HomeIndiaಹೆಣ್ಣಾಗಲು ಬಯಸಿದ್ದ 17 ವರ್ಷದ ಮಗ; ವಿರೋಧಿಸಿದ ತಾಯಿಯನ್ನೇ ಕೋಪದಲ್ಲಿ ಹೊಡೆದು ಕೊಂದ!

ಹೆಣ್ಣಾಗಲು ಬಯಸಿದ್ದ 17 ವರ್ಷದ ಮಗ; ವಿರೋಧಿಸಿದ ತಾಯಿಯನ್ನೇ ಕೋಪದಲ್ಲಿ ಹೊಡೆದು ಕೊಂದ!

ಲಖನೌ: ಲಿಂಗ ಪರಿವರ್ತನೆಗೆ ಸಂಬಂಧಿಸಿದ ಶಸ್ತ್ರಚಿಕಿತ್ಸೆ ಮಾಡಿಸಿಕೊಳ್ಳುವ ವಿಚಾರವಾಗಿ ತಾಯಿಯೊಂದಿಗೆ ನಡೆದ ಜಗಳದ ಬಳಿಕ 17 ವರ್ಷದ ಬಾಲಕನೊಬ್ಬ ತನ್ನ 42 ವರ್ಷದ ತಾಯಿಯನ್ನು ಕಬ್ಬಿಣದ ರಾಡ್‌ನಿಂದ ಹೊಡೆದು ಹತ್ಯೆ ಮಾಡಿರುವ ಆರೋಪ ಕೇಳಿಬಂದಿದೆ. ಉತ್ತರ ಪ್ರದೇಶದ ಲಖನೌನ ರಾಜೇಂದ್ರ ನಗರ ಪ್ರದೇಶದಲ್ಲಿ ಗುರುವಾರ ಈ ಘಟನೆ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಹೆಣ್ಣಾಗಲು ಬಯಸಿದ್ದ 17 ವರ್ಷದ ಬಾಲಕನಿಗೆ ಲಿಂಗ ಪರಿವರ್ತನೆ ಶಸ್ತ್ರಚಿಕಿತ್ಸೆ ಮಾಡಿಸಿಕೊಳ್ಳುವ ವಿಚಾರದಲ್ಲಿ ತಾಯಿ ವಿರೋಧ ವ್ಯಕ್ತಪಡಿಸಿದ್ದಕ್ಕೆ ಜಗಳ ನಡೆದಿದೆ ಎನ್ನಲಾಗಿದೆ. ಈ ವೇಳೆ ಕೋಪಗೊಂಡ ಬಾಲಕ ಕಬ್ಬಿಣದ ರಾಡ್‌ನಿಂದ ತಾಯಿಯ ತಲೆಗೆ ಹೊಡೆದಿದ್ದು, ಗಂಭೀರವಾಗಿ ಗಾಯಗೊಂಡ 42 ವರ್ಷದ ಮಹಿಳೆ ಮೃತಪಟ್ಟಿದ್ದಾರೆ. ಘಟನೆ ಬಳಿಕ ಬಾಲಕನೇ ಪೊಲೀಸರಿಗೆ ಕರೆ ಮಾಡಿ ಮಾಹಿತಿ ನೀಡಿದ್ದು, ಪೊಲೀಸರು ಆತನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.

ಪೊಲೀಸರ ಪ್ರಕಾರ, ಬಾಲಕ ಹೆಣ್ಣಿನಂತೆ ಜೀವನ ನಡೆಸುತ್ತಿದ್ದ ಹಾಗೂ ತನ್ನ ಲಿಂಗ ಪರಿವರ್ತನೆಯ ಭಾಗವಾಗಿ ಶಸ್ತ್ರಚಿಕಿತ್ಸೆ ಮಾಡಿಸಿಕೊಳ್ಳಲು ಬಯಸಿದ್ದ. ಈ ವಿಚಾರ ಕುಟುಂಬದಲ್ಲಿ ಹಲವು ದಿನಗಳಿಂದ ಒತ್ತಡಕ್ಕೆ ಕಾರಣವಾಗಿತ್ತು ಎನ್ನಲಾಗಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ರಾಜೇಂದ್ರ ನಗರ ಕ್ರಾಸಿಂಗ್ ಸಮೀಪದ ವಿಷನ್ ಅಪಾರ್ಟ್‌ಮೆಂಟ್‌ನಲ್ಲಿ ಈ ಘಟನೆ ನಡೆದಿದ್ದು, ನಾಕಾ ಹಿಂದೋಲಾ ಪೊಲೀಸ್ ಠಾಣೆ ವ್ಯಾಪ್ತಿಗೆ ಬರುತ್ತದೆ.

