ಎಂಜಿನಿಯರಿಂಗ್ ಸೇರಿದಂತೆ ವಿವಿಧ ವೃತ್ತಿಪರ ಕೋರ್ಸ್ ಗಳ ಪ್ರವೇಶಕ್ಕೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರ(KEA) ಸಾಮಾನ್ಯ ಪ್ರವೇಶ ಪರೀಕ್ಷೆ(ಸಿಇಟಿ) ನಡೆಸಲಿದ್ದು, ಇದಕ್ಕೆ ಅರ್ಜಿ ಸಲ್ಲಿಸುವ ಕೊನೆ ದಿನಾಂಕವನ್ನು ಫೆಬ್ರುವರಿ 22ರವರೆಗೆ ವಿಸ್ತರಿಸಲಾಗಿದೆ.
ಇದುವರೆಗೂ 2.9 ಲಕ್ಷ ಮಂದಿ ಆಧಾರ್ ಸಂಖ್ಯೆ ಮೂಲಕ ನೋಂದಣಿ ಮಾಡಿಕೊಂಡಿದ್ದು ಇನ್ನೂ ಅನೇಕರು ಫೆ.17ರ ಕೊನೆ ದಿನಾಂಕವನ್ನು ವಿಸ್ತರಿಸುವಂತೆ ಕೋರಿದ್ದಾರೆ, ಆ ಪ್ರಕಾರ ಅರ್ಜಿ ಸಲ್ಲಿಸಲು ಫೆ.22 ಹಾಗೂ ಶುಲ್ಕ ಪಾವತಿಗೆ ಫೆ.24ರವರೆಗೆ ದಿನಾಂಕ ವಿಸ್ತರಿಸಲಾಗಿದೆ.
ಇದುವರೆಗೆ ನೋಂದಣಿ ಮಾಡಿಕೊಂಡಿರುವ ಒಟ್ಟು ಅಭ್ಯರ್ಥಿಗಳ ಪೈಕಿ 2.5 ಲಕ್ಷ ಮಂದಿ ಅರ್ಜಿ ಶುಲ್ಕ ಪಾವತಿಸಿದ್ದಾರೆ. ಸ್ಯಾಟ್ಸ್ ಮೂಲಕ 1.8 ಲಕ್ಷ ಅಭ್ಯರ್ಥಿಗಳ ದಾಖಲೆಗಳ ಪರಿಶೀಲನೆ ಆನ್ಲೈನ್ ಮೂಲಕ ಆಗಿದೆ. ಕಾಲೇಜು ಹಂತದಲ್ಲಿ 35 ಸಾವಿರ ಅಭ್ಯರ್ಥಿಗಳ ದಾಖಲೆ ಪರಿಶೀಲನೆ ಮಾಡಲಾಗಿದೆ.
ಈಗಾಗಲೇ ಅರ್ಜಿ ಸಲ್ಲಿಸಿರುವ ಅಭ್ಯರ್ಥಿಗಳು ತಮ್ಮ ಅರ್ಜಿಗಳಲ್ಲಿ ಏನಾದರು ಲೋಪಗಳು/ತಪ್ಪುಗಳು ಇದ್ದಲ್ಲಿ ಸರಿಪಡಿಸಿಕೊಳ್ಳಬಹುದು ಎಂದು ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಆಡಳಿತಾಧಿಕಾರಿ ಇಸ್ಲಾವುದ್ದೀನ್ ಗದ್ಯಾಳ ತಿಳಿಸಿದ್ದಾರೆ.

