ಬೆಂಗಳೂರು: ಎಸ್ ಐಆರ್ ಪ್ರಕ್ರಿಯೆ ಹಾಗೂ ಫಾರಂ 7 ವಿಚಾರವಾಗಿ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಗಂಭೀರ ಆರೋಪ ಮಾಡಿದ್ದಾರೆ. ಕರ್ನಾಟಕದಲ್ಲಿ 50-60 ಲಕ್ಷ ಮತದಾರರನ್ನು ಕೈಬಿಡಲು ಬಿಜೆಪಿ ಜೆಡಿಎಸ್ ನಾಯಕರು ಷಡ್ಯಂತ್ರ ನಡೆಸಿದ್ದಾರೆ ಎಂದು ಕಿಡಿಕಾರಿದರು.
ವಿಧಾನಸೌಧದಲ್ಲಿ ಸುದ್ದಿಗೋಷ್ಠಿ ನಡೆಸಿದ ಸಿಎಂ ಡಿ.ಕೆ.ಶಿವಕುಮಾರ್, ಫಾರಂ 7 ನಲ್ಲಿ ಮತದಾರರ ಹೆಸರು, ವಿಳಾಸ, ಎಪಿಕ್ ಸಂಖ್ಯೆ, ಸೇರಿ ಸಂಪೂರ್ಣ ಮಾಹಿತಿ ಮುದ್ರಿತ ಅರ್ಜಿಗಳನ್ನು ಸಲ್ಲಿಸಲಾಗಿದೆ. ಒಂದೊಂದು ವಿಧಾನ ಸಭಾ ಕ್ಷೇತ್ರಗಳಲ್ಲಿ 5 ಸಾವಿರದಿಂದ 10 ಸಾವಿರ ಫಾರಂ 7 ಮೂಲಕ ಅರ್ಜಿ ಸಲ್ಲಿಕೆಯಾಗಿವೆ. ಮತ ಡಿಲೀಟ್ ಮಾಡಲು ಬಿಜೆಪಿಯ ಒಬ್ಬೊಬ್ಬ ಕಾರ್ಯಕರ್ತರು 80, 90, 150, 200 ಅರ್ಜಿಗಳನ್ನು ಸಲ್ಲಿಸಿದ್ದಾರೆ. ಈ ಷಡ್ಯಂತ್ರದ ಹಿಂದೆ ಇರುವವರ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಬೇಕು, ತನಿಖೆಗೆ ಆದೇಶಿಸಬೇಕು. ಅಲ್ಲಿಯವರೆಗೂ ಚುನಾವಣಾ ಆಯೋಗ ಕಚೇರಿಯಿಂದ ನಾವು ಹೊರಬರುವುದಿಲ್ಲ ಎಂದು ಗುಡುಗಿದರು.
ಇಂದು ಸಚಿವ ಸಂಪುಟ ಸಭೆ ಇದೆಯಾದರೂ ನಮಗೆ ಮತದಾರರ ಹಕ್ಕು ರಕ್ಷಣೆ ಪ್ರಮುಖ ಆದ್ಯತೆಯಾಗಿದೆ. ಚುನಾವಣೆ ಗೆಲ್ಲಲಾಗದೆ, ಚುನಾವಣಾ ಆಯೋಗ ಎಸ್ಐಆರ್ ಮೂಲಕ ಅಕ್ರಮಕ್ಕೆ ಮುಂದಾಗಿದ್ದಾರೆ. ಬಡವರು, ಅಲ್ಪಸಂಖ್ಯಾತರ ಮತ ರಕ್ಷಣೆ ಮಾಡುವುದು ನನ್ನ ಕರ್ತವ್ಯ. ಮುಖ್ಯ ಚುನಾವಣಾ ಆಯುಕ್ತರು ಜ್ಞಾನೇಶ್ ಕುಮಾರ್ ಅವರಿಗೆ ಮಾಹಿತಿ ಇಲ್ಲದೆ ಈ ಷಡ್ಯಂತ್ರ ನಡೆಯಲು ಸಾಧ್ಯವಿಲ್ಲ ಎಂದರು.
ಎಸ್ಐಆರ್ ದೇಶದ ದೊಡ್ಡ ಫ್ರಾಡ್. ಮೊದಲು ಎಸ್ಐಆರ್ ರದ್ದಾಗಬೇಕು. ಮತದಾರರ ಹಕ್ಕು ರಕ್ಷಣೆ ಚುನಾವಣಾ ಆಯೋಗದ ಕರ್ತವ್ಯ. ಈ ಷಡ್ಯಂತ್ರದಲ್ಲಿ ಭಾಗಿಯಾದವರನ್ನು ಬಂಧಿಸಿ ಕಾನೂನು ಕ್ರಮ ಕೈಗೊಳ್ಳಬೇಕು. ಇದರಲ್ಲಿ ಭಾಗಿಯಾಗಿರುವವರು ಯಾರು? ಯಾವ ಪಕ್ಷದವರು? ಎಂದು ಬಹಿರಂಗವಾಗಬೇಕು ಎಂದರು.
