ಖಾಲಿ ಇರುವ ಸರ್ಕಾರಿ ಹುದ್ದೆಗಳ ನೇಮಕಾತಿ ಈಗ ರಾಜ್ಯದಲ್ಲಿ ಭಾರೀ ಚರ್ಚೆಯ ವಿಚಾರ. ಧಾರವಾಡದಲ್ಲಿ ಮಂಗಳವಾರ ನಡೆದ ಬೃಹತ್ ಹೋರಾಟಕ್ಕೆ ಪ್ರತಿಕ್ರಿಯೆ ನೀಡಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ, “ರಾಜ್ಯದಲ್ಲಿ ಸರ್ಕಾರಿ ಹುದ್ದೆಗಳು ಭಾರೀ ಪ್ರಮಾಣದಲ್ಲಿ ಭರ್ತಿಯಾಗದೆ ಉಳಿಯಲು ಹಿಂದಿನ ಬಿಜೆಪಿ ಸರ್ಕಾರ ನೇಮಕಾತಿ ಪ್ರಕ್ರಿಯೆಯಲ್ಲಿ ಎಸಗಿದ ಹಗರಣಗಳು ಕಾರಣ” ಎಂದು ಸಿದ್ದರಾಮಯ್ಯ ಅರೋಪಿಸಿದ್ದರು.
“ನಮ್ಮ ಸರ್ಕಾರದ ಅವಧಿಯಲ್ಲಿ ಕಾನೂನಾತ್ಮಕ ತೊಡಕಿನ ನಡುವೆಯೂ 40,000 ಕ್ಕೂ ಅಧಿಕ ಹುದ್ದೆಗಳಿಗೆ ನೇಮಕಾತಿ ಮಾಡಲಾಗಿದೆ. ಮುಂದೆ ಬಾಕಿಯಿರುವ ಹುದ್ದೆಗಳಿಗೂ ಹಂತ ಹಂತವಾಗಿ ನೇಮಕಾತಿ ಮಾಡಲಾಗುವುದು” ಎಂದು ಭರವಸೆ ನೀಡಿದ್ದರು.
ಬಿ.ವೈ.ವಿಜಯೇಂದ್ರ ತಿರುಗೇಟು: ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿಕೆಗೆ ಕರ್ನಾಟಕ ಬಿಜೆಪಿ ಅಧ್ಯಕ್ಷ ಬಿ.ವೈ.ವಿಜಯೇಂದ್ರ ತಿರುಗೇಟು ನೀಡಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಾಕಿರುವ ಅವರು, ‘ಸುಳ್ಳಿನ ಬಂಡಿ ಎಂದಿಗೂ ಶಾಶ್ವತವಲ್ಲ ಮಾನ್ಯ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೇ! ಸದನದ ಒಳಗೊಂದು ಮಾಹಿತಿ, ಹೊರಗೆ ಸುಳ್ಳಿನ ಪ್ರದರ್ಶನ. ಇನ್ನೂ ಎಷ್ಟು ದಿನ ಜನರನ್ನು ವಂಚಿಸುವಿರಿ?’ ಎಂದು ಪ್ರಶ್ನೆ ಮಾಡಿದ್ದಾರೆ.
‘ವಿಧಾನಸಭೆಯಲ್ಲಿ ನಿಮ್ಮ ಕರ್ನಾಟಕ ಕಾಂಗ್ರೆಸ್ ಸರ್ಕಾರವೇ ನೀಡಿದ ಅಧಿಕೃತ ಅಂಕಿ-ಅಂಶಗಳ ಪ್ರಕಾರ, ನಿಮ್ಮ ಅಧಿಕಾರಾವಧಿಯ 3 ವರ್ಷಗಳಲ್ಲಿ ಪೂರ್ಣಗೊಂಡಿರುವ ಸರ್ಕಾರಿ ನೇಮಕಾತಿ ಕೇವಲ 8,157! ಆದರೆ ನೀವೇ ಜನರ ಮುಂದೆ, 40,000 ಹುದ್ದೆ ಭರ್ತಿ ಮಾಡಿದ್ದೇವೆ ಎಂದು ಹಸಿ ಸುಳ್ಳು ಹೇಳುವುದು ರಾಜ್ಯದ ನಿರುದ್ಯೋಗಿ ಯುವಜನತೆಗೆ ಮಾಡುತ್ತಿರುವ ನೇರ ವಂಚನೆಯಲ್ಲವೇ?’ ಎಂದು ವಿಜಯೇಂದ್ರ ಕೇಳಿದ್ದಾರೆ.
