ನವದೆಹಲಿ : ಭಾರತದಲ್ಲಿ AI ಶೃಂಗಸಭೆ ಇಡೀ ದಕ್ಷಿಣ ರಾಷ್ಟ್ರಗಳ ಒಕ್ಕೂಟಕ್ಕೆ ಹೆಮ್ಮೆ ತಂದಿದೆ ಎಂದು ಪ್ರಧಾನಿ ಮೋದಿ ಹೇಳಿದರು. ಗುರುವಾರ ನವದೆಹಲಿಯಲ್ಲಿ ನಡೆದ India AIImpact Summit 2026 ಶೃಂಗಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಮಾತನಾಡಿದರು.
ಭಾರತದಲ್ಲಿ ‘ಎಐ ಶೃಂಗಸಭೆ’ಯನ್ನು (AI Summit) ಆಯೋಜಿಸುತ್ತಿರುವುದು ಇಡೀ ‘ಗ್ಲೋಬಲ್ ಸೌತ್’ (ಜಾಗತಿಕ ದಕ್ಷಿಣದ ರಾಷ್ಟ್ರಗಳು) ಹೆಮ್ಮೆ ಪಡುವ ವಿಷಯವಾಗಿದೆ ಎಂದು ಹೇಳಿದರು. ಜಾಗತಿಕ ತಂತ್ರಜ್ಞಾನದ ಚರ್ಚೆಗಳನ್ನು ರೂಪಿಸುವಲ್ಲಿ ಭಾರತದ ಬೆಳೆಯುತ್ತಿರುವ ಪಾತ್ರವನ್ನು ಅವರು ಈ ಸಂದರ್ಭದಲ್ಲಿ ಎತ್ತಿ ತೋರಿಸಿದರು. ಸಭೆಯನ್ನುದ್ದೇಶಿಸಿ ಮಾತನಾಡಿದ ಪ್ರಧಾನಿಯವರು, “ಭಾರತದಲ್ಲಿ ನಡೆಯುತ್ತಿರುವ ಈ ಶೃಂಗಸಭೆಯು ಮಾನವಕುಲದ ಆರನೇ ಒಂದು ಭಾಗದಷ್ಟು ಜನರ ಆಕಾಂಕ್ಷೆಗಳನ್ನು ಪ್ರತಿಬಿಂಬಿಸುತ್ತದೆ. ಅಲ್ಲದೆ, ಕೃತಕ ಬುದ್ಧಿಮತ್ತೆಯ (AI) ಒಳಗೊಳ್ಳುವಿಕೆ ಮತ್ತು ಜವಾಬ್ದಾರಿಯುತ ಅಭಿವೃದ್ಧಿಗೆ ಭಾರತಕ್ಕಿರುವ ಬದ್ಧತೆಯನ್ನು ಇದು ಪುನರುಚ್ಚರಿಸುತ್ತದೆ” ಎಂದು ತಿಳಿಸಿದರು.
“ವಿಶ್ವದ ಯುವಜನತೆ ಕೃತಕ ಬುದ್ಧಿಮತ್ತೆಯನ್ನು (AI) ಅಪ್ಪಿಕೊಳ್ಳುತ್ತಿರುವ ವೇಗ ಮತ್ತು ಅದರ ಮಾಲೀಕತ್ವವನ್ನು ವಹಿಸಿಕೊಳ್ಳುತ್ತಿರುವ ರೀತಿ ಶ್ಲಾಘನೀಯ. ಈ ಎಐ ಶೃಂಗಸಭೆಯ ಬಗ್ಗೆ ಯುವ ಪೀಳಿಗೆಯಲ್ಲಿ ಅದ್ಭುತವಾದ ಉತ್ಸಾಹ ಮನೆಮಾಡಿದೆ.”
“…ಎಐ ತಂತ್ರಜ್ಞಾನವು ಯಂತ್ರಗಳನ್ನು ಬುದ್ಧಿವಂತವಾಗಿಸುತ್ತಿದೆ ನಿಜ, ಆದರೆ ಅದಕ್ಕಿಂತ ಮಿಗಿಲಾಗಿ ಇದು ಮಾನವನ ಸಾಮರ್ಥ್ಯವನ್ನು ಹಲವು ಪಟ್ಟು ಹೆಚ್ಚಿಸುತ್ತಿದೆ. ಈ ಬಾರಿ ಒಂದು ಪ್ರಮುಖ ವ್ಯತ್ಯಾಸವಿದೆ: ಈ ತಂತ್ರಜ್ಞಾನದ ವೇಗ ಹಿಂದೆಂದೂ ಕಂಡಿರದಂತಿದೆ ಮತ್ತು ಇದರ ವಿಸ್ತಾರವು ನಿರೀಕ್ಷೆಗೂ ಮೀಲಿದೆ. ಹಿಂದೆ, ತಂತ್ರಜ್ಞಾನದ ಪ್ರಭಾವ ಗೋಚರಿಸಲು ದಶಕಗಳೇ ಬೇಕಾಗುತ್ತಿತ್ತು. ಆದರೆ ಇಂದು, ‘ಮಷಿನ್ ಲರ್ನಿಂಗ್’ನಿಂದ ಹಿಡಿದು ‘ಲರ್ನಿಂಗ್ ಮಷಿನ್ಸ್’ವರೆಗಿನ ಪಯಣವು ಎಂದಿಗಿಂತಲೂ ವೇಗವಾಗಿ, ಆಳವಾಗಿ ಮತ್ತು ವಿಸ್ತಾರವಾಗಿ ಸಾಗುತ್ತಿದೆ.” ಎಂದರು.
“ವೈರ್ಲೆಸ್ ಮೂಲಕ ಮೊದಲ ಬಾರಿಗೆ ಸಂಕೇತಗಳನ್ನು (Signals) ರವಾನಿಸಿದಾಗ, ಒಂದು ದಿನ ಇಡೀ ಜಗತ್ತೇ ನೈಜ ಸಮಯದಲ್ಲಿ (Real-time) ಪರಸ್ಪರ ಸಂಪರ್ಕ ಹೊಂದುತ್ತದೆ ಎಂದು ಯಾರೂ ಊಹಿಸಿರಲಿಲ್ಲ. ಕೃತಕ ಬುದ್ಧಿಮತ್ತೆಯು (AI) ಮಾನವ ಇತಿಹಾಸದಲ್ಲಿ ಅಂತಹದ್ದೇ ಒಂದು ದೊಡ್ಡ ಬದಲಾವಣೆಯಾಗಿದೆ. ಇಂದು ನಾವು ಏನನ್ನು ನೋಡುತ್ತಿದ್ದೇವೆಯೋ ಮತ್ತು ಏನನ್ನು ಊಹಿಸುತ್ತಿದ್ದೇವೆಯೋ, ಅದು ಅದರ ಒಟ್ಟಾರೆ ಪ್ರಭಾವದ ಕೇವಲ ಆರಂಭವಷ್ಟೇ ಎಂದರು.

