ದುಬೈ: ದುಬೈಯಿಂದ ಟೆಲ್ ಅವೀವ್ಗೆ ತೆರಳುತ್ತಿದ್ದ ಫ್ಲೈದುಬೈ ವಿಮಾನದಲ್ಲಿ ಸಹ ಪೈಲಟ್ ಕ್ಯಾಪ್ಟನ್ ಮೇಲೆ ದಾಳಿ ನಡೆಸಿದ ಘಟನೆ ಜಾಗತಿಕ ವಿಮಾನಯಾನ ಭದ್ರತೆಯ ಬಗ್ಗೆ ಮತ್ತೊಮ್ಮೆ ಆತಂಕ ಮೂಡಿಸಿದೆ. ಈ ಘಟನೆಯ ಬೆನ್ನಲ್ಲೇ 9/11 ದಾಳಿ, ‘ಶೂ ಬಾಂಬರ್’ ದಾಳಿ, ಮೊಜಾಂಬಿಕ್ ಏರ್ಲೈನ್ಸ್ ಅಪಘಾತ ಹಾಗೂ ಜರ್ಮನ್ವಿಂಗ್ಸ್ ದುರಂತದಂತಹ ಘಟನೆಗಳು ವಿಮಾನ ಭದ್ರತಾ ನಿಯಮಗಳು ಮತ್ತು ಕಾಕ್ಪಿಟ್ ಪ್ರವೇಶ ಕ್ರಮಗಳನ್ನು ಹೇಗೆ ಬದಲಾಯಿಸಿದವು ಎಂಬ ಚರ್ಚೆ ಮುನ್ನೆಲೆಗೆ ಬಂದಿದೆ.
ಫ್ಲೈದುಬೈ ವಿಮಾನದಲ್ಲಿ ಸಹ ಪೈಲಟ್ ತುರ್ತು ಪರಿಸ್ಥಿತಿಯಲ್ಲಿ ಬಳಸುವ ‘ಕ್ರ್ಯಾಶ್ ಆಕ್ಸ್’ (Crash Axe)ನಿಂದ ಕ್ಯಾಪ್ಟನ್ಗೆ ಇರಿದಿದ್ದಾರೆ. ಈ ಘಟನೆಯನ್ನು ಯುಎಇ ಪ್ರಾಸಿಕ್ಯೂಟರ್ಗಳು ಭಯೋತ್ಪಾದಕ ದಾಳಿ ಎಂದು ಪರಿಗಣಿಸಿದ್ದಾರೆ. ದಾಳಿ ನಡೆದ ಬಳಿಕ ವಿಮಾನವು ಕೇವಲ 30 ಸೆಕೆಂಡ್ಗಳಲ್ಲಿ ಸುಮಾರು 16,000 ಅಡಿ ಕೆಳಕ್ಕೆ ಕುಸಿದಿತ್ತು ಎಂದು ವರದಿಯಾಗಿದೆ.
ಬಳಿಕ ಪ್ರಯಾಣಿಕರು ಮತ್ತು ಸ್ಟ್ಯಾಂಡ್ಬೈ ಸಿಬ್ಬಂದಿಯ ನೆರವಿನಿಂದ ವಿಮಾನವನ್ನು ನಿಯಂತ್ರಣಕ್ಕೆ ತರಲಾಯಿತು. ಗಾಯಗೊಂಡಿದ್ದರೂ ಕ್ಯಾಪ್ಟನ್ ವಿಮಾನವನ್ನು ಸುರಕ್ಷಿತವಾಗಿ ಲ್ಯಾಂಡ್ ಮಾಡುವಲ್ಲಿ ಪ್ರಮುಖ ಪಾತ್ರ ವಹಿಸಿದ್ದು, ವಿಮಾನದಲ್ಲಿದ್ದ ಎಲ್ಲರೂ ಬದುಕುಳಿದಿದ್ದಾರೆ.
