ಬಳ್ಳಾರಿ: ಬ್ಯಾಂಕ್ ಖಾತೆಯಿಂದ ಅನಧಿಕೃತವಾಗಿ ಹಣ ವರ್ಗಾವಣೆಯಾದ ಪ್ರಕರಣದಲ್ಲಿ ಗ್ರಾಹಕರಿಗೆ ಆದ ನಷ್ಟವನ್ನು ಭರಿಸುವಂತೆ ಹಾಗೂ ಪರಿಹಾರ ನೀಡುವಂತೆ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗವು ತೋರಣಗಲ್ ನ ಬ್ಯಾಂಕ್ ಆಫ್ ಬರೋಡಾ ಗೆ ಮಹತ್ವದ ಆದೇಶ ನೀಡಿದೆ.
ಪ್ರಕರಣದ ಹಿನ್ನೆಲೆ:
ಶಾಂತಲಾ ವೈ. ಎಂಬುವವರು ತೋರಣಗಲ್ಲಿನ ಬ್ಯಾಂಕ್ ಆಫ್ ಬರೋಡಾ ಶಾಖೆಯಲ್ಲಿ ವೇತನ ಖಾತೆ ಹೊಂದಿದ್ದರು. 2025ರ ಏಪ್ರಿಲ್ 1 ಮತ್ತು 2 ರಂದು ಇವರ ಖಾತೆಯಿಂದ ಒಟ್ಟು 95,250 ರೂ. ಹಣ ಅನಧಿಕೃತವಾಗಿ ವರ್ಗಾವಣೆಯಾಗಿತ್ತು. ಈ ಬಗ್ಗೆ ಗ್ರಾಹಕರಿಗೆ ಯಾವುದೇ ಮೊಬೈಲ್ ಸಂದೇಶ ಬಂದಿರಲಿಲ್ಲ.
ಏಪ್ರಿಲ್ 3 ರಂದು ಹಣ ವಿತ್‌ಡ್ರಾ ಮಾಡಲು ಹೋದಾಗ ‘ಅಗತ್ಯವಿರುವಷ್ಟು ಮೊತ್ತ ಇಲ್ಲ’ ಎಂದು ತೋರಿಸಿದ ಕಾರಣ ವಂಚನೆ ನಡೆದಿರುವುದು ಬೆಳಕಿಗೆ ಬಂದಿದೆ. ಈ ಸಂಬಂಧ ಗ್ರಾಹಕರು ಬ್ಯಾಂಕ್ ಹಾಗೂ ಸೈಬರ್ ಕ್ರೈಂ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಆದರೆ ಬ್ಯಾಂಕ್ ತನಗೂ ಇದಕ್ಕೂ ಸಂಬಂಧವಿಲ್ಲ ಎಂದು ವಾದಿಸಿತ್ತು.
ಆಯೋಗದ ಅಧ್ಯಕ್ಷ ಎನ್.ತಿಪ್ಪೇಸ್ವಾಮಿ ಹಾಗೂ ಮಹಿಳಾ ಸದಸ್ಯರಾದ ಮಾರ್ಲಾ ಶಶಿಕಲಾ ಅವರು, ಬ್ಯಾಂಕ್ ಪ್ರತಿಯೊಂದು ವ್ಯವಹಾರಕ್ಕೂ ಎಸ್‌ಎಂಎಸ್ ಕಳುಹಿಸುವುದಾಗಿ ಹೇಳಿದರೂ, ಈ ನಿರ್ದಿಷ್ಟ ಪ್ರಕರಣದಲ್ಲಿ ಗ್ರಾಹಕರಿಗೆ ಯಾವುದೇ ಸಂದೇಶ ಹೋಗದಿರುವುದು ಬ್ಯಾಂಕಿನ ಸೇವೆಯಲ್ಲಿನ ನ್ಯೂನತೆಯನ್ನು ಎತ್ತಿ ತೋರಿಸುತ್ತದೆ.
ಭಾರತೀಯ ರಿಸರ್ವ್ ಬ್ಯಾಂಕ್ ಮಾರ್ಗಸೂಚಿಯಂತೆ ಮೂರನೇ ವ್ಯಕ್ತಿಯಿಂದ ಅನಧಿಕೃತ ವ್ಯವಹಾರ ನಡೆದ 3 ದಿನಗಳ ಒಳಗಾಗಿ ಗ್ರಾಹಕರು ಬ್ಯಾಂಕಿಗೆ ದೂರು ನೀಡಿದರೆ, ಆ ನಷ್ಟವನ್ನು ಬ್ಯಾಂಕೇ ಭರಿಸಬೇಕಾಗುತ್ತದೆ. ಈ ಪ್ರಕರಣದಲ್ಲಿ ಗ್ರಾಹಕರು ತಕ್ಷಣವೇ ದೂರು ನೀಡಿದ್ದಾರೆ.
ಅನಧಿಕೃತವಾಗಿ ಕಡಿತಗೊಂಡ 95,250 ರೂ. ಹಣವನ್ನು ದೂರು ದಾಖಲಾದ ದಿನಾಂಕದಿಂದ ಶೇ. 6 ರಷ್ಟು ಬಡ್ಡಿಯೊಂದಿಗೆ ಮರಳಿಸಬೇಕು. ಸೇವಾ ನ್ಯೂನತೆ ಮತ್ತು ಮಾನಸಿಕ ಕಿರುಕುಳಕ್ಕಾಗಿ 10,000 ರೂ. ಪರಿಹಾರ ನೀಡಬೇಕು. ದೂರಿನ ವೆಚ್ಚವಾಗಿ 5,000 ರೂ. ಪಾವತಿಸಬೇಕು. ಈ ಒಟ್ಟು ಮೊತ್ತವನ್ನು 45 ದಿನಗಳ ಒಳಗಾಗಿ ಗ್ರಾಹಕರಿಗೆ ಪಾವತಿಸುವಂತೆ ಆದೇಶದಲ್ಲಿ ತಿಳಿಸಲಾಗಿದೆ.

