ಬೆಂಗಳೂರು: 108 – ಆರೋಗ್ಯ ಕವಚ ಸೇವೆಯಡಿಯಲ್ಲಿ ನೇಮಕಗೊಳ್ಳಲಿರುವ ಇ.ಎಂ.ಟಿ ಮತ್ತು ಪೈಲಟ್‌ಗಳಿಗೆ ಮೂಲ ವೇತನವನ್ನು ಚಾಲ್ತಿಯಲ್ಲಿರುವ ಕನಿಷ್ಠ ವೇತನ ದರದಲ್ಲಿ ಹಾಗೂ ಹಿಂದಿನ ಸೇವಾ ಅನುಭವಗಾಗಿ ಅನುಭವ ಬೋನಸ್ (Experience Bonus)ನ್ನು ಹಾಗೂ ಕಾರ್ಯಕ್ಷಮತೆ ಆಧಾರಿತ ಪ್ರೋತ್ಸಾಹ ಧನವನ್ನು ನೀಡುವ ಬಗ್ಗೆ ಸರ್ಕಾರ ಆದೇಶಿಸಿದೆ.
ಆರೋಗ್ಯ ಕವಚ ಯೋಜನೆಯಡಿ ನೇಮಕವಾಗಿರುವ ಆಂಬ್ಯುಲೆನ್ಸ್ ಚಾಲಕರು(ಪೈಲಟ್) ಮತ್ತು ತುರ್ತು ವೈದ್ಯಕೀಯ ತಂತ್ರಜ್ಞರಿಗೆ(ಇಎಂಟಿ) ಅನುಭವದ ಆಧಾರದ ಮೇಲೆ ಬೋನಸ್ ಹಾಗೂ ಕಾರ್ಯಕ್ಷಮತೆ ಆಧಾರದ ಮೇಲೆ ಶೇಕಡ 10ರಷ್ಟು ಪ್ರೋತ್ಸಾಹಧನ ನೀಡುವುದಾಗಿ ಸರ್ಕಾರ ಘೋಷಿಸಿದೆ.
ಆಂಬ್ಯುಲೆನ್ಸ್ ಚಾಲಕರಿಗೆ ಪ್ರಸ್ತುತ ಚಾಲ್ತಿಯಲ್ಲಿರುವ ಮೂಲವೇತನದ ಜೊತೆಗೆ ಪ್ರತಿ ವರ್ಷದ ಅನುಭವಕ್ಕೆ ಶೇಕಡ 2ರ ದರದಲ್ಲಿ ಹೆಚ್ಚುವರಿ ಅನುಭವ ಬೋನಸ್ ನೀಡಲಾಗುವುದು. 15 ವರ್ಷಗಳಿಗೆ ಗರಿಷ್ಠ ಶೇಕಡ 30ರಷ್ಟು ಬೋನಸ್ ನಿಗದಿ ಮಾಡಲಾಗಿದೆ.
ಅನುಭವದ ಆಧಾರದ ಮೇಲೆ ಬೋನಸ್ ನೀಡಲಾಗುವುದು. ಜೊತೆಗೆ ಕಾರ್ಯಕ್ಷಮತೆ ಆಧರಿಸಿ ಶೇಕಡ 10ರಷ್ಟು ಪ್ರೋತ್ಸಾಹ ಧನ ನೀಡಲಾಗುವುದು. 108 ಆಂಬುಲೆನ್ಸ್ ಸೇವೆಯ ಕಮಾಂಡ್ ಕಂಟ್ರೋಲ್ ಕೇಂದ್ರವನ್ನು ಆರೋಗ್ಯ ಇಲಾಖೆ ವ್ಯಾಪ್ತಿಗೆ ತಂದು ಆರೋಗ್ಯ ಕವಚ ಎಂದು ಆಂಬುಲೆನ್ಸ್ ಸೇವೆ ಉತ್ತಮಪಡಿಸಲು ಸರ್ಕಾರ ಕ್ರಮ ಕೈಗೊಂಡಿದೆ. ಇದರ ಬೆನ್ನಲ್ಲೇ ಆರೋಗ್ಯಕವಚ ಆಂಬ್ಯುಲೆನ್ಸ್ ಚಾಲಕರು ಮತ್ತು ತಂತ್ರಜ್ಞರಿಗೆ ಸಿಹಿ ಸುದ್ದಿ ಸಿಕ್ಕಿದೆ.