ಸಹ ಪೈಲಟ್ನನ್ನು ವಿಚಾರಣೆ ನಡೆಸಲಾಗುತ್ತಿದೆ. ಆತ ವಿಮಾನಯಾನ ಸಂಸ್ಥೆಗೆ ಸೇರುವ ಮುನ್ನವೇ ದಾಳಿಗೆ ಯೋಜನೆ ರೂಪಿಸಿದ್ದ ಎಂದು ಇಸ್ರೇಲಿ ಅಧಿಕಾರಿಗಳು ತಿಳಿಸಿದ್ದಾರೆ.
ಈ ಘಟನೆ ಹಿನ್ನೆಲೆಯಲ್ಲಿ ಕಳೆದ ಎರಡು ದಶಕಗಳಲ್ಲಿ ನಡೆದ ಪ್ರಮುಖ ವಿಮಾನಯಾನ ದುರಂತಗಳು ಹಾಗೂ ಅವುಗಳ ಬಳಿಕ ಜಾರಿಗೆ ಬಂದ ಭದ್ರತಾ ಬದಲಾವಣೆಗಳತ್ತ ಮತ್ತೊಮ್ಮೆ ಗಮನ ಹರಿಸಲಾಗಿದೆ.
9/11 ದಾಳಿ: ಕಾಕ್ಪಿಟ್ ಭದ್ರತೆಗೆ ಹೊಸ ರೂಪ
2001ರ ಸೆಪ್ಟೆಂಬರ್ 11ರಂದು ಅಲ್ಖೈದಾ ಉಗ್ರರು ಅಮೆರಿಕದ ನಾಲ್ಕು ಪ್ರಯಾಣಿಕ ವಿಮಾನಗಳನ್ನು ಹೈಜಾಕ್ ಮಾಡಿದ್ದರು. ಎರಡು ವಿಮಾನಗಳು ನ್ಯೂಯಾರ್ಕ್ನ ವರ್ಲ್ಡ್ ಟ್ರೇಡ್ ಸೆಂಟರ್ಗೆ ಹಾಗೂ ಮತ್ತೊಂದು ವಾಷಿಂಗ್ಟನ್ ಹೊರವಲಯದಲ್ಲಿರುವ ಪೆಂಟಗನ್ಗೆ ಅಪ್ಪಳಿಸಿತ್ತು. ದಾಳಿಯಲ್ಲಿ ಸುಮಾರು 3,000 ಮಂದಿ ಮೃತಪಟ್ಟಿದ್ದರು.
ಈ ಘಟನೆ ಬಳಿಕ ವಿಮಾನ ನಿಲ್ದಾಣಗಳ ಭದ್ರತಾ ತಪಾಸಣೆಗಳನ್ನು ಮತ್ತಷ್ಟು ಬಿಗಿಗೊಳಿಸಲಾಯಿತು. ಫೆಡರಲ್ ಏರ್ ಮಾರ್ಷಲ್ ಕಾರ್ಯಕ್ರಮವನ್ನು ವಿಸ್ತರಿಸಲಾಯಿತು.
2003ರ ಏಪ್ರಿಲ್ ವೇಳೆಗೆ ಅಮೆರಿಕದ ವಿಮಾನಯಾನ ಸಂಸ್ಥೆಗಳು ಬಲವಂತದ ಪ್ರವೇಶ ಹಾಗೂ ಗುಂಡಿನ ದಾಳಿಯನ್ನು ತಡೆದುಕೊಳ್ಳುವ ಸಾಮರ್ಥ್ಯ ಹೊಂದಿರುವ ಬಲಪಡಿಸಿದ ಕಾಕ್ಪಿಟ್ ಬಾಗಿಲುಗಳನ್ನು ಅಳವಡಿಸಬೇಕಾಯಿತು. ಬಳಿಕ ICAO ಕೂಡ ಇಂತಹ ಕಾಕ್ಪಿಟ್ ಬಾಗಿಲುಗಳನ್ನು ಜಾಗತಿಕವಾಗಿ ಕಡ್ಡಾಯಗೊಳಿಸಿತು.
