ಶ್ರೀಲಂಕಾದ ಕ್ಯಾಂಡಿಯ ಪಲ್ಲೆಕೆಲೆ ಕ್ರೀಡಾಂಗಣದಲ್ಲಿ ಇಂದು ( ಫೆಬ್ರವರಿ 17 ) ಐಸಿಸಿ ಪುರುಷರ ಟಿ ಟ್ವೆಂಟಿ ವಿಶ್ವಕಪ್ 2026ರ ಗ್ರೂಪ್ ಹಂತದ 32ನೇ ಪಂದ್ಯ ನಡೆಯಬೇಕಿದ್ದು, ಈ ಪಂದ್ಯದಲ್ಲಿ ಬಿ ಗುಂಪಿನ ಜಿಂಬಾಬ್ವೆ ಹಾಗೂ ಐರ್ಲೆಂಡ್ ತಂಡಗಳು ಮುಖಾಮುಖಿಯಾಗಿವೆ.
ಇನ್ನು ಈ ಪಂದ್ಯದ ಫಲಿತಾಂಶ ಬಿ ಗುಂಪಿನಿಂದ ಯಾವ ತಂಡ ಸೂಪರ್ 8 ತಲುಪಲಿದೆ ಎಂಬುದರ ಮೇಲೆ ಪ್ರಭಾವ ಬೀರಲಿದ್ದು, ಈ ಕಾರಣಕ್ಕಾಗಿ ಈ ಪಂದ್ಯ ಮಹತ್ವವನ್ನು ಪಡೆದುಕೊಂಡಿದೆ.
ಹೌದು, ಬಿ ಗುಂಪಿನಿಂದ ಈಗಾಗಲೇ ಶ್ರೀಲಂಕಾ ಸೂಪರ್ 8 ಸುತ್ತಿಗೆ ಲಗ್ಗೆ ಇಟ್ಟಿದ್ದು, ಆಸ್ಟ್ರೇಲಿಯಾ ಹಾಗೂ ಜಿಂಬಾಬ್ವೆ ಎರಡು ತಂಡಗಳಿಗೆ ಎರಡನೇ ಸ್ಥಾನ ಪಡೆಯುವ ಸಾಧ್ಯತೆಗಳಿವೆ.
ಆಸ್ಟ್ರೇಲಿಯಾ ಟೂರ್ನಿಯಲ್ಲಿ ಆಡಿರುವ ಮೂರು ಪಂದ್ಯಗಳ ಪೈಕಿ ಒಂದರಲ್ಲಿ ಮಾತ್ರ ಗೆದ್ದು ಉಳಿದೆರಡು ಪಂದ್ಯಗಳಲ್ಲಿ ಸೋಲನ್ನು ಕಂಡಿದ್ದು, ಕೇವಲ 2 ಅಂಕಗಳೊಂದಿಗೆ ಅಂಕಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿದೆ. ಜಿಂಬಾಬ್ವೆ ಆಡಿರುವ ಎರಡು ಪಂದ್ಯಗಳಲ್ಲಿ ಎರಡರಲ್ಲಿಯೂ ಗೆದ್ದು ನಾಲ್ಕು ಅಂಕಗಳೊಂದಿಗೆ ಎರಡನೇ ಸ್ಥಾನದಲ್ಲಿದೆ.
ಹೀಗಾಗಿ ಜಿಂಬಾಬ್ವೆ ಹಾಗೂ ಐರ್ಲೆಂಡ್ ತಂಡಗಳ ನಡುವಿನ ಈ ಪಂದ್ಯದಲ್ಲಿ ಐರ್ಲೆಂಡ್ ಗೆದ್ದರೆ ಮಾತ್ರ ಆಸ್ಟ್ರೇಲಿಯಾ ಸೂಪರ್ 8 ಕನಸು ಜೀವಂತವಾಗಿ ಉಳಿದುಕೊಳ್ಳಲಿದೆ. ಒಂದುವೇಳೆ ಜಿಂಬಾಬ್ವೆ ಗೆದ್ದರೆ ಆಸ್ಟ್ರೇಲಿಯಾ ಟೂರ್ನಿಯಿಂದ ಹೊರಬೀಳಲಿದ್ದು, ಜಿಂಬಾಬ್ವೆ ನೇರವಾಗಿ ಸೂಪರ್ 8 ತಲುಪಲಿದೆ.
ಹೀಗೆ ಭಾರೀ ಮಹತ್ವ ಪಡೆದುಕೊಂಡಿರುವ ಈ ಪಂದ್ಯದ ಟಾಸ್ ನಡೆಯುವ ಮುನ್ನವೇ ಮಳೆ ಆಗಮನವಾಗಿದ್ದು, ಸದ್ಯ ಟಾಸ್ ವಿಳಂಬವಾಗಿದೆ. ಇನ್ನು ಪಂದ್ಯವೇನಾದರೂ ಮಳೆಯ ಕಾರಣದಿಂದ ನಡೆಯದೇ ಹೋದರೆ ಜಿಂಬಾಬ್ವೆ ಹಾಗೂ ಐರ್ಲೆಂಡ್ ತಂಡಗಳು ಒಂದೊಂದು ಅಂಕ ಪಡೆಯಲಿದ್ದು, ಜಿಂಬಾಬ್ವೆ ಒಟ್ಟು 5 ಅಂಕಗಳನ್ನು ಗಳಿಸಿ ಸೂಪರ್ 8 ಪ್ರವೇಶಿಸಲಿದೆ. ಕೇವಲ ಎರಡು ಅಂಕ ಹೊದಿರುವ ಆಸ್ಟ್ರೇಲಿಯಾ ಉಳಿಕೊಂದು ಪಂದ್ಯ ಗೆದ್ದರೂ ಕೇವಲ ನಾಲ್ಕು ಅಂಕ ಹೊಂದಲಿದೆ. ಹೀಗಾಗಿ ಇಂದಿನ ಪಂದ್ಯ ಮಳೆಯಿಂದ ರದ್ದಾದರೆ ಜಿಂಬಾಬ್ವೆಗೆ ಲಾಭವಾಗಲಿದ್ದು, ಕಾಂಗರೂಗಳಿಗೆ ಭಾರೀ ನಷ್ಟ ಹಾಗೂ ಮುಖಭಂಗವಾಗಲಿದೆ.