‘ರಾಜ್ಯದ ಅತಿ ದೀರ್ಘಾವಧಿ ಮುಖ್ಯಮಂತ್ರಿಗಳಾಗಿರುವ ತಾವೇ ಈ ರೀತಿ ರಾಜ್ಯದ ಜನತೆಯ ದಾರಿ ತಪ್ಪಿಸಿದರೆ, ಮದ್ದೇ ಮುಳ್ಳಾದರೆ ಜನರ ಪಾಡೇನು? ದಯವಿಟ್ಟು ಸುಳ್ಳಿನ ಪ್ರಚಾರ ನಿಲ್ಲಿಸಿ, ಯುವಜನರ ಆಕ್ರೋಶ, ನೋವನ್ನು ಅರ್ಥಮಾಡಿಕೊಳ್ಳಿ. ಪರಿಸ್ಥಿತಿ ಕೈಮೀರುವ ಮುನ್ನ ಬಾಕಿ ಇರುವ ನೇಮಕಾತಿ ಪ್ರಕ್ರಿಯೆಗಳನ್ನು ಕೂಡಲೇ ಪೂರ್ಣಗೊಳಿಸಿ, ನಮ್ಮ ಯುವಜನತೆಗೆ ನ್ಯಾಯ ಒದಗಿಸಿ!’ ಎಂದು ಆಗ್ರಹಿಸಿದ್ದಾರೆ.
ಸಿದ್ದರಾಮಯ್ಯ ತಮ್ಮ ಪೋಸ್ಟ್‌ನಲ್ಲಿ, ’ಧಾರವಾಡದಲ್ಲಿ ಸರ್ಕಾರಿ ಉದ್ಯೋಗಾಕಾಂಕ್ಷಿಗಳು ನಡೆಸುತ್ತಿರುವ ಪ್ರತಿಭಟನೆಯನ್ನು ನಾನು ಗಂಭೀರವಾಗಿ ಪರಿಗಣಿಸಿದ್ದೇನೆ. ರಾಜ್ಯದ ಸರ್ಕಾರಿ ಉದ್ಯೋಗಾಕಾಂಕ್ಷಿಗಳು ಅನುಭವಿಸುತ್ತಿರುವ ಆತಂಕ, ನಿರಾಶೆ ಮತ್ತು ಅನಿಶ್ಚಿತತೆಯನ್ನು ನಾನು ಅರ್ಥಮಾಡಿಕೊಳ್ಳಬಲ್ಲೆ. ಉದ್ಯೋಗಕ್ಕಾಗಿ ಸಲ್ಲಿಸುವ ಪ್ರತಿ ಅರ್ಜಿಯ ಹಿಂದೆ ಒಂದು ಕನಸಿರುತ್ತದೆ, ಕುಟುಂಬದ ನಿರೀಕ್ಷೆ, ವರ್ಷಗಳ ಕಠಿಣ ಪರಿಶ್ರಮ ಮತ್ತು ನಾಡಿಗಾಗಿ ಸೇವೆ ಸಲ್ಲಿಸುವ ಆಕಾಂಕ್ಷೆ ಇರುತ್ತದೆ. ಯುವಜನರ ಆತಂಕ – ಅಹವಾಲುಗಳು ನನ್ನನ್ನು ತಲುಪಿದೆ. ಅವರ ಭವಿಷ್ಯ ನಮಗೂ ಅತ್ಯಂತ ಮಹತ್ವದ್ದಾಗಿದೆ’ ಎಂದು ಹೇಳಿದ್ದರು.
‘ನಾವು ಅಧಿಕಾರಕ್ಕೆ ಬಂದಾಗ, 2.64 ಲಕ್ಷಕ್ಕೂ ಹೆಚ್ಚು ಸರ್ಕಾರಿ ಹುದ್ದೆಗಳು ಖಾಲಿಯಿದ್ದವು. ಇದು ಒಂದೆರೆಡು ದಿನಗಳಲ್ಲಿ ಸೃಷ್ಟಿಯಾದುದಲ್ಲ; ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿ ಸಕಾಲದಲ್ಲಿ ನೇಮಕಾತಿಗಳನ್ನು ಆರಂಭಿಸದಿರುವುದು ಮತ್ತು ಖಾಲಿ ಹುದ್ದೆಗಳನ್ನು ಭರ್ತಿ ಮಾಡಲು ಯಾವುದೇ ಸೂಕ್ತ ಯೋಜನೆಯನ್ನು ರೂಪಿಸದಿರುವುದರಿಂದ ಇಷ್ಟು ದೊಡ್ಡ ಸಂಖ್ಯೆಯ ಸರ್ಕಾರಿ ಹುದ್ದೆಗಳು ಖಾಲಿಯಿದ್ದವು. ವಿರೋಧ ಪಕ್ಷದ ನಾಯಕರು ನಿರಪರಾಧಿ ವಿದ್ಯಾರ್ಥಿಗಳಿಗೆ ತಪ್ಪು ಮಾರ್ಗದರ್ಶನ ಮಾಡಿ ತಮ್ಮ ರಾಜಕೀಯ ಸ್ವಾರ್ಥದ ಈಡೇರಿಕೆಗಾಗಿ ಬಳಸಿಕೊಳ್ಳುತ್ತಿರುವುದು ವಿಷಾದನೀಯ’ ಎಂದು ತಿಳಿಸಿದ್ದರು.

