HomeKarnatakaಮೈಸೂರು ದಸರಾದಲ್ಲಿ ಕಂಬಳ ಸಂಭ್ರಮ: ಈ ಬಾರಿ ಹೊಸ ಮೆರುಗು ನೀಡಲಿದೆ ಕರಾವಳಿಯ ಸಾಂಪ್ರದಾಯಿಕ ಜಾನಪದ...

ಮೈಸೂರು ದಸರಾದಲ್ಲಿ ಕಂಬಳ ಸಂಭ್ರಮ: ಈ ಬಾರಿ ಹೊಸ ಮೆರುಗು ನೀಡಲಿದೆ ಕರಾವಳಿಯ ಸಾಂಪ್ರದಾಯಿಕ ಜಾನಪದ ಕ್ರೀಡೆ

ಸಂಸ್ಕೃತಿ ಮತ್ತು ಪರಂಪರೆ ಸಂಗಮವಾಗಿರುವ ಮೈಸೂರು ದಸರಾ 2026ಕ್ಕೆ ಈ ಬಾರಿ ಕರಾವಳಿಯ ಸಾಂಪ್ರದಾಯಿಕ ಜಾನಪದ ಕ್ರೀಡೆಯಾದ ಕಂಬಳ ಹೊಸ ಮೆರುಗು ನೀಡಲಿದೆ. ಇದೇ ಮೊದಲ ಬಾರಿ ಮೈಸೂರಿನ ಸಾತಗಳ್ಳಿ ಹೊರವರ್ತುಲ ರಸ್ತೆಯಲ್ಲಿರುವ VTUನಲ್ಲಿ ಕಂಬಳ ಸ್ಪರ್ಧೆ ನಡೆಯಲಿದ್ದು, ಭಾಗವಹಿಸಲು ಆಸಕ್ತರು ಆನ್‌ಲೈನ್‌ ನಲ್ಲಿ ನೋಂದಾಯಿಸಿಕೊಳ್ಳಬಹುದು.

ನೋಂದಣಿಗೆ ಕೊನೆಯ ದಿನಾಂಕ: ಸೆಪ್ಟೆಂಬರ್ 30, ಹೆಚ್ಚಿನ ಮಾಹಿತಿ ಹಾಗೂ ನೋಂದಣಿಗಾಗಿ: https://kambala.milieumedia.in ಜಾಲತಾಣಕ್ಕೆ ಭೇಟಿ ನೀಡಿ.

* ಮೈಸೂರು ದಸರಾದಲ್ಲಿ ಮೊದಲ ಬಾರಿಗೆ ಕರಾವಳಿಯ ಜಾನಪದ ಕ್ರೀಡೆ ಕಂಬಳ ಆಯೋಜನೆ

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

* ಮೈಸೂರಿನ ಸಾತಗಳ್ಳಿ ಹೊರವರ್ತುಲ ರಸ್ತೆಯಲ್ಲಿರುವ VTU ಆವರಣದಲ್ಲಿ ಕಂಬಳ ಸ್ಪರ್ಧೆ

ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: ಸೆಪ್ಟೆಂಬರ್ 30

ಆಫ್‌ಲೈನ್ ಮೂಲಕ ಅರ್ಜಿ ಸಲ್ಲಿಸುವವರು ಜಿಲ್ಲಾ ಪಂಚಾಯತ್ ಕಚೇರಿಯಿಂದ ಭೌತಿಕ ಅರ್ಜಿ ನಮೂನೆಯನ್ನು ಪಡೆದುಕೊಳ್ಳಲು ಅವಕಾಶ

ಹೆಚ್ಚಿನ ಮಾಹಿತಿಗಾಗಿ ಹಾಗೂ ನೋಂದಣಿಗಾಗಿ kambala.milieumedia.in

ಕಂಬಳದ ಆಕರ್ಷಣೆ

ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವಕ್ಕೆ ಈ ಬಾರಿ ಕರಾವಳಿ ಕರ್ನಾಟಕದ ಸಾಂಪ್ರದಾಯಿಕ ಜಾನಪದ ಕ್ರೀಡೆ ಕಂಬಳ ಹೊಸ ಆಕರ್ಷಣೆ ನೀಡಲಿದೆ. ಮೈಸೂರು ದಸರಾ ಇತಿಹಾಸದಲ್ಲೇ ಮೊದಲ ಬಾರಿಗೆ ಕಂಬಳ ಸ್ಪರ್ಧೆ ಆಯೋಜಿಸಲಾಗುತ್ತಿದ್ದು, ಅಕ್ಟೋಬರ್ 18 ಮತ್ತು 19ರಂದು ಎರಡು ದಿನಗಳ ಕಾಲ ಸ್ಪರ್ಧೆ ನಡೆಯಲಿದೆ.

