ರೈತರನ್ನು ವಿವಾಹವಾಗಲು ಯುವತಿಯರು ಒಪ್ಪುತ್ತಿಲ್ಲ. ಹಳ್ಳಿಗಳಲ್ಲಿ ವಯಸ್ಸು ಮೀರುತ್ತಿದ್ದರೂ ಸಹ ಯುವ ರೈತರು ವಿವಾಹವಾಗದೇ ಉಳಿದಿದ್ದಾರೆ ಎಂಬ ಕುರಿತು ಹಲವಾರು ವೇದಿಕೆಗಳಲ್ಲಿ ಚರ್ಚೆಗಳು ನಡೆದಿವೆ.
ಈಗ ಈ ವಿಚಾರದ ಕುರಿತು ಕುಣಿಗಲ್ ಕಾಂಗ್ರೆಸ್ ಶಾಸಕ ಡಾ.ಹೆಚ್.ಡಿ.ರಂಗನಾಥ್ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರಿಗೆ ಪತ್ರವನ್ನು ಬರೆದಿದ್ದಾರೆ. ವಿಶೇಷ ಭತ್ಯೆ ಹಾಗೂ ಸ್ಥಾನಮಾನ ಘೋಷಿಸುವ ಬಗ್ಗೆ ಗಮನ ಸೆಳೆದಿದ್ದಾರೆ.
ಪತ್ರದ ವಿವರ: ಶಾಸಕ ಡಾ.ಹೆಚ್.ಡಿ.ರಂಗನಾಥ್ ಪತ್ರವು ಗ್ರಾಮಗಳಲ್ಲಿ ವಾಸವಿದ್ದು, ವ್ಯವಸಾಯ ಮಾಡುವ ಗಂಡು ಮಕ್ಕಳನ್ನು ಮದುವೆ ಆಗುವ ಹೆಣ್ಣು ಮಕ್ಕಳಗೆ ಮುಂಬರುವ ಅಧಿವೇಶನದಲ್ಲಿ ವಿಶೇಷ ಭತ್ಯೆ ಹಾಗೂ ಸ್ಥಾನಮಾನ ಘೋಷಿಸುವ ಬಗ್ಗೆ ಎಂಬ ವಿಷಯವನ್ನು ಒಳಗೊಂಡಿದೆ.
ಶಾಸಕರು ಪತ್ರದಲ್ಲಿ ನನ್ನ ಮತಕ್ಷೇತ್ರ ಕುಣಿಗಲ್ ತಾಲ್ಲೂಕು ಗ್ರಾಮೀಣ ಪ್ರದೇಶವಾಗಿದ್ದು, ವ್ಯವಸಾಯ ಅವಲಂಭನೆ ಹೆಚ್ಚಿರುತ್ತದೆ ಹಾಗೂ ಗ್ರಾಮಗಳಲ್ಲಿ ಹೆಚ್ಚಿನ ಯುವಕರು ವಾಸವಿದ್ದು, ವ್ಯವಸಾಯ ಮಾಡಿಕೊಂಡು ಜೀವನ ಮಾಡುತ್ತಿದ್ದಾರೆ.

ಇವರನ್ನು ಮದುವೆ ಆಗಲು ಹೆಣ್ಣು ಮಕ್ಕಳು ನಿರಾಕರಿಸುತ್ತಿದ್ದು, ಮೂವತ್ತು ವರ್ಷ ದಾಟದರೂ ಮದುವೆ ಆಗದೆ, ತೊಂದರೆಯಲ್ಲಿರುತ್ತಾರೆ. ಆದ್ದರಿಂದ ತಾವುಗಳು ಹಳ್ಳಗಳಲ್ಲಿ ವಾಸವಿದ್ದು, ವ್ಯವಸಾಯ ಮಾಡಿಕೊಂಡಿರುವ ಗಂಡು ಮಕ್ಕಳನ್ನು ಮದುವೆ ಆಗುವ ಹೆಣ್ಣು ಮಕ್ಕಳಿಗೆ ಮುಂಬರುವ ಅಧಿವೇಶನದಲ್ಲಿ ವಿಶೇಷ ಭತ್ಯೆ ಹಾಗೂ ಅವರಿಗೆ ವಿಶೇಷ ಸ್ಥಾನಮಾನವನ್ನು ಘೋಷಿಸಬೇಕಾಗಿ ಕೋರುತ್ತೇನೆ ಎಂದು ಪತ್ರದಲ್ಲಿ ಮನವಿ ಮಾಡಿದ್ದಾರೆ.

