ಬೆಂಗಳೂರು: ಮತದಾರರ ಪಟ್ಟಿಯ ಸಮಗ್ರ ಪರಿಷ್ಕರಣೆ (SIR) ಆರಂಭದಲ್ಲಿ ವ್ಯಾಪಕ ಅಕ್ರಮ ಎಸಗಿದ ಕಾಂಗ್ರೆಸ್ ಈಗ ಅದರ ವಿರುದ್ಧ ಮಾತನಾಡುತ್ತಿರುವುದು ನಾಚಿಕೆಗೇಡು ಎಂದು ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ವಾಗ್ದಾಳಿ ನಡೆಸಿದ್ದಾರೆ.
ಮುಖ್ಯಮಂತ್ರಿ ಮತ್ತು ಅವರ ಸಂಪುಟ ಸದಸ್ಯರು ಸಂಪುಟ ಸಭೆಯನ್ನೇ ಅಲಕ್ಷಿಸಿ ರಸ್ತೆಯಲ್ಲಿ ಕೂತು ನಡೆಸಿದ ಪ್ರಹಸನ ಹಾಸ್ಯಾಸ್ಪದ. ಪ್ರತಿಭಟನೆ ನಡೆಸಿ ವಾಹನ ಸಂಚಾರ ಮತ್ತು ಜನತೆಗೆ ಅಡ್ಡಿಪಡಿಸಿದ ಕಾಂಗ್ರೆಸ್ ನಾಯಕರ ವಿರುದ್ಧ ಪೊಲೀಸರು ಕೂಡಲೇ ಪ್ರಕರಣ ದಾಖಲಿಸಬೇಕು ಎಂದು ಆಗ್ರಹಿಸಿದರು.
ವೋಟ್ ಚೋರಿ ಎಂದು ಕಾಂಗ್ರೆಸ್ ಅನಗತ್ಯವಾಗಿ ರಂಪ ಮಾಡುತ್ತಿರುವುದು ಭೂತದ ಬಾಯಲ್ಲಿ ಭಗವದ್ಗೀತೆ ಬಂದ ಹಾಗಿದೆ. ಇವರು ಕಲ್ಯಾಣ ಮಂಟಪಗಳು, ಸಮುದಾಯ ಭವನಗಳು, ಮನೆಗಳು ಸೇರಿ ನಾನಾ ಕಡೆ ಜನರನ್ನು ಗುಂಪುಗುಂಪಾಗಿ ಸೇರಿಸಿ ಮತದಾರರ ಪಟ್ಟಿ ಪರಿಷ್ಕರಣೆ ಮಾಡಿಸಿದ್ದನ್ನು ನೋಡಿದ್ದೇವೆ. ಅದರ ವಿರುದ್ಧ @JanataDal_S ವತಿಯಿಂದ ಚುನಾವಣಾ ಆಯೋಗಕ್ಕೆ ದೂರು ನೀಡಿದ್ದೇವೆ. ಆಮೇಲೆ ಎನ್ ಡಿಎ ಮೈತ್ರಿಕೂಟದ ನಾಯಕರೆಲ್ಲರೂ ಹೋಗಿ ಆಯೋಗಕ್ಕೆ ಪಿರ್ಯಾದು ನೀಡಿದ್ದೇವೆ. ಆದರೂ ಅಕ್ರಮ ಎಸಗಿದ ಕಾಂಗ್ರೆಸ್ ಪಕ್ಷದವರೇ ‘ಅಕ್ರಮ ಅಕ್ರಮ’ ಎಂದು ಬಾಯಿ ಬಡಿದುಕೊಳ್ಳುತ್ತಿದ್ದಾರೆ. ನಾವು ದೂರು ಕೊಟ್ಟಾಗ ಮೌನಕ್ಕೆ ಶರಣಾಗಿದ್ದ ಸರಕಾರ, ಈಗ ಮಾತನಾಡುತ್ತಿದೆ. ದೆಹಲಿ ನಾಯಕರು ಬಿಸಿ ಮುಟ್ಟಿಸಿದ ಮೇಲೆ ಇವರು ಈ ಪ್ರಹಸನ ಆರಂಭ ಮಾಡಿದ್ದಾರೆ ಎಂದರು.
