ಬಾಲಿವುಡ್ನಲ್ಲಿ ಹಿನ್ನೆಲೆ ಇಲ್ಲದೆ ನೆಲೆಯೂರುವುದು ಸುಲಭದ ಮಾತಲ್ಲ. ಆದರೆ ಹರಿಯಾಣದ ರೋಹ್ಟಕ್ ಮೂಲದ ಜೈದೀಪ್ ಅಹ್ಲಾವತ್ ತಮ್ಮ ಪ್ರತಿಭೆಯ ಮೂಲಕ ಇಂದು ಚಿತ್ರರಂಗದ ಅನಿವಾರ್ಯ ನಟನಾಗಿ ಬೆಳೆದಿದ್ದಾರೆ. ಇಂದು ಪ್ರತಿ ಪ್ರಾಜೆಕ್ಟ್ಗೆ ಕೋಟ್ಯಂತರ ರೂಪಾಯಿ ಸಂಭಾವನೆ ಪಡೆಯುತ್ತಿರುವ ಈ ನಟನ ಆರಂಭಿಕ ಕನಸು ಕಲೆ ಆಗಿರಲಿಲ್ಲ ಎಂಬುದು ವಿಶೇಷ.
ಜೈದೀಪ್ ಮೂಲತಃ ಭಾರತೀಯ ಸೇನೆಯಲ್ಲಿ ಅಧಿಕಾರಿಯಾಗಬೇಕೆಂದು ಕನಸು ಕಂಡವರು. ಇದಕ್ಕಾಗಿ ಅವರು ಎಸ್ಎಸ್ಬಿ (SSB) ಪರೀಕ್ಷೆಗಳನ್ನು ಕೂಡ ಬರೆದಿದ್ದರು. ಆದರೆ ಸತತ ಪ್ರಯತ್ನದ ಹೊರತಾಗಿಯೂ ಸಂದರ್ಶನದಲ್ಲಿ ವಿಫಲರಾದಾಗ ಅವರು ತಮ್ಮ ಹಾದಿಯನ್ನು ಬದಲಿಸಿದರು. ನಂತರ 2005 ರಲ್ಲಿ ಪದವಿ ಮುಗಿಸಿ 2009 ರಲ್ಲಿ ಪುಣೆಯ ಎಫ್ಟಿಐಐ (FTII) ಮೂಲಕ ನಟನೆಯ ಜಗತ್ತಿಗೆ ಕಾಲಿಟ್ಟರು.
ಆರಂಭದಲ್ಲಿ ‘ಆಕ್ರೋಶ್’ ಮತ್ತು ‘ಖಟ್ಟಾ ಮೀಟಾ’ ಅಂತಹ ಸಿನಿಮಾಗಳಲ್ಲಿ ಸಣ್ಣಪುಟ್ಟ ಪಾತ್ರಗಳಲ್ಲಿ ಕಾಣಿಸಿಕೊಂಡ ಜೈದೀಪ್ ಅವರನ್ನು ಜನ ಗುರುತಿಸಿದ್ದು ‘ಪಾತಲ್ ಲೋಕ್’ ವೆಬ್ ಸೀರೀಸ್ ಮೂಲಕ. ಇದರಲ್ಲಿನ ಹಥಿರಾಮ್ ಚೌಧರಿ ಎಂಬ ಪೊಲೀಸ್ ಅಧಿಕಾರಿಯ ಪಾತ್ರ ಅವರಿಗೆ ರಾತ್ರೋರಾತ್ರಿ ಸ್ಟಾರ್ಡಮ್ ತಂದುಕೊಟ್ಟಿತು. ಈ ಸರಣಿಯ ಮೊದಲ ಸೀಸನ್ನಲ್ಲಿ ಕೇವಲ 40 ಲಕ್ಷ ರೂಪಾಯಿ ಸಂಭಾವನೆ ಪಡೆದಿದ್ದ ಅವರು ಇಂದು ಬಹುಬೇಡಿಕೆಯ ನಟನಾಗಿ ಬೆಳೆದಿದ್ದಾರೆ.
ವರದಿಗಳ ಪ್ರಕಾರ ‘ಪಾತಲ್ ಲೋಕ್’ ಸರಣಿಯ ಎರಡನೇ ಸೀಸನ್ ಗಾಗಿ ಜೈದೀಪ್ ಸುಮಾರು 20 ಕೋಟಿ ರೂಪಾಯಿ ಸಂಭಾವನೆ ಪಡೆದಿದ್ದಾರೆ ಎನ್ನಲಾಗಿದೆ. ಸೈಡ್ ಆಕ್ಟರ್ ಆಗಿ ವೃತ್ತಿಜೀವನ ಆರಂಭಿಸಿ ಇಂದು ದೊಡ್ಡ ಸ್ಟಾರ್ಗಳಿಗೆ ಪೈಪೋಟಿ ನೀಡುವ ಮಟ್ಟಕ್ಕೆ ಬೆಳೆದಿರುವ ಇವರ ಪಯಣ ಅಸಂಖ್ಯಾತ ಯುವ ಪ್ರತಿಭೆಗಳಿಗೆ ಸ್ಫೂರ್ತಿಯಾಗಿದೆ.

