ಬಸ್ರೂರು ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ಪ್ರಸಿದ್ಧ ಪಟ್ಟಣ. ರಾಜ್ಯದ ಹಲವು ಶ್ರೀಮಂತ ನಗರಗಳ ಹಾಗೆ ಲೂಟಿಕೋರರು ದೋಚುವ ಮುನ್ನ ಬಸ್ರೂರು ಸಹ ಶ್ರೀಮಂತತೆಯಿಂದ ಕೂಡಿದ್ದ ಪಟ್ಟಣ. ವರಾಹಿ ನದಿ ದಂಡೆಯಲ್ಲಿದ್ದ ಬಸ್ರೂರು ಕರಾವಳಿಯ ಪ್ರಮುಖ ಬಂದರು ಪಟ್ಟಣವಾಗಿ ಗುರುತಿಸಿಕೊಂಡಿತ್ತು. ಅಕ್ಕಿ, ಮಸಾಲೆಗಳು, ವಸ್ತ್ರಗಳು ಮತ್ತು ಇತರ ವಸ್ತುಗಳ ವ್ಯಾಪಾರಕ್ಕೆ ಪ್ರಸಿದ್ಧವಾಗಿದ್ದ ಬಸ್ರೂರು ಪಟ್ಟಣದ ಮೇಲೆ ದಂಡೆತ್ತಿ ಬಂದಿದ್ದ ಡಚ್ಚರು ಹಾಗೂ ಪೋರ್ಚುಗೀಸರು ಆಕ್ರಮಣ ಮಾಡಿಕೊಂಡು ಕೊಳ್ಳೆ ಹೊಡೆದಿದ್ದರು.
ಹೀಗೆ ವಿದೇಶಿಗರ ಕೈಗೆ ಸಿಕ್ಕು ನಲುಗಿದ್ದ ಬಸ್ರೂರಿಗೆ 1655ರ ಫೆಬ್ರವರಿ 13ರಂದು ಮರಾಠ ದೊರೆ ಛತ್ರಪತಿ ಶಿವಾಜಿ ಪೋರ್ಚುಗೀಸರ ವಿರುದ್ಧ ಹೋರಾಡಿ ಸ್ವತಂತ್ರ ಕೊಡಿಸಿದರು ಎಂದು ಈ ದಿನವನ್ನು ‘ಬಸ್ರೂರು ಸ್ವತಂತ್ರ ದಿನ’ ಎಂದು ಆಚರಿಸಲಾಗುತ್ತದೆ.
ಇಂದು ( ಫೆಬ್ರವರಿ 13 ) ಈ ದಿನಕ್ಕೆ 360 ವರ್ಷಗಳು ಕಳೆದಿದ್ದು, ಎಕ್ಸ್ ವೇದಿಕೆಯಲ್ಲಿ ಇದು ‘ಬಸ್ರೂರು ಸ್ವತಂತ್ರ ದಿನ’ವಲ್ಲ ಬದಲಿಗೆ ‘ಬಸ್ರೂರು ಲೂಟಿಗೈದ ದಿನ’ ಎಂದು ಸಾಕಷ್ಟು ಪೋಸ್ಟ್‌ಗಳು ಹರಿದಾಡುತ್ತಿವೆ. #BasrurLootDay ಎಂಬ ಹ್ಯಾಷ್‌ಟ್ಯಾಗ್‌ನ ಅಡಿಯಲ್ಲಿ ಅನೇಕ ಕನ್ನಡಿಗರು ಟ್ವೀಟ್‌ಗಳನ್ನು ಮಾಡಿದ್ದು, ಆ ದಿನ ಛತ್ರಪತಿ ಶಿವಾಜಿ ಪೋರ್ಚುಗೀಸರಿಂದ ಬಸ್ರೂರಿಗೆ ಬಿಡುಗಡೆ ಕೊಡಿಸಲಿಲ್ಲ, ಬದಲಾಗಿ ಸಂಚು ಮಾಡಿ ಬಸ್ರೂರಿನ ಆಸ್ತಿಯನ್ನು ಲೂಟಿ ಮಾಡಿದ ಎಂದು ಬರೆದುಕೊಳ್ಳುತ್ತಿದ್ದಾರೆ.
1655ರ ಫೆಬ್ರವರಿ 13 ಶಿವರಾತ್ರಿ ಹಬ್ಬವಾದ ಕಾರಣ ಅಲ್ಲಿನ ವ್ಯಾಪಾರಿಗಳು ವ್ಯಾಪಾರದ ಹಣವನ್ನೆಲ್ಲ ಸಂಗ್ರಹಿಸಿರುತ್ತಾರೆ ಎಂಬ ಮಾಹಿತಿ ಹೊಂದಿದ್ದ ಶಿವಾಜಿ ಸರಿಯಾದ ಸಮಯ ನೋಡಿ ಸಂಪತ್ತನ್ನೆಲ್ಲ ಲೂಟಿ ಮಾಡಿದ್ದ ದಿನ ಎಂದು ಆರೋಪಿಸಿ ಈ ‘ಬಸ್ರೂರ್ ಲೂಟ್ ಡೇ’ ಟ್ರೆಂಡ್ ಮಾಡುತ್ತಿದ್ದಾರೆ ಹಲವು ಕನ್ನಡಿಗರು.
ಇನ್ನು ಇದಕ್ಕೆ ಸಾಕ್ಷಿ ಎಂದು ಲೇಖಕ ಸರ್ ಜಾದುನಾಥ್ ಸರ್ಕಾರ್ ಬರೆದಿರುವ ‘ಶಿವಾಜಿ & ಹೀಸ್ ಟೈಮ್ಸ್’ ಪುಸ್ತಕದಲ್ಲಿ ಉಲ್ಲೇಖಿಸಿರುವ ಬಸ್ರೂರು ಮೇಲಿನ ದಾಳಿ ಭಾಗದ ಫೋಟೊಗಳನ್ನು ಸಹ ಹಂಚಿಕೊಳ್ಳಲಾಗಿದೆ. ಇದರಲ್ಲೂ ಸಹ ಶಿವಾಜಿ ಬಸ್ರೂರು, ಗೋಕರ್ಣ, ಹೊನ್ನಾವರ ಹಾಗೂ ಹುಬ್ಬಳ್ಳಿಯಲ್ಲಿ ಲೂಟಿ ಮಾಡಿದ ಎಂದು ಉಲ್ಲೇಖಿಸಲಾಗಿದೆ.
ಹೀಗೆ ಈ ದಿನವನ್ನು ಒಂದು ಗುಂಪು ಬಸ್ರೂರು ಸ್ವತಂತ್ರ ದಿನವೆಂದರೆ ಇನ್ನೊಂದು ಗುಂಪು ಬಸ್ರೂರು ಲೂಟಿಗೈದ ದಿನವನ್ನು ಮುಚ್ಚಿಡಲು ಬಸ್ರೂರು ಸ್ವತಂತ್ರ ದಿನವೆಂದು ನಕಲಿ ಹೆಸರಿನಲ್ಲಿ ಆಚರಿಸುವ ಆಚರಣೆ ಎಂದು ಆರೋಪಿಸುತ್ತಾ ಈ ಟ್ರೆಂಟ್ ಮಾಡುತ್ತಿದೆ.