‘ಶೂ ಬಾಂಬರ್’: ಶೂ ತಪಾಸಣೆಗೆ ಕಾರಣವಾದ ದಾಳಿ
2001ರ ಡಿಸೆಂಬರ್ 22ರಂದು ಬ್ರಿಟನ್ನ ಪ್ರಜೆ ರಿಚರ್ಡ್ ರೀಡ್, ಪ್ಯಾರಿಸ್ನಿಂದ ಮಿಯಾಮಿಗೆ ತೆರಳುತ್ತಿದ್ದ ಅಮೆರಿಕನ್ ಏರ್ಲೈನ್ಸ್ ವಿಮಾನವನ್ನು ಸ್ಫೋಟಿಸಲು ಪ್ರಯತ್ನಿಸಿದ್ದ.
ತನ್ನ ಶೂಗಳಲ್ಲಿ ಸ್ಫೋಟಕಗಳನ್ನು ಅಡಗಿಸಿಟ್ಟಿದ್ದ ರೀಡ್, ಅವುಗಳನ್ನು ಸ್ಫೋಟಿಸಲು ಪ್ರಯತ್ನಿಸಿದಾಗ ಸಿಬ್ಬಂದಿ ಮತ್ತು ಪ್ರಯಾಣಿಕರು ಆತನನ್ನು ನಿಯಂತ್ರಣಕ್ಕೆ ತೆಗೆದುಕೊಂಡರು. ಬಳಿಕ ವಿಮಾನವನ್ನು ಸುರಕ್ಷಿತವಾಗಿ ಬೋಸ್ಟನ್ಗೆ ತಿರುಗಿಸಲಾಯಿತು.
ಈ ಘಟನೆಯ ಬಳಿಕ ಅಮೆರಿಕದ ವಿಮಾನ ನಿಲ್ದಾಣಗಳಲ್ಲಿ ಪ್ರಯಾಣಿಕರ ಶೂಗಳನ್ನು ತೆಗೆದು ಭದ್ರತಾ ತಪಾಸಣೆ ನಡೆಸುವ ನಿಯಮ ಜಾರಿಗೆ ಬಂದಿತ್ತು. ಈ ನಿಯಮವನ್ನು 2025ರಲ್ಲಿ ತೆಗೆದುಹಾಕಲಾಯಿತು.
ಮೊಜಾಂಬಿಕ್ ಏರ್ಲೈನ್ಸ್: ಕಾಕ್ಪಿಟ್ನಲ್ಲಿ ಇಬ್ಬರ ನಿಯಮಕ್ಕೆ ಒತ್ತು
2013ರ ನವೆಂಬರ್ 29ರಂದು ಮೊಜಾಂಬಿಕ್ ಏರ್ಲೈನ್ಸ್ನ ಎಂಬ್ರೇರ್ ಪ್ರಾದೇಶಿಕ ವಿಮಾನವೊಂದು ನಮೀಬಿಯಾದಲ್ಲಿ ಅಪಘಾತಕ್ಕೀಡಾಯಿತು. ದುರ್ಘಟನೆಯಲ್ಲಿ 27 ಪ್ರಯಾಣಿಕರು ಮತ್ತು 6 ಸಿಬ್ಬಂದಿ ಮೃತಪಟ್ಟಿದ್ದರು.
ತನಿಖೆಯ ಪ್ರಕಾರ, ಸಹ ಪೈಲಟ್ ಶೌಚಾಲಯಕ್ಕೆ ತೆರಳಿದ್ದ ಸಂದರ್ಭದಲ್ಲಿ ಕ್ಯಾಪ್ಟನ್ ಹರ್ಮಿನಿಯೊ ಡಾಸ್ ಸ್ಯಾಂಟೋಸ್ ವಿಮಾನದ ನಿಯಂತ್ರಣ ವ್ಯವಸ್ಥೆಯ ಸೆಟ್ಟಿಂಗ್ಗಳನ್ನು ಬದಲಾಯಿಸಿದ್ದರು. ಬಳಿಕ ಅವರು ಸಹ ಪೈಲಟ್ರನ್ನು ಕಾಕ್ಪಿಟ್ನಿಂದ ಹೊರಗೆ ಲಾಕ್ ಮಾಡಿದ್ದರು.
