ಪ್ರಸ್ತುತ ನಡೆಯುತ್ತಿರುವ ಐಸಿಸಿ ಪುರುಷರ ಟಿ ಟ್ವೆಂಟಿ ವಿಶ್ವಕಪ್ 2026 ಟೂರ್ನಿಯಲ್ಲಿ ಪಾಕಿಸ್ತಾನ ವಿವಾದದ ಜತೆಗೆ ಕಣಕ್ಕಿಳಿದು ಎರಡು ಪಂದ್ಯಗಳನ್ನಾಡಿ ಮುಗಿಸಿದೆ. ನೆದರ್ಲೆಂಡ್ಸ್ ವಿರುದ್ಧದ ಉದ್ಘಾಟನಾ ಪಂದ್ಯದಲ್ಲಿ ಗೆದ್ದ ಪಾಕ್ ಬಳಿಕ ನಿನ್ನೆ ( ಫೆಬ್ರವರಿ 10 ) ನಡೆದ ಯುಎಸ್ಎ ವಿರುದ್ಧದ ಪಂದ್ಯದಲ್ಲಿ ಗೆದ್ದು ನಾಲ್ಕು ಅಂಕಗಳೊಂದಿಗೆ ಸದ್ಯ ಎ ಗುಂಪಿನ ಅಂಕಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದೆ.
ಯುನೈಟೆಡ್ ಸ್ಟೇಟ್ಸ್ ಆಫ್ ಅಮೆರಿಕಾ ವಿರುದ್ಧದ ಪಂದ್ಯದಲ್ಲಿ 32 ರನ್ಗಳ ಭರ್ಜರಿ ಗೆಲುವು ಕಂಡ ಪಾಕಿಸ್ತಾನ ತಂಡದ ವಿರುದ್ಧ ಪಂದ್ಯ ನಡೆಯುತ್ತಿರುವಾಗಲೇ ಅನಧಿಕೃತ ಬೌಲಿಂಗ್ ಶೈಲಿಯ ಆರೋಪ ಕೇಳಿಬಂದಿದೆ. ಹೌದು, ಪಾಕಿಸ್ತಾನದ ಸ್ಪಿನ್ನರ್ ಉಸ್ಮಾನ್ ತಾರಿಖ್ ಬೌಲಿಂಗ್ ಮಾಡುವಾಗ ಚೆಂಡನ್ನು ಬಿಡುಗಡೆ ಮಾಡುವ ಸಂದರ್ಭದಲ್ಲಿ ಒಂದೆರಡು ಸೆಕೆಂಡ್ ಹಿಡಿದಿಟ್ಟು ನಂತರ ಬೌಲಿಂಗ್ ಮಾಡುತ್ತಿದ್ದಾರೆ, ಇದು ಸರಿಯಲ್ಲ, ಐಸಿಸಿ ಇದರ ಬಗ್ಗೆ ಗಮನಹರಿಸಬೇಕು ಎಂದು ಕ್ರಿಕೆಟ್ ಪ್ರಿಯರು ಒತ್ತಾಯಿಸಿದ್ದಾರೆ.
ಈ ಆರೋಪ ಕೇಳಿಬರುತ್ತಿದ್ದಂತೆ ಕೆಲ ಕ್ರಿಕೆಟ್ ಪ್ರೇಮಿಗಳು ಇದು ನಿಯಮಕ್ಕೆ ವಿರುದ್ಧವಲ್ಲ ಎಂದು ಸಹ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಹೀಗೆ ಉಸ್ಮಾನ್ ಬೌಲಿಂಗ್ ವೈಖರಿ ಭಾರೀ ಚರ್ಚೆಯನ್ನು ಹುಟ್ಟುಹಾಕಿದ್ದು, ಭಾರತದ ಮಾಜಿ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ಸಹ ಈ ಬಗ್ಗೆ ಟ್ವೀಟ್ ಮಾಡಿ ಈ ಬಗ್ಗೆ ಪ್ರಶ್ನೆ ಎತ್ತಿದವರಿಗೆ ಕೌಂಟರ್ ಕೊಟ್ಟಿದ್ದಾರೆ.
ಶ್ರೀವತ್ಸ್ ಗೋಸ್ವಾಮಿ ಎಂಬುವರು ಉಸ್ಮಾನ್ ಬೌಲಿಂಗ್ನ ವಿಡಿಯೊ ಹಂಚಿಕೊಂಡು ಫುಟ್ಬಾಲ್ ಪೆನಾಲ್ಟಿ ರನ್ಅಪ್ನಲ್ಲೂ ಸಹ ಈ ರೀತಿ ಕೆಲ ಸೆಕೆಂಡ್ ಹಿಡಿದಿಟ್ಟು ಬಳಿಕ ಕಿಕ್ ಮಾಡಲು ಅವಕಾಶವಿಲ್ಲ, ಆದರೆ ಕ್ರಿಕೆಟ್ನಲ್ಲಿ ಇದು ಹೇಗೆ ಸರಿ? ಎಂದು ಟ್ವೀಟ್ ಮಾಡಿ ಪ್ರಶ್ನಿಸಿದ್ದಾರೆ. ಇದನ್ನು ಕೋಟ್ ಮಾಡಿರುವ ಅಶ್ವಿನ್ ‘ಫುಟ್ಬಾಲ್ನಲ್ಲಿ ಈ ಅವಕಾಶವಿಲ್ಲ ಒಪ್ಪುತ್ತೇನೆ. ಆದರೆ ಕ್ರಿಕೆಟ್ನಲ್ಲಿ ಬ್ಯಾಟ್ಸ್ಮನ್ಗಳು ತಮಗೆ ಬೇಕಾದ ಹಾಗೆ ಅಂಪೈರ್ ಅಥವಾ ಬೌಲರ್ಗೆ ತಿಳಿಸದೇ ಬ್ಯಾಟಿಂಗ್ ವೈಖರಿಯನ್ನು ಬದಲಿಸಿ ಆಡಬಹುದು. ಆದರೆ ಕೇವಲ ಬೌಲರ್ಗಳ ಮೇಲೆ ಮಾತ್ರ ಏಕೆ ನಿಯಮ? ಬೌಲರ್ಗಳಿಗೆ ಅಂಪೈರ್ಗೆ ತಿಳಸದೇ ಬೌಲಿಂಗ್ ಕೈ ಬದಲಿಸಲು ಅವಕಾಶವಿಲ್ಲ. ಹೀಗಾಗಿ ಮೊದಲು ಈ ನಿಯಮ ಬದಲಾಗಬೇಕು’ ಎಂದು ಬರೆದುಕೊಂಡಿದ್ದಾರೆ.
ಈ ಮೂಲಕ ಬ್ಯಾಟ್ಸ್ಮನ್ ಸಹ ಬ್ಯಾಟಿಂಗ್ ವೈಖರಿಯಲ್ಲಿ ಬದಲಾವಣೆ ಮಾಡಿಕೊಂಡರೆ ಅದನ್ನು ಮೊದಲೇ ಅಂಪೈರ್ಗೆ ತಿಳಿಸುವ ನಿಯಮ ತನ್ನಿ ಎಂದು ಅಶ್ವಿನ್ ಮರು ಟೀಕೆ ಮಾಡಿದ್ದಾರೆ.

