ಮಧ್ಯ ಕರ್ನಾಟಕದ ಪ್ರಮುಖ ಜಾತ್ರೆಗಳಾಗಿರುವ ಶಿರಸಿ, ಶಿವಮೊಗ್ಗ, ದಾವಣಗೆರೆಯಲ್ಲಿ ಮಾರಿಕಾಂಬ ಮತ್ತು ದುರ್ಗಮ್ಮನ ಜಾತ್ರೆ ಒಟ್ಟಿಗೆ ಬಂದಿರುವುದರಿಂದ ಈ ಬಾರಿ ಕುರಿ, ಮೇಕೆ, ಹೋತಗಳಿಗೆ ಭಾರಿ ಬೇಡಿಕೆ ಉಂಟಾಗಿದೆ.
ಎರಡು, ಮೂರು, ಐದು ವರ್ಷಗಳಿಗೊಮ್ಮೆ ನಡೆಯುವ ಮಾರಿಕಾಂಬ, ಚೌಡಮ್ಮ, ದುರ್ಗಮ್ಮ, ಗ್ರಾಮ ದೇವತೆ ಹಬ್ಬಗಳಿಗೆ ಬಂಧು ಬಳಗದರವರನ್ನು ಕರೆಯುವುದು, ಕುರಿಗಳನ್ನು ತರುವುದು ಸಾಮಾನ್ಯ. ಈ ಬಾರಿ ಶಿವಮೊಗ್ಗ, ಶಿರಸಿ, ದಾವಣಗೆರೆ ಸೇರಿದಂತೆ ವಿವಿಧ ಊರುಗಳಲ್ಲಿ ಜಾತ್ರೆಗಳು ಒಟ್ಟಿಗೆ ಬಂದಿರುವುದು ಕುರಿ, ಮೇಕೆ, ಕೋಳಿಗಳಿಗೆ ಭಾರಿ ಡಿಮ್ಯಾಂಡ್ ಸೃಷ್ಟಿಸಿದೆ.
25 ಕೆಜಿ ತೂಕದ 2 ರಿಂದ 4 ಹಲ್ಲಿನ ಟಗರುಗಳಿಗೆ 23 ರಿಂದ 25 ಸಾವಿರಕ್ಕೂ ಅಧಿಕ ದರ ಇದೆ. 30 ಕೆಜಿ ಕುರಿಗೆ 28 ರಿಂದ 30 ಸಾವಿರಕ್ಕೂ ಅಧಿಕ ದರ ಇದೆ. ಮಾಂಸದ ಅಂಗಡಿಗಳಲ್ಲಿ ಕೆಜಿಗೆ 750 ರಿಂದ 950 ರೂಪಾಯಿವರೆಗೂ ದರ ಇದ್ದು, ಕೋಳಿಗಳಿಗೂ ಭಾರಿ ಬೇಡಿಕೆ ಸೃಷ್ಟಿಯಾಗಿದೆ.
ಒಟ್ಟೊಟ್ಟಿಗೆ ಪ್ರಮುಖ ಹಬ್ಬಗಳು ಬಂದಿರುವುದರಿಂದ ಸಂತೆಗಳಲ್ಲಿ ಕುರಿ, ಮೇಕೆಗಳ ಮಾರಾಟ ಜೋರಾಗಿದೆ. ಹಾವೇರಿ, ಹೊನ್ನಾಳಿ, ಚಿತ್ರದುರ್ಗ, ಚನ್ನಗಿರಿ, ಕೊಪ್ಪಳ, ರಾಯಚೂರು ಮೊದಲಾದ ಕಡೆಗಳಿಂದ ಹೆಚ್ಚಿನ ಪ್ರಮಾಣದಲ್ಲಿ ಕುರಿಗಳನ್ನು ತಂದು ಮಾರಾಟ ಮಾಡಲಾಗುತ್ತಿದೆ.
ಕರ್ನಾಟಕದ ಪ್ರಮುಖ ಜಾತ್ರೆಯಾಗಿರುವ ಸಾಗರದ ಮಾರಿಕಾಂಬ ಜಾತ್ರೆ ಮುಗಿದಿದೆ. ಶಿರಸಿ, ಶಿವಮೊಗ್ಗ, ದಾವಣಗೆರೆ ಮಾರಿಕಾಂಬ ಮತ್ತು ದುರ್ಗಮ್ಮನ ಜಾತ್ರೆ ವೈಭವದಿಂದ ನಡೆಯಲಿದ್ದು, ಹೆಚ್ಚಿನ ಸಂಖ್ಯೆಯ ಜನ ಸೇರುತ್ತಾರೆ. ಬಂಧು ಬಳಗದವರನ್ನು ಕರೆಯಲು ಮತ್ತು ಹಬ್ಬಕ್ಕಾಗಿ ಈಗಾಗಲೇ ಸಿದ್ಧತೆ ಮಾಡಿಕೊಂಡಿರುವ ತಮ್ಮ ಶಕ್ತ್ಯಾನುಸಾರ ಕುರಿಗಳ ಖರೀದಿಗೆ ಮುಂದಾಗಿದ್ದಾರೆ. ಬೇಡಿಕೆ ಹೆಚ್ಚಿರುವುದರಿಂದ ಸಹಜವಾಗಿಯೇ ದರ ಕೂಡ ಏರಿಕೆಯಾಗಿದೆ.