3 ದಿನಗಳ ಹಿಂದೆ ನಾನು ನೈಸ್ ಯೋಜನೆ ಬಗ್ಗೆ ಮಾಧ್ಯಮಗೋಷ್ಠಿ ನಡೆಸಿ, ನೈಸ್ ಕಂಪನಿ ಜತೆ ಶಾಮೀಲಾಗಿ ಮುಖ್ಯಮಂತ್ರಿ ಮತ್ತು ಅವರ ಕುಟುಂಬ ಸದಸ್ಯರು ಯೋಜನೆಯ ಭೂಮಿ ಲಪಟಾಯಿಸುವ ಬಗ್ಗೆ ದಾಖಲೆಗಳ ಸಮೇತ ಬಹಿರಂಗ ಮಾಡಿದ್ದೆ. ಆ ವಿಷಯ ರಾಜಕೀಯವಾಗಿ, ಸಾರ್ವಜನಿಕವಾಗಿ ತೀವ್ರ ಚರ್ಚೆಗೆ ಒಳಗಾಗುತ್ತಿರುವ ಸಂದರ್ಭದಲ್ಲಿ ಜನರ ಗಮನ ಬೇರೆಡೆಗೆ ಸೆಳೆಯಲು ಈ SIR ವಿಷಯ ಮುನ್ನೆಲೆಗೆ ತಂದಿದ್ದಾರೆ ಮುಖ್ಯಮಂತ್ರಿ. ಅಂಗೈ ಹುಣ್ಣಿಗೆ ಕನ್ನಡಿ ಬೇಕಿಲ್ಲ!! ಎಂದು ಟಾಂಗ್ ನೀಡಿದ್ದಾರೆ.
ಕಾಂಗ್ರೆಸ್ನವರಿಂದಲೇ 420 ಕೆಲಸ: ಬಿಜೆಪಿ ಮೇಲೆ ಗೂಬೆ ಕೂರಿಸುವ ಕೆಲಸ: ವಿಜಯೇಂದ್ರ ಆರೋಪ
ಬೆಂಗಳೂರು: ಎಸ್ಐಆರ್ (SIR) ಪ್ರಕ್ರಿಯೆಯಲ್ಲಿ ಅಕ್ರಮ ಮತದಾರರ ಹೆಸರನ್ನು ಪಟ್ಟಿಯಿಂದ ತೆಗೆದುಹಾಕುವುದು ಬಿಜೆಪಿ, ಕಾಂಗ್ರೆಸ್ ಹಾಗೂ ಜೆಡಿಎಸ್ ಸೇರಿದಂತೆ ಎಲ್ಲಾ ರಾಜಕೀಯ ಪಕ್ಷಗಳ ಕರ್ತವ್ಯವಾಗಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಪ್ರತಿಪಾದಿಸಿದ್ದಾರೆ.
ಎಸ್ಐಆರ್ ಆರಂಭವಾದ ಸಮಯದಲ್ಲಿ ಕಾಂಗ್ರೆಸ್ ಪುಢಾರಿಗಳು ಸಭಾಂಗಣಗಳು (ಚೌಟ್ರಿ) ಹಾಗೂ ಮದರಸಾಗಳಲ್ಲಿ ಬಿಎಲ್ಒಗಳಿಂದ ಅರ್ಜಿಗಳನ್ನು ಪಡೆದು ಅಕ್ರಮವಾಗಿ ಹೆಸರುಗಳನ್ನು ಸೇರಿಸುವ ‘420’ ಕೆಲಸ ಮಾಡಿದ್ದಾರೆ ಎಂದು ಗಂಭೀರ ಆರೋಪ ಮಾಡಿದರು.
ಕಾಂಗ್ರೆಸ್ ನವರೇ ಇಂತಹ ಕೆಲಸ ಮಾಡಿ ಈಗ ಬಿಜೆಪಿಯವರ ವಿರುದ್ಧ ಗೂಬೆ ಕೂರಿಸುವ ಕೆಲಸ ಮಾಡುತ್ತಿದ್ದಾರೆ ಎಂದರು. ಈಗ ಆ ತಪ್ಪನ್ನು ಬಿಜೆಪಿಯ ಮೇಲೆ ಹೊರಿಸಲಾಗುತ್ತಿದೆ ಎಂದು ಕಿಡಿಕಾರಿದರು.
50 ಲಕ್ಷ ಮತದಾರರ ಹೆಸರುಗಳನ್ನು ಡಿಲೀಟ್ ಮಾಡಲಾಗಿದೆ ಎಂಬ ಮುಖ್ಯಮಂತ್ರಿಗಳ ಆರೋಪವನ್ನು ಸಾಬೀತುಪಡಿಸುವಂತೆ ಸವಾಲೆಸೆದ ವಿಜಯೇಂದ್ರ, ದೆಹಲಿಯಲ್ಲಿ ರಾಹುಲ್ ಗಾಂಧಿ ನಡೆಸುತ್ತಿರುವ ಆರೋಪಗಳಿಗೆ ಶಕ್ತಿ ತುಂಬಲು ರಾಜ್ಯ ಕಾಂಗ್ರೆಸ್ ನಾಯಕರು ಇಲ್ಲಿ ನಾಟಕವಾಡುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದರು.