160 ಜೋಡಿ ಕೋಣಗಳ ನಿರೀಕ್ಷೆ

ಕರಾವಳಿ ಭಾಗದಿಂದ ಸುಮಾರು 160 ಜೋಡಿ ಕೋಣಗಳು ಮೈಸೂರಿಗೆ ಆಗಮಿಸುವ ನಿರೀಕ್ಷೆಯಿದೆ. ಕೋಣಗಳನ್ನು ಅಕ್ಟೋಬರ್ 16ರಂದು ಪುತ್ತೂರಿನ ಮಹಾಲಿಂಗೇಶ್ವರ ದೇವಸ್ಥಾನದ ಆವರಣದಿಂದ ಮೈಸೂರಿನತ್ತ ಕಳುಹಿಸಲು ಸಿದ್ಧತೆ ನಡೆದಿದೆ. ಅಕ್ಟೋಬರ್ 17ರಂದು ಕೋಣಗಳಿಗೆ ವಿಶ್ರಾಂತಿ ನೀಡಿ, 18 ಮತ್ತು 19ರಂದು ಸ್ಪರ್ಧೆ ನಡೆಸುವ ಯೋಜನೆ ಇದೆ.

ಎಲ್ಲಿ ನಡೆಯಲಿದೆ?

ಕಂಬಳ ಸ್ಪರ್ಧೆ ಮೈಸೂರಿನ ಸಾತಗಳ್ಳಿ, ವಿಟಿಯು ಕಾಲೇಜು ಸಮೀಪ ನಿರ್ಮಿಸಲಾಗುತ್ತಿರುವ ವಿಶೇಷ ಕೆಸರು ಗದ್ದೆಯಲ್ಲಿ ನಡೆಯಲಿದೆ. ಬೆಳಿಗ್ಗೆ 9 ಗಂಟೆಯಿಂದ ಕಾರ್ಯಕ್ರಮ ಆರಂಭವಾಗಲಿದೆ. ಪ್ರೇಕ್ಷಕರಿಗೆ ಪ್ರವೇಶ ಉಚಿತ ಎಂದು ದಸರಾ ಅಧಿಕೃತ ಕಾರ್ಯಕ್ರಮ ಪಟ್ಟಿಯಲ್ಲಿ ತಿಳಿಸಲಾಗಿದೆ.

ಕೆಸರು ಗದ್ದೆಯಲ್ಲಿ ಕೋಣಗಳ ರೋಚಕ ಓಟ

ಕಂಬಳದಲ್ಲಿ ಜೋಡಿ ಕೋಣಗಳನ್ನು ಓಟಗಾರರು ಕೆಸರು ಗದ್ದೆಯಲ್ಲಿ ಓಡಿಸುವುದು ಪ್ರಮುಖ ಆಕರ್ಷಣೆ. ವೇಗವಾಗಿ ಓಡುವ ಕೋಣಗಳು, ಅವುಗಳೊಂದಿಗೆ ಓಡುವ ಕಂಬಳ ಪಟುಗಳು ಹಾಗೂ ಕೆಸರು ಗದ್ದೆಯಲ್ಲಿ ನಡೆಯುವ ಸ್ಪರ್ಧೆ ಪ್ರೇಕ್ಷಕರಿಗೆ ವಿಭಿನ್ನ ಅನುಭವ ನೀಡಲಿದೆ.

ಕಂಬಳವು ದಕ್ಷಿಣ ಕನ್ನಡ ಮತ್ತು ಉಡುಪಿ ಸೇರಿದಂತೆ ಕರಾವಳಿ ಕರ್ನಾಟಕದ ಕೃಷಿ ಸಂಸ್ಕೃತಿಯೊಂದಿಗೆ ನಿಕಟ ಸಂಬಂಧ ಹೊಂದಿರುವ ಸಾಂಪ್ರದಾಯಿಕ ಕ್ರೀಡೆಯಾಗಿದೆ. ಮೈಸೂರು ದಸರಾದ ವೇದಿಕೆಗೆ ಇದನ್ನು ತರುವ ಮೂಲಕ ಕರಾವಳಿಯ ಜನಪದ ಸಂಸ್ಕೃತಿಗೆ ರಾಜ್ಯಮಟ್ಟದಲ್ಲಿ ಮತ್ತೊಂದು ವೇದಿಕೆ ದೊರೆಯಲಿದೆ.