ಮತಗಳ್ಳತನದ ವಿರುದ್ಧ ದೊಡ್ಡ ಐತಿಹಾಸಿಕ ಹೋರಾಟ ನಡೆಸಿದ್ದೇವೆ. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹಾಗೂ ಲೋಕಸಭೆ ಪ್ರತಿಪಕ್ಷ ನಾಯಕ ರಾಹುಲ್ ಗಾಂಧಿ ಹಲವು ವಿಚಾರಗಳನ್ನು ದೇಶದ ಗಮನಕ್ಕೆ ತಂದಿದ್ದಾರೆ. ಇದೀಗ ಇಡೀ ದೇಶದಾದ್ಯಂತ ದೊಡ್ಡ ಆಂದೋಲನ ನಡೆಯುತ್ತಿದೆ ಎಂದು ಡಿಕೆ ಶಿವಕುಮಾರ್ ಹೇಳಿದ್ದಾರೆ.
ಈಗ ಸುಮಾರು 4 ಕೋಟಿ ಮತದಾರರು ಉಳಿದುಕೊಂಡಿದ್ದಾರೆ. ಅವರನ್ನೂ ಮತದಾರರ ಪಟ್ಟಿಯಿಂದ ತೆಗೆದುಹಾಕಲು ಷಡ್ಯಂತ್ರ ನಡೆಯುತ್ತಿದೆ ಎಂದು ಸಿಎಂ ಆರೋಪಿಸಿದ್ದಾರೆ. ಪ್ರತಿಯೊಬ್ಬ ಮತದಾರರ ಹಕ್ಕನ್ನು ರಕ್ಷಿಸುವುದು ತಮ್ಮ ಜವಾಬ್ದಾರಿ ಎಂದಿರುವ ಅವರು, 45 ಲಕ್ಷಕ್ಕೂ ಹೆಚ್ಚು ಮತದಾರರಿಗೆ ನೋಟಿಸ್ ನೀಡಲಾಗಿದೆ ಎಂದು ತಿಳಿಸಿದ್ದಾರೆ.
ಎಸ್ಐಆರ್ ಆರಂಭವಾದ ಬಳಿಕ ಚುನಾವಣಾ ಆಯೋಗಕ್ಕೆ ತಾವು ಸಹಕಾರ ನೀಡಿದ್ದಾಗಿ ಡಿಕೆ ಶಿವಕುಮಾರ್ ಹೇಳಿದ್ದಾರೆ. ಎಸ್ಐಆರ್ ಕುರಿತು ಪಕ್ಷ ಹಾಗೂ ಸರ್ಕಾರದ ವತಿಯಿಂದಲೂ ಜಾಗೃತಿ ಮೂಡಿಸಲಾಗಿದೆ. ಮುಖ್ಯಮಂತ್ರಿಯಾಗಿ ಮತದಾನದ ಹಕ್ಕು ಉಳಿಸುವುದು ತಮ್ಮ ಜವಾಬ್ದಾರಿ ಎಂದಿದ್ದಾರೆ.
ಅಲ್ಪಸಂಖ್ಯಾತರು, ದಲಿತರು ಹಾಗೂ ಒಬಿಸಿ ಮತದಾರರನ್ನು ಗುರಿಯಾಗಿಸಿಕೊಂಡು ಹೆಸರುಗಳನ್ನು ಡಿಲೀಟ್ ಮಾಡಲು ಪ್ರಯತ್ನಿಸಲಾಗುತ್ತಿದೆ ಎಂದು ಡಿಕೆ ಶಿವಕುಮಾರ್ ಆರೋಪಿಸಿದ್ದಾರೆ. ವಿಜಯಪುರ ಜಿಲ್ಲೆಯ ಬಬಲೇಶ್ವರ ಕ್ಷೇತ್ರದಲ್ಲಿ ಒಂದೇ ಕ್ಷೇತ್ರದಲ್ಲಿ ಸುಮಾರು 15 ಸಾವಿರ ಮತದಾರರ ಹೆಸರುಗಳನ್ನು ಡಿಲೀಟ್ ಮಾಡಲು ಪ್ರಯತ್ನಿಸಲಾಗಿದೆ ಎಂದು ಹೇಳಿದ್ದಾರೆ. ಭಾಲ್ಕಿ ಕ್ಷೇತ್ರದಲ್ಲೂ 3 ಸಾವಿರಕ್ಕೂ ಹೆಚ್ಚು ಅರ್ಜಿಗಳು ಸಲ್ಲಿಕೆಯಾಗಿವೆ. ಬಳ್ಳಾರಿ ಗ್ರಾಮೀಣ ಕ್ಷೇತ್ರದಲ್ಲಿ 7 ಸಾವಿರಕ್ಕೂ ಹೆಚ್ಚು ಅರ್ಜಿಗಳು ಬಂದಿವೆ ಎಂದು ತಿಳಿಸಿದ್ದಾರೆ.