ವಿಮಾನದ ವೇಗ ಮತ್ತು ಎತ್ತರಕ್ಕೆ ಸಂಬಂಧಿಸಿದ ಸೆಟ್ಟಿಂಗ್ಗಳನ್ನು ಹಲವು ಬಾರಿ ಬದಲಾಯಿಸಿದ ಬಳಿಕ ವಿಮಾನ ಅಪಘಾತಕ್ಕೀಡಾಯಿತು.
ಈ ಘಟನೆ ಬಳಿಕ ಫ್ಲೈಟ್ ಡೆಕ್ನಲ್ಲಿ ಯಾವಾಗಲೂ ಇಬ್ಬರು ವ್ಯಕ್ತಿಗಳು ಇರುವುದನ್ನು ಖಚಿತಪಡಿಸಿಕೊಳ್ಳುವಂತೆ ಶಿಫಾರಸು ಮಾಡಲಾಯಿತು. ಅಧಿಕೃತ ಸಿಬ್ಬಂದಿಯನ್ನು ಕಾಕ್ಪಿಟ್ನಿಂದ ಹೊರಗೆ ಲಾಕ್ ಮಾಡುವುದನ್ನು ತಡೆಯಲು ICAO ಮಾನದಂಡ ರೂಪಿಸಬೇಕೆಂಬ ಸಲಹೆಯೂ ನೀಡಲಾಯಿತು.
ಜರ್ಮನ್ವಿಂಗ್ಸ್ ದುರಂತ: ಪೈಲಟ್ಗಳ ಮಾನಸಿಕ ಆರೋಗ್ಯದ ಮೇಲೆ ಗಮನ
2015ರ ಮಾರ್ಚ್ 24ರಂದು ಲುಫ್ತಾನ್ಸಾದ ಕಡಿಮೆ ದರದ ವಿಮಾನಯಾನ ಸಂಸ್ಥೆ ಜರ್ಮನ್ವಿಂಗ್ಸ್ ನಿರ್ವಹಿಸುತ್ತಿದ್ದ ಏರ್ಬಸ್ A320 ವಿಮಾನವು ಫ್ರಾನ್ಸ್ನ ಆಲ್ಪ್ಸ್ ಪರ್ವತ ಪ್ರದೇಶದಲ್ಲಿ ಅಪಘಾತಕ್ಕೀಡಾಯಿತು.
ಸಹ ಪೈಲಟ್ ಆಂಡ್ರಿಯಾಸ್ ಲುಬಿಟ್ಜ್, ಕ್ಯಾಪ್ಟನ್ರನ್ನು ಕಾಕ್ಪಿಟ್ನಿಂದ ಹೊರಗೆ ಲಾಕ್ ಮಾಡಿ, ಉದ್ದೇಶಪೂರ್ವಕವಾಗಿ ವಿಮಾನವನ್ನು ಪರ್ವತಕ್ಕೆ ಅಪ್ಪಳಿಸಿದ್ದ. ದುರಂತದಲ್ಲಿ 150 ಮಂದಿ ಮೃತಪಟ್ಟಿದ್ದರು. ತನಿಖೆಯಲ್ಲಿ ಲುಬಿಟ್ಜ್ನಲ್ಲಿ ಅಪಘಾತಕ್ಕೂ ಹಲವು ತಿಂಗಳುಗಳ ಮೊದಲು ಗಂಭೀರ ಮಾನಸಿಕ ಆರೋಗ್ಯ ಸಮಸ್ಯೆಗಳಿಗೆ ಹೊಂದಿಕೆಯಾಗುವ ಲಕ್ಷಣಗಳು ಕಂಡುಬಂದಿದ್ದವು ಎಂದು ತಿಳಿದುಬಂದಿತು.
