ದೈನಂದಿನ ಬಾಯಿಯ ಶುಚಿತ್ವವು ಆರೋಗ್ಯದ ಅವಿಭಾಜ್ಯ ಅಂಗ ಎಂದು ನಾವು ನಂಬಿದ್ದೇವೆ. ಆದರೆ, ಕೆಲವು ಮೌತ್ವಾಶ್’ಗಳು ಹಲ್ಲು ಮತ್ತು ವಸಡುಗಳನ್ನು ಮೀರಿ ಇಡೀ ದೇಹದ ಮೇಲೆ ಹೇಗೆ ಪರಿಣಾಮ ಬೀರುತ್ತವೆ ಎಂಬುದರ ಕುರಿತು ದಂತವೈದ್ಯರು ಈಗ ಗಂಭೀರ ಎಚ್ಚರಿಕೆ ನೀಡುತ್ತಿದ್ದಾರೆ.
40 ವರ್ಷಗಳ ಅನುಭವ ಹೊಂದಿರುವ ಸ್ಯಾನ್ ಫ್ರಾನ್ಸಿಸ್ಕೋ ಮೂಲದ ದಂತವೈದ್ಯ ಡಾ. ಮಾರ್ಕ್ ಬರ್ಹೆನ್ನೆ, ಸುಮಾರು 20 ಕೋಟಿ ಅಮೆರಿಕನ್ನರು ಅನುಸರಿಸುತ್ತಿರುವ ಒಂದು ಅಭ್ಯಾಸದ ಬಗ್ಗೆ ಕಳವಳ ವ್ಯಕ್ತಪಡಿಸಿದ್ದಾರೆ.ಡಾ. ಬರ್ಹೆನ್ನೆ ಅವರ ಪ್ರಕಾರ, ಬಾಯಿಯನ್ನು “99.9 ಪ್ರತಿಶತ” ಕ್ಲೀನ್ ಮಾಡುವ ಹಂಬಲವು ಅಪಾಯಕಾರಿ. ಮೌತ್ವಾಶ್’ಗಳು ಬಾಯಿಯಲ್ಲಿರುವ ಬ್ಯಾಕ್ಟೀರಿಯಾಗಳನ್ನು ವಿವೇಚನೆಯಿಲ್ಲದೆ ಕೊಲ್ಲುತ್ತದೆ. ಇವುಗಳಲ್ಲಿ ನೈಟ್ರೇಟ್ ಅನ್ನು ನೈಟ್ರಿಕ್ ಆಕ್ಸೈಡ್ ಆಗಿ ಪರಿವರ್ತಿಸುವ ‘ಒಳ್ಳೆಯ’ ಬ್ಯಾಕ್ಟೀರಿಯಾಗಳು ಸೇರಿವೆ. ಈ ನೈಟ್ರಿಕ್ ಆಕ್ಸೈಡ್ ರಕ್ತದೊತ್ತಡ ನಿಯಂತ್ರಣ, ಇನ್ಸುಲಿನ್ ಸೂಕ್ಷ್ಮತೆ ಮತ್ತು ಹೃದಯದ ಕಾರ್ಯಕ್ಷಮತೆಗೆ ಅತ್ಯಗತ್ಯ.
ಅಧ್ಯಯನಗಳ ವರದಿ: * ಹಾರ್ವರ್ಡ್ ಅಧ್ಯಯನ: ದಿನಕ್ಕೆ ಎರಡು ಬಾರಿ ಮೌತ್’ವಾಶ್ ಬಳಸುವವರಲ್ಲಿ ಮಧುಮೇಹ ಪೂರ್ವ (Prediabetes) ಅಥವಾ ಮಧುಮೇಹದ ಅಪಾಯ 55% ಹೆಚ್ಚಿರುವುದು ಕಂಡುಬಂದಿದೆ.
ಪ್ಲೈಮೌತ್ ವಿಶ್ವವಿದ್ಯಾಲಯ: ಮೌತ್ವಾಶ್’ಗಳ ಬಳಕೆಯು ವ್ಯಾಯಾಮದಿಂದ ಸಿಗುವ ರಕ್ತದೊತ್ತಡದ ಪ್ರಯೋಜನಗಳನ್ನು 60% ಕ್ಕಿಂತ ಹೆಚ್ಚು ನಾಶಪಡಿಸುತ್ತದೆ ಎಂದು ಈ ಅಧ್ಯಯನ ತಿಳಿಸಿದೆ.
