ಕೇಂದ್ರ ಸರ್ಕಾರ ‘ಪ್ರಸಾದ’ ಯೋಜನೆಯಡಿ ಕರ್ನಾಟಕಕ್ಕೆ ಬಂಪರ್ ಕೊಡುಗೆ ನೀಡಿದೆ. ಈ ಕುರಿತು ಕೇಂದ್ರ ಪ್ರವಾಸೋದ್ಯಮ ಮತ್ತು ಸಂಸ್ಕೃತಿ ಸಚಿವ ಗಜೇಂದ್ರ ಸಿಂಗ್ ಶೇಖಾವತ್ ರಾಜ್ಯಸಭೆಯಲ್ಲಿ ಲಿಖಿತ ಉತ್ತರ ನೀಡಿದ್ದಾರೆ.
ಸಚಿವರ ಮಾಹಿತಿ ಪ್ರಕಾರ ಪ್ರಸಾದ್ (PRASHAD) ಯೋಜನೆಯಡಿ ಪ್ರವಾಸೋದ್ಯಮ ಮೂಲಸೌಕರ್ಯ ಅಭಿವೃದ್ಧಿ ಮಾಡಲಾಗುತ್ತದೆ. ಯೋಜನೆಯಡಿ ಮಾರ್ಚ್ 2025ರಲ್ಲಿ ಕರ್ನಾಟಕದ ಬೀದರ್ ಜಿಲ್ಲೆಗೆ 22.25 ಕೋಟಿ ರೂ. ಅನುದಾನ ನೀಡಲಾಗಿದೆ.
ತೀರ್ಥಯಾತ್ರೆ ಪುನಶ್ಚೇತನ ಮತ್ತು ಆಧ್ಯಾತ್ಮಿಕ, ಪರಂಪರೆ ವರ್ಧನೆ ಅಭಿಯಾನ (ಪ್ರಸಾದ್) ಅಡಿಯಲ್ಲಿ ಪ್ರವಾಸೋದ್ಯಮ ಸಚಿವಾಲಯವು ದೇಶದಾದ್ಯಂತ ಗುರುತಿಸಲಾದ ಧಾರ್ಮಿಕ ಮತ್ತು ಪರಂಪರೆಯ ತಾಣಗಳಲ್ಲಿ ಪ್ರವಾಸೋದ್ಯಮ ಮೂಲಸೌಕರ್ಯಗಳ ಅಭಿವೃದ್ಧಿಗಾಗಿ ರಾಜ್ಯ ಸರ್ಕಾರಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಆರ್ಥಿಕ ನೆರವು ನೀಡುತ್ತದೆ.
2025ರ ಸಾಲಿನಲ್ಲಿ ಪ್ರಸಾದ ಯೋಜನೆಯಡಿ ಒಟ್ಟು 7 ಯೋಜನೆಗಳಿಗೆ ಅನುಮೋದನೆ ನೀಡಲಾಗಿದೆ. ಯೋಜನೆ ಮಾರ್ಗಸೂಚಿಗಳ ಪ್ರಕಾರ, ಯಾತ್ರಿಕರ ಸಂದಣಿ ನಿರ್ವಹಿಸುವ ತಾಣದ ಸಾಮರ್ಥ್ಯವನ್ನು ಗಣನೆಗೆ ತೆಗೆದುಕೊಂಡು ತೀರ್ಥಯಾತ್ರಾ ಸ್ಥಳಗಳನ್ನು ಆಯ್ಕೆ ಮಾಡಲಾಗುತ್ತದೆ.