ಈ ಷಡ್ಯಂತ್ರದ ಕುರಿತು ಪ್ರಕಾಶ್ ರಾಜ್ ತನಿಖೆ ನಡೆಸಿದ್ದಾರೆ ಎಂದು ಹೇಳಿದ ಡಿಕೆ ಶಿವಕುಮಾರ್, ಈ ವಿಚಾರವನ್ನು ತಮ್ಮ ಗಮನಕ್ಕೆ ತಂದಿರುವ ನಾಯಕರಿಗೂ ಧನ್ಯವಾದ ತಿಳಿಸಿದ್ದಾರೆ.
ಬಿಜೆಪಿಗರಿಗೆ ಮತದಾರರ ಡೇಟಾ ಹೇಗೆ ಸಿಕ್ಕಿತು? ಯಾರು ನೀಡಿದ್ದಾರೆ ಎಂಬುದನ್ನು ಪತ್ತೆಹಚ್ಚಬೇಕು ಎಂದು ಡಿಕೆ ಶಿವಕುಮಾರ್ ಪ್ರಶ್ನಿಸಿದ್ದಾರೆ. ಬೆಳಗಾವಿ ಹಾಗೂ ಭಾಲ್ಕಿಯಲ್ಲಿ ಈ ವಿಚಾರಕ್ಕೆ ಸಂಬಂಧಿಸಿದಂತೆ ದೂರು ಹಾಗೂ ಎಫ್‌ಐಆರ್ ದಾಖಲಾಗಿದೆ ಎಂದು ಹೇಳಿದ್ದಾರೆ. ಕ್ರಿಮಿನಲ್ ಕೃತ್ಯ ನಡೆದಿದ್ದರೆ ಸಂಬಂಧಪಟ್ಟವರ ವಿರುದ್ಧ ಎಫ್‌ಐಆರ್ ದಾಖಲಿಸಿ ಕ್ರಮ ಕೈಗೊಳ್ಳಬೇಕು. ಬಿಜೆಪಿ ನಾಯಕರು ಹಾಗೂ ದೆಹಲಿಯ ನಾಯಕರು ಈ ರೀತಿ ಫಾರ್ಮ್‌ಗಳನ್ನು ಪ್ರಿಂಟ್ ಮಾಡಿಸುತ್ತಿದ್ದಾರೆ ಎಂದು ಸಿಎಂ ಆರೋಪಿಸಿದ್ದಾರೆ.
ಪ್ರತಿಯೊಬ್ಬ ಮತದಾರರ ಹಕ್ಕನ್ನು ಕಾಪಾಡಬೇಕು. ಈ ಕುರಿತು ಚುನಾವಣಾ ಆಯೋಗಕ್ಕೆ ದೂರು ನೀಡುತ್ತೇವೆ. ಕ್ರಿಮಿನಲ್ ಕೃತ್ಯದಲ್ಲಿ ಭಾಗಿಯಾದವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಡಿ.ಕೆ. ಶಿವಕುಮಾರ್ ಒತ್ತಾಯಿಸಿದ್ದಾರೆ.
ಈ ವಿಚಾರವನ್ನು ನಮ್ಮ ಸರ್ಕಾರ ಇಲ್ಲಿಗೆ ಬಿಡುವುದಿಲ್ಲ. ಇದರ ವಿರುದ್ಧ ಹೋರಾಟ ನಡೆಸುತ್ತೇವೆ ಎಂದು ಡಿಕೆ ಶಿವಕುಮಾರ್ ಹೇಳಿದ್ದಾರೆ. ಜಿಲ್ಲಾ ಅಧಿಕಾರಿಗಳು ಹಾಗೂ ಬಿಎಲ್‌ಒಗಳೂ ಈ ಕುರಿತು ದೂರು ನೀಡಬೇಕು. ಸಂಪೂರ್ಣ ತನಿಖೆ ನಡೆಯಬೇಕು ಎಂದು ಆಗ್ರಹಿಸಿದ್ದಾರೆ.
ಕೇಂದ್ರ ಸರ್ಕಾರವೂ ಈ ಬಗ್ಗೆ ತನಿಖೆ ನಡೆಸಬೇಕು. ಕ್ರಿಮಿನಲ್ ಕೃತ್ಯದಲ್ಲಿ ಭಾಗಿಯಾದವರು ಯಾರೇ ಆಗಿದ್ದರೂ ಅವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.

