳು ಮತ್ತು ನೌಕರರಿಗೆ ಅನ್ವಯಿಸುವುದಿಲ್ಲ ಎಂದು ಸ್ಪಷ್ಟಪಡಿಸಲಾಗಿದೆ. ಕಾಡಾನೆಗಳ ಸಂಚಾರ ಹೆಚ್ಚಾಗಿರುವ ಈ ಅವಧಿಯಲ್ಲಿ ಸಾರ್ವಜನಿಕರು ಎಚ್ಚರಿಕೆಯಿಂದ ಇರಲು ಮತ್ತು ಸರ್ಕಾರದೊಂದಿಗೆ ಸಹಕರಿಸಲು ಕೋರಲಾಗಿದೆ.
ಚಿಕ್ಕಮಗಳೂರು ತಾಲ್ಲೂಕಿನ ಹುಣಸೇಹಳ್ಳಿ ಸಮೀಪದ ಹ್ಯಾರಂಬಿಪುರ ಗ್ರಾಮದಲ್ಲಿ ಭಾನುವಾರ (ಫೆಬ್ರವರಿ 22, 2026) ಬೆಳಿಗ್ಗೆ ಕಾಡಾನೆ ದಾಳಿ ನಡೆಸಿದೆ. ಈ ದಾಳಿಯಲ್ಲಿ ವಿಜಯನಗರ ಜಿಲ್ಲೆಯ ಕೂಡ್ಲಗಿ ತಾಲ್ಲೂಕಿನ ಬೋರಮ್ಮ (45) ಎಂಬ ಕೂಲಿ ಕಾರ್ಮಿಕ ಮಹಿಳೆ ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಒಂದು ವಾರದ ಅವಧಿಯಲ್ಲಿ ಇದು ಎರಡನೇ ಸಾವಾಗಿದ್ದರಿಂದ (ಫೆಬ್ರವರಿ 16 ರಂದು ಹಾವೇರಿಯ ಯಲ್ಲಪ್ಪ ಎಂಬುವವರು ಮೃತಪಟ್ಟಿದ್ದರು) ಗ್ರಾಮಸ್ಥರು ರೊಚ್ಚಿಗೆದ್ದಿದ್ದಾರೆ. ಮೃತದೇಹವನ್ನು ಕಡಬಗೆರೆಯ ರಾಜ್ಯ ಹೆದ್ದಾರಿ 27ರ ಮಧ್ಯೆ ಇಟ್ಟು ದಿನವಿಡೀ ರಸ್ತೆ ತಡೆ ನಡೆಸಿದರು.ಘಟನೆ ಹಿನ್ನೆಲೆ ಶೃಂಗೇರಿ, ಕೊಪ್ಪ, ಎನ್ ಆರ್ ಪುರ ತಾಲೂಕು ಬಂದ್ ಮಾಡಿ ಜನರು ಆಕ್ರೋಶ ಹೊರ ಹಾಕಿದ್ದರು.

