ಬೆಂಗಳೂರು: ನೀವು ಹೊಸದಾಗಿ ಮದುವೆಯಾಗಿದ್ದೀರಾ? ವಿವಾಹ ನೋಂದಣಿ ಪ್ರಮಾಣಪತ್ರ (Marriage Certificate) ಪಡೆಯುವುದು ಹೇಗೆ ಎಂಬ ಗೊಂದಲದಲ್ಲಿದ್ದೀರಾ? ಹಾಗಿದ್ದರೆ ಈ ಸುದ್ದಿ ನಿಮಗಾಗಿ. ಇನ್ಮುಂದೆ ಮ್ಯಾರೇಜ್ ಸರ್ಟಿಫಿಕೇಟ್‌ಗಾಗಿ ಸಬ್ ರಿಜಿಸ್ಟ್ರಾರ್ ಕಚೇರಿ ಮುಂದೆ ಕ್ಯೂ ನಿಲ್ಲುವ ಅವಶ್ಯಕತೆಯಿಲ್ಲ. ರಾಜ್ಯ ಸರ್ಕಾರ ಜಾರಿಗೆ ತಂದಿರುವ ಕಾವೇರಿ ಆನ್‌ಲೈನ್ ಪೋರ್ಟಲ್ ಮೂಲಕ ನೀವು ಸುಲಭವಾಗಿ ಅರ್ಜಿ ಸಲ್ಲಿಸಬಹುದು.
ಅರ್ಜಿ ಸಲ್ಲಿಸಲು ಇರಬೇಕಾದ ಅರ್ಹತೆಗಳೇನು?
ವಯಸ್ಸು: ವರನಿಗೆ ಕನಿಷ್ಠ 21 ವರ್ಷ ಹಾಗೂ ವಧುವಿಗೆ ಕನಿಷ್ಠ 18 ವರ್ಷ ಪೂರ್ಣಗೊಂಡಿರಬೇಕು.
ನಿವಾಸಿ: ದಂಪತಿಗಳು ಭಾರತದ ಪ್ರಜೆಗಳಾಗಿದ್ದು, ಕರ್ನಾಟಕದ ನಿವಾಸಿಗಳಾಗಿರಬೇಕು.
ಸಿದ್ಧವಿಟ್ಟುಕೊಳ್ಳಿ ಈ ಚೆಕ್ ಲಿಸ್ಟ್ (ಅಗತ್ಯ ದಾಖಲೆಗಳು):
ಅರ್ಜಿ ಸಲ್ಲಿಸುವ ಮುನ್ನ ಈ ಕೆಳಗಿನ ದಾಖಲೆಗಳನ್ನು PDF ಮಾದರಿಯಲ್ಲಿ ಸಿದ್ಧಪಡಿಸಿಕೊಳ್ಳಿ:
ಪತಿ ಮತ್ತು ಪತ್ನಿಯ ಆಧಾರ್ ಕಾರ್ಡ್‌ಗಳು.
ಮದುವೆಯ ಲಗ್ನ ಪತ್ರಿಕೆ (ಮೂಲ ಪ್ರತಿ).
ಮೂವರು ಸಾಕ್ಷಿದಾರರ ಆಧಾರ್ ಕಾರ್ಡ್ ವಿವರಗಳು.
ದಂಪತಿಗಳ ಪಾಸ್‌ಪೋರ್ಟ್ ಸೈಜ್ ಫೋಟೋ ಹಾಗೂ ಮದುವೆಯ ಸಮಾರಂಭದ ಫೋಟೋಗಳು.
ವಯಸ್ಸಿನ ಪುರಾವೆ (10ನೇ ತರಗತಿ ಅಂಕಪಟ್ಟಿ ಅಥವಾ ಪಾಸ್‌ಪೋರ್ಟ್).