ಕೃಷಿ ಸಂಸ್ಕೃತಿಯ ಪ್ರದರ್ಶನವೂ ಸಾಧ್ಯತೆ

ಕಂಬಳದ ಜೊತೆಗೆ ಕರಾವಳಿ ಭಾಗದ ಕೃಷಿ ಜೀವನ, ಆಹಾರ ಪದ್ಧತಿ ಹಾಗೂ ಜನಪದ ಸಂಸ್ಕೃತಿಯ ಪರಿಚಯ ನೀಡುವ ಕಾರ್ಯಕ್ರಮಗಳಿಗೂ ಅವಕಾಶ ಕಲ್ಪಿಸುವ ಸಿದ್ಧತೆ ನಡೆಯುತ್ತಿದೆ. ಜೋಡುಕರೆ ನಿರ್ಮಾಣ ಸೇರಿದಂತೆ ಕಂಬಳಕ್ಕೆ ಅಗತ್ಯವಾದ ಮೂಲಸೌಕರ್ಯ ಕಾಮಗಾರಿಗಳು ಈಗಾಗಲೇ ಪ್ರಗತಿಯಲ್ಲಿವೆ.

ಮೈಸೂರು ದಸರಾ ಕಂಬಳವನ್ನು ‘ಪರಿಸರ ಸ್ನೇಹಿ ಕಂಬಳವಾಗಿ ಆಯೋಜಿಸುವುದಾಗಿ ಹೇಳಲಾಗಿದೆ. ಸ್ಪರ್ಧೆಯಲ್ಲಿ ಭಾಗವಹಿಸುವ ಕೋಣಗಳ ಮಾಲೀಕರ ನೋಂದಣಿಗೆ ಸೆಪ್ಟೆಂಬರ್ 30ರ ಸಂಜೆ 5 ಗಂಟೆಯವರೆಗೆ ಅವಕಾಶ ನೀಡಲಾಗಿದೆ. ಪ್ರಾಣಿಗಳ ಸುರಕ್ಷತೆ ಹಾಗೂ ಕಾರ್ಯಕ್ರಮದ ವ್ಯವಸ್ಥೆಗಳ ಕುರಿತು ಗಮನ ಹರಿಸಲಾಗುತ್ತಿದೆ.

ಒಟ್ಟಿನಲ್ಲಿ, ಜಂಬೂಸವಾರಿ, ಪಂಜಿನ ಕವಾಯತು, ಯುವ ಸಂಭ್ರಮ, ಕ್ರೀಡಾಕೂಟಗಳ ಜೊತೆಗೆ ಈ ಬಾರಿ ಕಂಬಳವೂ ಮೈಸೂರು ದಸರಾ ಮಹೋತ್ಸವದ ಪ್ರಮುಖ ಆಕರ್ಷಣೆಗಳಲ್ಲಿ ಒಂದಾಗಲಿದೆ. ಕರಾವಳಿಯ ಮಣ್ಣಿನ ಸೊಗಡನ್ನು ಮೈಸೂರಿನ ನಾಡಹಬ್ಬದ ವೇದಿಕೆಗೆ ಪರಿಚಯಿಸುವ ಈ ಪ್ರಯತ್ನಕ್ಕೆ ಪ್ರವಾಸಿಗರು ಮತ್ತು ಕ್ರೀಡಾಭಿಮಾನಿಗಳಲ್ಲಿ ಕುತೂಹಲ ಹೆಚ್ಚಾಗಿದೆ.

For Latest News Updates, Join Our Whatsapp Community🚩
niranjan
niranjan
Niranjan working in media filed from 24 years. He worked in Hubballi Udayavani and local newspapers in Shivamogga. ನಿರಂಜನ ಮೂರ್ತಿ ಎಚ್.ಸಿ. 24 ವರ್ಷಗಳಿಂದ ಮಾಧ್ಯಮ ಕ್ಷೇತ್ರದಲ್ಲಿದ್ದಾರೆ. ಎಂಎ ಕನ್ನಡ, ಪಿಜಿ ಡಿಪ್ಲೊಮಾ ಇನ್ ಜರ್ನಲಿಸಂ ವ್ಯಾಸಂಗ ಮಾಡಿದ್ದಾರೆ. ಶಿವಮೊಗ್ಗದ ಎಚ್ಚರಿಕೆ, ನಮ್ಮನಾಡು, ಜೈ ಕರುನಾಡು, ನುಡಿಗಿಡ, ಕ್ರಾಂತಿ ಭಗತ್ ಸ್ಥಳೀಯ ಪತ್ರಿಕೆಗಳಲ್ಲಿ ವರದಿಗಾರನಾಗಿ, ಹುಬ್ಬಳ್ಳಿಯ ಉದಯವಾಣಿಯಲ್ಲಿ ಉಪ ಸಂಪಾದಕರಾಗಿ ಕಾರ್ಯ ನಿರ್ವಹಣೆ ಮಾಡಿದ್ದಾರೆ.
RELATED ARTICLES

LEAVE A REPLY

Please enter your comment!
Please enter your name here

Most Popular