ಭಾರತೀಯ ತಜ್ಞರ ಅಭಿಪ್ರಾಯ
ಕೌನ್ ಹಬ್ ಡೆಂಟಲ್ನ ಪ್ರೋಸ್ಟೋಡಾಂಟಿಸ್ಟ್ ಡಾ. ನಿಯತಿ ಅರೋರಾ ಅವರು ಈ ಬಗ್ಗೆ ಮಾತನಾಡುತ್ತಾ, “ನಮ್ಮ ಕರುಳಿನಂತೆ ಬಾಯಿಯಲ್ಲೂ ಒಳ್ಳೆಯ ಮತ್ತು ಕೆಟ್ಟ ಬ್ಯಾಕ್ಟೀರಿಯಾಗಳಿವೆ. ಅತಿಯಾದ ಮೌತ್ವಾಶ್’ ಬಳಕೆ ನೈಟ್ರಿಕ್ ಆಕ್ಸೈಡ್ ಉತ್ಪಾದನೆಯನ್ನು ಕಡಿಮೆ ಮಾಡುತ್ತದೆ ಎಂಬುದು ನಿಜ. ಆದರೆ ಈ ಬಗ್ಗೆ ಇನ್ನೂ ದೊಡ್ಡ ಮಟ್ಟದ ಜನಸಂಖ್ಯಾ ಆಧಾರಿತ ಪ್ರಯೋಗಗಳು ನಡೆಯಬೇಕಿದೆ,” ಎಂದಿದ್ದಾರೆ.
ಪ್ರತಿದಿನ ಮೌತ್’ವಾಶ್ ಬಳಸಬೇಕೇ?
- ಮೌತ್ ವಾಶ್ ಅಪಾಯಕಾರಿಯಲ್ಲ: ಸರಿಯಾದ ಕ್ರಮದಲ್ಲಿ ಬಳಸಿದರೆ ಅದು ಆರೋಗ್ಯಕ್ಕೆ ಪೂರಕ. ಆದರೆ ಅದರ ಬಳಕೆಯ ಆವರ್ತನದ (Frequency) ಮೇಲೆ ನಿಗಾ ಇರಬೇಕು.
- ವೈದ್ಯರ ಸಲಹೆ ಮುಖ್ಯ: ಪ್ರಬಲವಾದ ಕ್ಲೋರ್ಹೆಕ್ಸಿಡಿನ್ (Chlorhexidine) ಮೌತ್ವಾಶ್ಗಳನ್ನು ದಂತವೈದ್ಯರು ಸೂಚಿಸಿದಾಗ ಮಾತ್ರ ನಿರ್ದಿಷ್ಟ ಅವಧಿಯವರೆಗೆ ಬಳಸಬೇಕು.
- ದೈನಂದಿನ ಶುಚಿತ್ವ: ಸಾಮಾನ್ಯ ಫ್ಲೋರೈಡ್ ಮೌತ್ವಾಶ್ಗಳನ್ನು ಅಗತ್ಯಕ್ಕೆ ತಕ್ಕಂತೆ ಬಳಸಬಹುದು. ಆದರೆ ಹಲ್ಲುಜ್ಜುವುದು (Brushing) ಮತ್ತು ಫ್ಲಾಸಿಂಗ್ (Flossing) ಮಾಡುವುದೇ ಬಾಯಿಯ ಆರೋಗ್ಯದ ಅಡಿಪಾಯವಾಗಿರಬೇಕು.
ಉತ್ತಮ ದಿನಚರಿಗಾಗಿ ಸಲಹೆಗಳು
• ದಿನಕ್ಕೆ ಎರಡು ಬಾರಿ ಫ್ಲೋರೈಡ್ ಯುಕ್ತ ಟೂತ್ ಪೇಸ್ಟ್ ನಿಂದ ಹಲ್ಲುಜ್ಜುವುದು.
• ಹಲ್ಲುಗಳ ಸಂದಿಗಳನ್ನು ಸ್ವಚ್ಛಗೊಳಿಸಲು ಫ್ಲಾಸಿಂಗ್ ಮಾಡುವುದು.
• ಬಾಯಿಯ ಆರೋಗ್ಯ ಮತ್ತು ಹೃದಯದ ಆರೋಗ್ಯಕ್ಕೆ ನೇರ ಸಂಬಂಧವಿರುವುದರಿಂದ, ಯಾವುದೇ ಪ್ರಮುಖ ಬದಲಾವಣೆ ಮಾಡುವ ಮುನ್ನ ದಂತವೈದ್ಯರನ್ನು ಸಂಪರ್ಕಿಸಿ.
ಸೂಚನೆ : ಈ ಮಾಹಿತಿಯು ತಜ್ಞರ ಅಭಿಪ್ರಾಯಗಳನ್ನು ಆಧರಿಸಿದೆ. ಯಾವುದೇ ಹೊಸ ಆರೋಗ್ಯ ಕ್ರಮವನ್ನು ಆರಂಭಿಸುವ ಮುನ್ನ ನಿಮ್ಮ ವೈದ್ಯರನ್ನು ಸಂಪರ್ಕಿಸಿ.
A post shared by Dr. Mark Burhenne | Dentist (@askthedentist)