ಪ್ರಾಥಮಿಕ ತನಿಖೆಯ ಪ್ರಕಾರ, ಶಸ್ತ್ರಚಿಕಿತ್ಸೆ ಮಾಡಿಸಿಕೊಳ್ಳುವ ನಿರ್ಧಾರದಿಂದ ಹಿಂದೆ ಸರಿಯುವಂತೆ ಬಾಲಕನ ತಾಯಿ ಸಲಹೆ ನೀಡಿದಾಗ ಇಬ್ಬರ ನಡುವೆ ವಾಗ್ವಾದ ನಡೆದಿದೆ ಎನ್ನಲಾಗಿದೆ. ವೈದ್ಯಕೀಯ ಹಾಗೂ ಮಾನಸಿಕ ತಜ್ಞರ ನೆರವು ಪಡೆಯುವಂತೆ ತಾಯಿ ಸೂಚಿಸಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

ಈ ವೇಳೆ ಜಗಳ ವಿಕೋಪಕ್ಕೆ ತಿರುಗಿದ್ದು, ಬಾಲಕ ಕಬ್ಬಿಣದ ರಾಡ್‌ನಿಂದ ತಾಯಿಯ ತಲೆಗೆ ಹೊಡೆದಿದ್ದಾನೆ ಎನ್ನಲಾಗಿದೆ. ಗಂಭೀರವಾಗಿ ಗಾಯಗೊಂಡ ಮಹಿಳೆ ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಘಟನೆಯ ಬಳಿಕ ಬಾಲಕನೇ ಪೊಲೀಸರಿಗೆ ಕರೆ ಮಾಡಿ ನಡೆದಿರುವ ವಿಚಾರವನ್ನು ತಿಳಿಸಿದ್ದಾನೆ ಎನ್ನಲಾಗಿದೆ. ಕೂಡಲೇ ಅಪಾರ್ಟ್‌ಮೆಂಟ್‌ಗೆ ಧಾವಿಸಿದ ಪೊಲೀಸರು ಮಹಿಳೆ ಮೃತಪಟ್ಟಿರುವುದನ್ನು ಕಂಡುಕೊಂಡಿದ್ದು, ಬಾಲಕ ಕೂಡ ಸ್ಥಳದಲ್ಲೇ ಇದ್ದನು. ಬಳಿಕ ಆತನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗಿದೆ.

ಹಿರಿಯ ಪೊಲೀಸ್ ಅಧಿಕಾರಿಗಳು ಹಾಗೂ ವಿಧಿವಿಜ್ಞಾನ ತಂಡ ಅಪಾರ್ಟ್‌ಮೆಂಟ್‌ಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಶಂಕಿತ ಕೊಲೆ ಆಯುಧ ಸೇರಿದಂತೆ ಹಲವು ಸಾಕ್ಷ್ಯಗಳನ್ನು ಸಂಗ್ರಹಿಸಿದೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ.

ನಾಕಾ ಹಿಂದೋಲಾ ಠಾಣೆಯ ಎಸ್‌ಎಚ್‌ಒ ವಿವೇಕ್ ಕುಮಾರ್ ಚೌಧರಿ ಮಾತನಾಡಿ, ಪ್ರಾಥಮಿಕ ತನಿಖೆಯಲ್ಲಿ ಬಾಲಕನಲ್ಲಿ ಲಿಂಗ ಗುರುತಿಗೆ ಸಂಬಂಧಿಸಿದ ಮಾನಸಿಕ ಅಸಮಾಧಾನ (gender dysphoria) ಇರಬಹುದೆಂಬ ಅಂಶ ಬೆಳಕಿಗೆ ಬಂದಿದೆ ಎಂದು ತಿಳಿಸಿದ್ದಾರೆ. ತನಿಖೆ ಮುಂದುವರಿದಂತೆ ತಜ್ಞರು ಹಾಗೂ ವೈದ್ಯಕೀಯ ವೃತ್ತಿಪರರು ಬಾಲಕನಿಗೆ ಕೌನ್ಸೆಲಿಂಗ್ ನೀಡಲಿದ್ದಾರೆ ಎಂದು ಹೇಳಿದ್ದಾರೆ.

ಆದರೆ ಘಟನೆ ನಡೆದ ನಿಖರ ಕ್ರಮ ಇನ್ನೂ ಸ್ಪಷ್ಟವಾಗಿಲ್ಲ. ವಿಧಿವಿಜ್ಞಾನ ಪರೀಕ್ಷೆ ಹಾಗೂ ಮುಂದಿನ ತನಿಖೆಯ ಬಳಿಕ ಘಟನೆಯ ಸಂಪೂರ್ಣ ವಿವರ ತಿಳಿದುಬರಲಿದೆ ಎಂದು ಪೊಲೀಸರು ತಿಳಿಸಿದ್ದಾರೆ.

For Latest News Updates, Join Our Whatsapp Community🚩
ranjith
ranjith
Ranjith S S has a decade of experience in digital media. covering stories that spark conversations across the internet, Breaking news, viral moments and celebrity updates to everyday news that gets people talking.
RELATED ARTICLES

LEAVE A REPLY

Please enter your comment!
Please enter your name here

Most Popular