ಬೆಂಗಳೂರು: ಈ ವರ್ಷ 10,000 ಸರ್ಕಾರಿ ಶಾಲೆಗಳಲ್ಲಿ ಎಲ್.ಕೆ.ಜಿ., ಯುಕೆಜಿ ಆರಂಭವಾಗುವ ಸಾಧ್ಯತೆ ಇದೆ. ಸರ್ಕಾರಿ ಶಾಲೆಗಳಲ್ಲಿ ದಾಖಲಾತಿ ಪ್ರಮಾಣ ಹೆಚ್ಚಿಸಲು ಪೂರ್ವ ಪ್ರಾಥಮಿಕ ತರಗತಿಗಳ ಮೂಲಕ ಮರುಜೀವ ನೀಡಲು ಸರ್ಕಾರ ಕ್ರಮ ಕೈಗೊಂಡಿದೆ.
ಈ ಬಾರಿ ಬಜೆಟ್ ನಲ್ಲಿ ರಾಜ್ಯದ 10,000 ಶಾಲೆಗಳಿಗೆ ಎಲ್.ಕೆ.ಜಿ., ಯುಕೆಜಿ ವಿಸ್ತರಿಸುವ ಸಾಧ್ಯತೆ ಇದೆ. ನಲಿ-ಕಲಿ ಯೋಜನೆಯನ್ನು ಸರ್ಕಾರ ಕೈಬಿಡಲು ತೀರ್ಮಾನಿಸಿದ್ದು, ಎಲ್.ಕೆ.ಜಿ., ಯುಕೆಜಿ ತರಗತಿಗಳನ್ನು ರಾಜ್ಯಾದ್ಯಂತ ವಿಸ್ತರಿಸಬೇಕೆಂಬ ಬೇಡಿಕೆ ಇದೆ.
2018-19 ರಿಂದ 2024- 25ರ ಅವಧಿಯಲ್ಲಿ ರಾಜ್ಯದ 2619 ಸರ್ಕಾರಿ ಶಾಲೆಗಳಲ್ಲಿ ಎಲ್‌ಕೆಜಿ ಯುಕೆಜಿ ಆರಂಭವಾಗಿದ್ದು ಹಂತ ಹಂತವಾಗಿ ಇದನ್ನು 25,000 ಶಾಲೆಗಳಿಗೆ ವಿಸ್ತರಿಸುವಂತೆ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ಮನವಿ ಮಾಡಿದೆ. ಬಜೆಟ್ ನಲ್ಲಿ 10,000 ಶಾಲೆಗಳಿಗೆ ಎಲ್‌ಕೆಜಿ. ಯುಕೆಜಿ ವಿಸ್ತರಿಸುವ ಸಾಧ್ಯತೆ ಇದೆ.
ಖಾಸಗಿ ಶಾಲೆಗಳ ವ್ಯಾಮೋಹಕ್ಕೆ ಒಳಗಾದ ಗ್ರಾಮೀಣ ಭಾಗದ ಪೋಷಕರನ್ನು, ಮಕ್ಕಳನ್ನು ಸರ್ಕಾರಿ ಶಾಲೆಗಳಿಗೆ ಆಕರ್ಷಿಸಲು ಇದರಿಂದ ಅನುಕೂಲವಾಗಲಿದೆ. 2025 -26ನೇ ಸಾಲಿನ ಬಜೆಟ್ ನಲ್ಲಿ 5 ಸಾವಿರ ಶಾಲೆಗಳಲ್ಲಿ ಎಲ್.ಕೆ.ಜಿ., ಯುಕೆಜಿ ಆರಂಭಿಸುವುದಾಗಿ ಹೇಳಿದ್ದು, 4056 ಶಾಲೆಗಳಲ್ಲಿ ಆರಂಭವಾಗಿವೆ. ಇನ್ನೂ ಹೆಚ್ಚಿನ ಶಾಲೆಗಳಲ್ಲಿ ಎಲ್.ಕೆ.ಜಿ., ಯುಕೆಜಿ, ಆರಂಭಿಸಲು ಮುಂದಾಗಿದೆ.