ಅರ್ಜಿ ಸಲ್ಲಿಸುವ ಹಂತ-ಹಂತದ ವಿಧಾನ ಇಲ್ಲಿದೆ:
ನೋಂದಣಿ (Registration)
ಮೊದಲು kaveri.karnataka.gov.in ವೆಬ್‌ಸೈಟ್‌ಗೆ ಭೇಟಿ ನೀಡಿ. ಅಲ್ಲಿ ‘ಹೊಸ ಬಳಕೆದಾರರಾಗಿ ನೋಂದಾಯಿಸಿ’ (Register) ಮೇಲೆ ಕ್ಲಿಕ್ ಮಾಡಿ ನಿಮ್ಮ ಯೂಸರ್ ನೇಮ್ ಮತ್ತು ಪಾಸ್‌ವರ್ಡ್ ಕ್ರಿಯೇಟ್ ಮಾಡಿಕೊಳ್ಳಿ.
ವಿವರಗಳನ್ನು ಭರ್ತಿ ಮಾಡಿ
ಲಾಗಿನ್ ಆದ ಬಳಿಕ ಪತಿ ಮತ್ತು ಪತ್ನಿಯ ಹೆಸರು, ಜನ್ಮ ದಿನಾಂಕ, ವಿಳಾಸದ ಮಾಹಿತಿ ನೀಡಿ. ನಂತರ ಮೂವರು ಸಾಕ್ಷಿದಾರರ ಮೊಬೈಲ್ ಸಂಖ್ಯೆ ಹಾಗೂ ವಿಳಾಸವನ್ನು ನಮೂದಿಸಿ. ಮದುವೆಯಾದ ಸ್ಥಳ ಮತ್ತು ಕಲ್ಯಾಣ ಮಂಟಪದ ಹೆಸರನ್ನು ಹಾಕಲು ಮರೆಯಬೇಡಿ.
ದಾಖಲೆ ಅಪ್‌ಲೋಡ್
ನೀವು ಮೊದಲೇ ಸಿದ್ಧಪಡಿಸಿಕೊಂಡಿರುವ ಆಧಾರ್ ಕಾರ್ಡ್, ಲಗ್ನ ಪತ್ರಿಕೆ ಮತ್ತು ಫೋಟೋಗಳನ್ನು ನಿಗದಿತ ಕಾಲಂನಲ್ಲಿ ಅಪ್‌ಲೋಡ್ ಮಾಡಿ.
ಇ-ಕೆವೈಸಿ (E-KYC) ಕಡ್ಡಾಯ
ಇದು ಅತಿ ಮುಖ್ಯವಾದ ಹಂತ. ಪತಿ-ಪತ್ನಿ ಹಾಗೂ ಸಾಕ್ಷಿದಾರರ ಆಧಾರ್‌ಗೆ ಲಿಂಕ್ ಆಗಿರುವ ಮೊಬೈಲ್ ಸಂಖ್ಯೆಗೆ ಬರುವ OTP ನಮೂದಿಸಿ ‘ಇ-ಸಹಿ’ (E-Sign) ಪ್ರಕ್ರಿಯೆ ಮುಗಿಸಿ.
ಕಚೇರಿ ಆಯ್ಕೆ ಮತ್ತು ಶುಲ್ಕ
ನಿಮ್ಮ ವಿಳಾಸಕ್ಕೆ ಹತ್ತಿರವಿರುವ ಸಬ್ ರಿಜಿಸ್ಟ್ರಾರ್ ಕಚೇರಿಯನ್ನು ಆಯ್ಕೆ ಮಾಡಿ ಅರ್ಜಿ ಸಬ್‌ಮಿಟ್ ಮಾಡಿ. ಸಬ್ ರಿಜಿಸ್ಟ್ರಾರ್ ಅವರು ನಿಮ್ಮ ಅರ್ಜಿಯನ್ನು ಪರಿಶೀಲಿಸಿ 4 ದಿನಗಳಲ್ಲಿ ಅನುಮೋದನೆ ನೀಡುತ್ತಾರೆ. ನಿಗದಿತ ಸೇವಾ ಶುಲ್ಕ ಪಾವತಿಸಿದರೆ ನಿಮ್ಮ ಡಿಜಿಟಲ್ ಮ್ಯಾರೇಜ್ ಸರ್ಟಿಫಿಕೇಟ್ ರೆಡಿ!

