ಸಚಿವಾಲಯದ ಅಧಿಕಾರಿ/ ನೌಕರರಿಗೆ ಶೀಘ್ರವೇ ಸಿಹಿಸುದ್ದಿ ಸಿಗಲಿದೆ. ಹೌದು ಈ ಕುರಿತು ಕರ್ನಾಟಕ ಸರ್ಕಾರ ಸಚಿವಾಲಯ ನೌಕರರ ಸಂಘದ ಅಧ್ಯಕ್ಷರು ಮಾಹಿತಿ ನೀಡಿದ್ದಾರೆ.
ಸಂಘದ ಅಧ್ಯಕ್ಷರು ಹಾಗೂ ಪದಾಧಿಕಾರಿಗಳು ಮುಖ್ಯ ಕಾರ್ಯದರ್ಶಿಗಳನ್ನು ಭೇಟಿ ಮಾಡಿ ಜಿಬಿಎಯಿಂದ ಸಚಿವಾಲಯದ ಅಧಿಕಾರಿ/ ಸಿಬ್ಬಂದಿಗಳನ್ನು ಬಿ.ಎಲ್.ಓ. ಕರ್ತವ್ಯಕ್ಕೆ ನಿಯೋಜಿಸುತ್ತಿರುವ ಕುರಿತು ಮನವಿ ಸಲ್ಲಿಸಿದ್ದಾರೆ.
ಸಚಿವಾಲಯದ ಯಾವುದೇ ಅಧಿಕಾರಿ ಸಿಬ್ಬಂದಿಗಳನ್ನು ಸದರಿ ಕರ್ತವ್ಯಕ್ಕೆ ನಿಯೋಜಿಸಬಾರದೆಂದು ಕಟ್ಟುನಿಟ್ಟಿನ ಸೂಚನೆಯನ್ನು ಜಿಬಿಎಗೆ ನೀಡಬೇಕೆಂದು ಮನವಿ ಮಾಡಲಾಗಿದೆ. ಬೇಡಿಕೆಯನ್ನು ಆಲಿಸಿದ ಮುಖ್ಯ ಕಾರ್ಯದರ್ಶಿಗಳು ಯಾವುದೇ ಸಚಿವಾಲಯದ ಅಧಿಕಾರಿ ಸಿಬ್ಬಂದಿಗಳನ್ನು ಸದರಿ ಕಾರ್ಯಕ್ಕೆ ನಿಯೋಜಿಸಬಾರದು ಎಂದು ನಿರ್ದೇಶನವನ್ನು ನೀಡಿದ್ದಾರೆ.
ಮನವಿ ಪತ್ರ ಏನಾಗಿತ್ತು?: ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ ಹಾಗೂ ಕರ್ನಾಟಕ ಸರ್ಕಾರ ಸಚಿವಾಲಯದ ಇತರ ಅಧಿಕಾರಿ/ ಸಿಬ್ಬಂದಿಗಳನ್ನು ಮತಗಟ್ಟೆ ಅಧಿಕಾರಿ (Booth Level Officer – BLO)ಯಾಗಿ ನೇಮಕ ಮಾಡಲಾಗಿರುತ್ತದೆ.
ಕರ್ನಾಟಕ ಸರ್ಕಾರ ಸಚಿವಾಲಯವು ಪ್ರಮುಖವಾಗಿ ಸರ್ಕಾರದ ನೀತಿ-ನಿಯಮಗಳ ನಿರೂಪಣೆ, ಅನುಷ್ಠಾನ ಮತ್ತು ಕ್ಷೇತ್ರ ಇಲಾಖೆಗಳಿಗೆ ಸೂಕ್ತ ನಿರ್ದೇಶನ ನೀಡುವ ಮತ್ತು ನಿಯಂತ್ರಣ ಸಾಧಿಸುವ ಒಂದು ಪ್ರಮುಖ ಅಂಗವಾಗಿದ್ದು, ಸಚಿವಾಲಯದ ನೌಕರರನ್ನು ಇಂತಹ ನೀತಿ-ನಿರೂಪಣೆಯೇತರ ಸಾಮಾನ್ಯ ಕರ್ತವ್ಯಗಳಿಗೆ ನಿಯೋಜಿಸಿದಲ್ಲಿ, ಆಡಳಿತ ವ್ಯವಸ್ಥೆಯ ಆರಂಭಿಕ ಹಂತದಲ್ಲೇ ಸರ್ಕಾರದ ಕಾರ್ಯಕ್ರಮಗಳು ವಿಳಂಬವಾಗುವ ಸಾಧ್ಯತೆ ಇರುತ್ತದೆ.