ಸುರಕ್ಷತೆ, ನೈರ್ಮಲ್ಯ ಮತ್ತು ಪ್ರವೇಶದ ಕೊರತೆಗಳನ್ನು ನೀಗಿಸಲು ಯೋಜನೆಗಳ ಅಡಿಯಲ್ಲಿ ನೆರವು ನೀಡಲಾಗುತ್ತದೆ. ಇದರಲ್ಲಿ ಪಾದಚಾರಿ ಮಾರ್ಗಗಳ ಅಭಿವೃದ್ಧಿ, ಬೆಳಕಿನ ವ್ಯವಸ್ಥೆ, ಸಿಸಿಟಿವಿ ಕಣ್ಗಾವಲು, ಕುಡಿಯುವ ನೀರಿನ ಸೌಲಭ್ಯಗಳು, ಶೌಚಾಲಯಗಳು, ಘನತ್ಯಾಜ್ಯ ನಿರ್ವಹಣಾ ವ್ಯವಸ್ಥೆಗಳು, ಅಗ್ನಿಶಾಮಕ ದಳ, ಅಗ್ನಿಶಾಮಕ ಅಲಾರಂ, ಸೂಚನಾ ಫಲಕಗಳು ಸೇರಿದಂತೆ ಯಾತ್ರಿಕರಿಗೆ ಸುರಕ್ಷಿತ ಮತ್ತು ನೈರ್ಮಲ್ಯಯುತ ವಾತಾವರಣವನ್ನು ಖಚಿತಪಡಿಸಿಕೊಳ್ಳುವ ಕ್ರಮಗಳನ್ನು ಕೈಗೊಳ್ಳಬಹುದು.
ಯೋಜನೆಯ ಮಾರ್ಗಸೂಚಿಗಳಿಗೆ ಅನುಗುಣವಾಗಿ, ಆಯಾ ರಾಜ್ಯ ಸರ್ಕಾರ/ ಕೇಂದ್ರಾಡಳಿತ ಪ್ರದೇಶದ ಆಡಳಿತವು ಸಂಬಂಧಿತ ಆಡಳಿತ ಮಂಡಳಿಗಳು, ಸ್ಥಳೀಯ ಸಂಸ್ಥೆಗಳು ಮತ್ತು ಇತರ ಪಾಲುದಾರರೊಂದಿಗೆ ಸಮಾಲೋಚಿಸಿ ಸಮಗ್ರ ವಿವರವಾದ ಯೋಜನಾ ವರದಿಯನ್ನು ರೂಪಿಸುತ್ತದೆ.
ಸದರಿ ಯೋಜನೆಯಡಿ ಮಂಜೂರಾದ ಯೋಜನೆಗಳನ್ನು ಸಂಬಂಧಪಟ್ಟ ರಾಜ್ಯ/ ಕೇಂದ್ರಾಡಳಿತ ಸರ್ಕಾರಗಳು ಅನುಷ್ಠಾನಗೊಳಿಸುತ್ತವೆ. ಯೋಜನೆಯಡಿ ನಿಧಿಯ ಮಾದರಿಯು ಯೋಜನೆಯ 5ನೇ ಕಂತನ್ನು, ಅಂದರೆ ಯೋಜನಾ ವೆಚ್ಚದ ಶೇಕಡಾ 5ರಷ್ಟನ್ನು ಯಶಸ್ವಿ ಕಾರ್ಯಾಚರಣೆ ಮತ್ತು ನಿರ್ವಹಣೆಯ ನಂತರ ಬಿಡುಗಡೆ ಮಾಡಲಾಗುತ್ತದೆ.
ಹೀಗೆ ಯಾತ್ರಾಸ್ಥಳದಲ್ಲಿ ಅಭಿವೃದ್ಧಿಪಡಿಸಲಾದ ಮೂಲಸೌಕರ್ಯಗಳನ್ನು ಸಂಬಂಧಪಟ್ಟ ರಾಜ್ಯ ಸರ್ಕಾರ/ ಕೇಂದ್ರಾಡಳಿತ ಪ್ರದೇಶದ ಆಡಳಿತದ ಮೂಲಕ ಆಯಾ ದೇವಾಲಯದ ಟ್ರಸ್ಟ್ ಅಥವಾ ಧಾರ್ಮಿಕ ಟ್ರಸ್ಟ್ಗಳಿಗೆ ಹಸ್ತಾಂತರಿಸಲಾಗುತ್ತದೆ.