ಘಟನೆಯ ಮೂರು ದಿನಗಳ ಬಳಿಕ ಯುರೋಪಿಯನ್ ಯೂನಿಯನ್ ಏವಿಯೇಷನ್ ಸೇಫ್ಟಿ ಏಜೆನ್ಸಿ, ಹಾರಾಟದ ವೇಳೆ ಕನಿಷ್ಠ ಇಬ್ಬರು ವ್ಯಕ್ತಿಗಳು, ಅವರಲ್ಲಿ ಒಬ್ಬರು ಪೈಲಟ್ ಆಗಿರಬೇಕು ಎಂಬ ತಾತ್ಕಾಲಿಕ ಶಿಫಾರಸು ಮಾಡಿತು.
ನಂತರ ಈ ನಿಯಮವನ್ನು ಸಡಿಲಗೊಳಿಸಿ, ಆಯಾ ವಿಮಾನಯಾನ ಸಂಸ್ಥೆಗಳ ನಿರ್ಧಾರಕ್ಕೆ ಬಿಡಲಾಯಿತು. ಆದರೆ ಪೈಲಟ್ಗಳ ಮಾನಸಿಕ ಆರೋಗ್ಯಕ್ಕೆ ಸಂಬಂಧಿಸಿದ ನಿಯಮಗಳನ್ನು ಮತ್ತಷ್ಟು ಬಿಗಿಗೊಳಿಸಿ, ಕಡ್ಡಾಯ ಮಾನಸಿಕ ಮೌಲ್ಯಮಾಪನಕ್ಕೆ ಹೆಚ್ಚಿನ ಒತ್ತು ನೀಡಲಾಯಿತು.
ಮತ್ತೆ ಮುನ್ನೆಲೆಗೆ ಬಂದ ವಿಮಾನ ಭದ್ರತೆ
ಫ್ಲೈದುಬೈ ವಿಮಾನದಲ್ಲಿನ ಇತ್ತೀಚಿನ ಘಟನೆ, ವಿಮಾನದೊಳಗಿನ ಭದ್ರತೆ ಮಾತ್ರವಲ್ಲದೆ ಪೈಲಟ್ಗಳ ಹಿನ್ನೆಲೆ ಪರಿಶೀಲನೆ, ಮಾನಸಿಕ ಆರೋಗ್ಯ ಮೌಲ್ಯಮಾಪನ, ಕಾಕ್ಪಿಟ್ ಪ್ರವೇಶ ನಿಯಮಗಳು ಮತ್ತು ತುರ್ತು ಪರಿಸ್ಥಿತಿಯಲ್ಲಿ ವಿಮಾನ ನಿಯಂತ್ರಣದ ವ್ಯವಸ್ಥೆಗಳ ಬಗ್ಗೆ ಮತ್ತೊಮ್ಮೆ ಪ್ರಶ್ನೆಗಳನ್ನು ಹುಟ್ಟುಹಾಕಿದೆ.
ಕಳೆದ ಎರಡು ದಶಕಗಳಲ್ಲಿ ನಡೆದ ಪ್ರತಿ ಪ್ರಮುಖ ವಿಮಾನಯಾನ ಘಟನೆಗಳ ಬಳಿಕ ಭದ್ರತಾ ನಿಯಮಗಳಲ್ಲಿ ಬದಲಾವಣೆಗಳನ್ನು ಮಾಡಲಾಗಿದೆ. ಇದೀಗ ಫ್ಲೈದುಬೈ ಘಟನೆಯೂ ವಿಮಾನಯಾನ ಕ್ಷೇತ್ರದಲ್ಲಿ ಮತ್ತಷ್ಟು ಭದ್ರತಾ ಕ್ರಮಗಳ ಅಗತ್ಯದ ಬಗ್ಗೆ ಹೊಸ ಚರ್ಚೆಗೆ ಕಾರಣವಾಗಿದೆ.

