ಕೊಪ್ಪಳ: ತುಂಗಭದ್ರಾ ನದಿ ತೀರದಲ್ಲಿ ಅನುಮತಿಯಿಲ್ಲದೇ ಅಕ್ರಮವಾಗಿ ವಿದೇಶಿ ಪಾರ್ಟಿ ಆಯೋಜನೆ ಮಾಡಿದ್ದು, ಪ್ರಕರಣವನ್ನು ಗಂಭೀರವಗೈ ಪರಿಗಣಿಸಿರುವ ಪೊಲೀಸರು, ದಿ ಹಂಪಿ ಕೆಫೆ ಮಾಲೀಕನ ವಿರುದ್ಧ ಕೇಸ್ ದಾಖಲಿಸಿದ್ದಾರೆ.
ಕೊಪ್ಪಳ ಜಿಲ್ಲೆಯಲ್ಲಿ ತುಂಗಭದ್ರಾ ನದಿ ತೀರದಲ್ಲಿ ಪದೇ ಪದೇ ವಿದೇಶಿ ಪಾರ್ಟಿ ಆಯೋಜನೆ ನಡೆಸುತ್ತಿರುವುದು ಬೆಳಕಿಗೆ ಬಂದಿದೆ. ಗಂಗಾವತಿ ಸಮೀಪದ ತುಂಗಭದ್ರಾ ನದಿ ತೀರದಲ್ಲಿ ಫೆಬ್ರವರಿ 16ರಂದು ಯಾವುದೇ ಅನುಮತಿ ಪಡೆಯದೆ ಪಾರ್ಟಿ ಆಯೋಜಿಸಲಾಗಿತ್ತು. ವಿದೇಶಿಗರು ಈ ಪಾರ್ಟಿಯಲ್ಲಿ ಭಾಗವಿಸಿದ್ದರು. ಸೋಶಿಯಲ್ ಮೀಡಿಯಾದಲ್ಲಿ ವಿಡಿಯೋ ವೈರಲ್ ಆಗಿತ್ತು. ಈ ಹಿನ್ನೆಲೆಯಲ್ಲಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದರು.
ಮುನಿರಾಬಾದ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿತ್ತು. ಪಾರ್ಟಿ ವೇಳೆ ಡಿಜೆ ಸದ್ದಿಗೆ ವಿದೇಶಿಗರು ನದಿ ತೀರದಲ್ಲೇ ಕುಣಿದು ಕುಪ್ಪಳಿಸಿದ್ದರು. ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದಂತೆ ಪೊಲೀಸ್ ಇಲಾಖೆ ಎಚ್ಚೆತ್ತುಕೊಂಡಿದೆ. ‘ದಿ ಹಂಪಿ ಕೆಫೆ’ ರೆಸಾರ್ಟ್ ಮಾಲೀಕರಾದ ಪಿಯೂಷ್ ಹಾಗೂ ವ್ಯವಸ್ಥಾಪಕರ ವಿರುದ್ಧವೂ ಅನುಮತಿ ಇಲ್ಲದೆ ಪಾರ್ಟಿ ಆಯೋಜಿಸಿದ ಆರೋಪದಡಿ ಪ್ರಕರಣ ದಾಖಲಿಸಿದೆ.
ತೆರೆದ ಜಾಗದಲ್ಲಿ ಕಾರ್ಯಕ್ರಮ ನಡೆಸಿ ನಿಯಮ ಉಲ್ಲಂಘಿಸಿರುವುದಾಗಿ ಪೊಲೀಸರು ತಿಳಿಸಿದ್ದಾರೆ. ಕೆಪಿ ಕಾಯ್ದೆಯಡಿ ಪ್ರಕರಣ ದಾಖಲಿಸಿ ನೋಟಿಸ್ ಜಾರಿಗೊಳಿಸಲಾಗಿದೆ. ಈ ಕುರಿತು ಕೊಪ್ಪಳ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಾಮ್ ಅರಸಿದ್ದಿ ಹೇಳಿಕೆ ನೀಡಿದ್ದು, ಕಾರ್ಯಕ್ರಮಕ್ಕೆ ಯಾರು ಯಾರು ಹಾಜರಾಗಿದ್ದರು ಎಂಬುದರ ಕುರಿತು ತನಿಖೆ ನಡೆಯುತ್ತಿದೆ ಎಂದಿದ್ದಾರೆ.
ಇನ್ನು ರೆಸಾರ್ಟ್ನಲ್ಲಿ ನಿಯಮಬಾಹಿರ ಚಟುವಟಿಕೆಗಳ ಪರಿಶೀಲನೆಗಾಗಿ ವಿಶೇಷ ತಂಡ ರಚಿಸಲಾಗಿದ್ದು, ಜಿಲ್ಲಾಡಳಿತವೂ ಟಾಸ್ಕ್ ಫೋರ್ಸ್ ರಚಿಸಲಾಗಿದೆ.