ಪ್ರಸ್ತುತ ಸಚಿವಾಲಯದಲ್ಲಿ ಮಂಜೂರಾದ ಹುದ್ದೆಗಳಿಗೆ ಹೋಲಿಸಿದಲ್ಲಿ ಕರ್ತವ್ಯ ನಿರತ ಹುದ್ದೆಗಳು ತೀರಾ ಕಡಿಮೆಯಿದ್ದು ಅಧಿಕಾರಿ/ ಸಿಬ್ಬಂದಿಗಳಿಗೆ ಕಾರ್ಯದೊತ್ತಡ ಅಧಿಕವಾಗಿರುತ್ತದೆ.
ಪ್ರಸ್ತುತ ಕರ್ನಾಟಕ ಸರ್ಕಾರ ಸಚಿವಾಲಯದಲ್ಲಿ ಕಾರ್ಯ ನಿರತ ಅಧಿಕಾರಿ/ ನೌಕರರ ತೀವ್ರ ಕೊರತೆಯಿರುವ ಸಂದರ್ಭದಲ್ಲಿ ಬೃಹತ್ ಬೆಂಗಳೂರು ಮಹಾ ನಗರ ಪಾಲಿಕೆಯ ವತಿಯಿಂದ ಮತಗಟ್ಟೆ ಮಟ್ಟದ ಅಧಿಕಾರಿಯಾಗಿ ಸಚಿವಾಲಯದ ಅಧಿಕಾರಿ/ ನೌಕರರನ್ನು ನೇಮಿಸಿದಲ್ಲಿ, ಇಲಾಖೆಗಳ ಸುಗಮ ಕರ್ತವ್ಯ ನಿರ್ವಹಣೆಗೆ ತೊಂದರೆಯಾಗಲಿದೆ.
ಅಲ್ಲದೇ, ಇತ್ತೀಚೆಗೆ ನಡೆದ ಕರ್ನಾಟಕ ರಾಜ್ಯದ ನಾಗರೀಕರ ಸಾಮಾಜಿಕ ಮತ್ತು ಶೈಕ್ಷಣಿಕ ಸ್ಥಿತಿಗಳ ಸಮೀಕ್ಷೆ ಕಾರ್ಯಕ್ಕೆ ಕರ್ನಾಟಕ ಸರ್ಕಾರ ಸಚಿವಾಲಯದಲ್ಲಿನ ಶಾಖಾಧಿಕಾರಿಗಳನ್ನೊಳಗೊಂಡಂತೆ ಸಚಿವಾಲಯದ ಇತರ ಎಲ್ಲಾ ಗ್ರೂಪ್-ಸಿ ವೃಂದದ ನೌಕರರನ್ನೂ ನಿಯೋಜಿಸಿದ್ದು, ಈ ಅಧಿಕಾರಿ/ ನೌಕರರು ಸಮೀಕ್ಷೆ ಕಾರ್ಯವನ್ನು ಪೂರ್ಣಗೊಳಿಸಿ ಈಗಷ್ಟೇ ಸಚಿವಾಲಯದ ಕರ್ತವ್ಯಗಳಿಗೆ ಹಿಂದಿರುಗಿರುವುದರಿಂದ, ಮತ್ತೊಮ್ಮೆ ಮತಗಟ್ಟೆ ಅಧಿಕಾರಿ ಕರ್ತವ್ಯಕ್ಕೆ ಕರ್ನಾಟಕ ಸರ್ಕಾರ ಸಚಿವಾಲಯದ ಅಧಿಕಾರಿ/ ನೌಕರರನ್ನು ನಿಯೋಜಿಸುವುದರಿಂದ ಸಚಿವಾಲಯದ ದೈನಂದಿನ ಕಛೇರಿ ಕರ್ತವ್ಯಗಳಿಗೆ ತೀವ್ರ ಹಿನ್ನಡೆಯಾಗಲಿದೆ.
ಆದುದರಿಂದ, ಕರ್ನಾಟಕ ಸರ್ಕಾರ ಸಚಿವಾಲಯದ ಸುಗಮ ಕರ್ತವ್ಯ ನಿರ್ವಹಣೆಯ ದೃಷ್ಟಿಯಿಂದ, ಸಚಿವಾಲಯದ ಅಧಿಕಾರಿ/ ಸಿಬ್ಬಂದಿಗಳನ್ನು ಮತಗಟ್ಟೆ ಅಧಿಕಾರಿ ಸೇವೆಗೆ ನಿಯೋಜಿಸುವುದನ್ನು ಕೈಬಿಡುವಂತೆ ಸಂಬಂಧಿಸಿದವರಿಗೆ ಸೂಕ್ತ ನಿರ್ದೇಶನವನ್ನು ನೀಡುವಂತೆ ಕೋರುತ್ತೇನೆ ಎಂದು ಮನವಿ ಸಲ್ಲಿಸಲಾಗಿತ್ತು.

