ಬೆಂಗಳೂರು ನಗರದ ನಮ್ಮ ಮೆಟ್ರೋ ಪ್ರಯಾಣಿಕರಿಗೆ ಬಿಗ್ ಅಪ್‌ಡೇಟ್ ಇಲ್ಲಿದೆ. ಸೋಮವಾರದಿಂದ ನಮ್ಮ ಮೆಟ್ರೋ ಪ್ರಯಾಣ ದರ ಏರಿಕೆ ಇಲ್ಲ. ಬಿಎಂಆರ್‌ಸಿಎಲ್ ನಮ್ಮ ಮೆಟ್ರೋ ಪ್ರಯಾಣ ದರವನ್ನು ಪರಿಷ್ಕರಣೆ ಮಾಡಿದ್ದು, ಅದು ಸೋಮವಾರದಿಂದ ಜಾರಿಗೆ ಬರಬೇಕಿತ್ತು.
ಈ ಕುರಿತು ಬೆಂಗಳೂರು ದಕ್ಷಿಣ ಕ್ಷೇತ್ರದ ಸಂಸದ ತೇಜಸ್ವಿ ಸೂರ್ಯ ಮಾಹಿತಿ ನೀಡಿದ್ದಾರೆ. ಕೇಂದ್ರ ಸರ್ಕಾರ ಈಗಾಗಲೇ ನಮ್ಮ ಮೆಟ್ರೋ ಪ್ರಯಾಣ ದರ ಪರಿಷ್ಕರಣೆಯನ್ನು ತಾತ್ಕಾಲಿಕವಾಗಿ ತಡೆ ಹಿಡಿಯಿರಿ ಎಂದು ಬಿಎಂಆರ್‌ಸಿಎಲ್‌ಗೆ ಸೂಚನೆ ನೀಡಿದೆ.
ಸಂಸದರಾದ ತೇಜಸ್ವಿ ಸೂರ್ಯ ಮತ್ತು ಪಿಸಿ ಮೋಹನ್ ಕೇಂದ್ರ ವಸತಿ ಮತ್ತು ನಗರ ವ್ಯವಹಾರಗಳ ಖಾತೆ ಸಚಿವ ಮನೋಹರ್ ಲಾಲ್ ಖಟ್ಟರ್ ಭೇಟಿಯಾಗಿದ್ದರು. ಮೆಟ್ರೋ ದರ ಏರಿಕೆ ಹೇಗೆ ಹೊರೆಯಾಗಲಿದೆ? ಎಂದು ವಿವರಣೆ ನೀಡಿ, ಇದಕ್ಕೆ ತಡೆ ನೀಡಬೇಕು ಎಂದು ಮನವಿ ಮಾಡಿದ್ದರು.
ಸಚಿವ ಮನೋಹರ್ ಲಾಲ್ ಖಟ್ಟರ್ ಕಚೇರಿಯಿಂದ ಬಿಎಂಆರ್‌ಸಿಎಲ್‌ಗೆ ಫೆಬ್ರವರಿ 9ರ ಸೋಮವಾರದಿಂದ ನಮ್ಮ ಮೆಟ್ರೋ ದರವನ್ನು ಏರಿಕೆ ಮಾಡಬಾರದು ಎಂದು ಸೂಚಿಸಲಾಗಿದೆ. ಈ ಮೂಲಕ ಮೂರು ದಿನಗಳ ದರ ಏರಿಕೆ ಜಟಾಪಟಿಗೆ ತಾತ್ಕಾಲಿಕ ತಡೆ ಸಿಕ್ಕಿದೆ.
ಬಿಎಂಆರ್‌ಸಿಎಲ್ ಪ್ರಕಟಣೆ: ಫೆಬ್ರವರಿ 5ರಂದು ಬಿಎಂಆರ್‌ಸಿಎಲ್ ಪ್ರಕಟಣೆಯಲ್ಲಿ ನಮ್ಮ ಮೆಟ್ರೋ ದರ ಏರಿಕೆ ಕುರಿತು ಪ್ರಸ್ತಾಪಿಸಿತ್ತು. ಶೇ 5ರಷ್ಟು ದರ ಏರಿಕೆ ಮಾಡಲಾಗಿದ್ದು, ಅದು ಫೆಬ್ರವರಿ 5ರಿಂದ ಜಾರಿಗೆ ಬರಲಿದೆ ಎಂದು ಹೇಳಿತ್ತು.
ಬೆಂಗಳೂರು ಮೆಟ್ರೋ ರೈಲು ನಿಗಮ ನಿಯಮಿತ ವಾರ್ಷಿಕ ದರ ಪರಿಷ್ಕರಣೆ. ಮೆಟ್ರೋ ರೈಲ್ವೇಸ್ (ಕಾರ್ಯಾಚರಣೆ ಮತ್ತು ನಿರ್ವಹಣೆ) ಕಾಯ್ದೆ 2002ರ ಅಡಿಯಲ್ಲಿ ರಚಿತವಾದ ಮೊದಲ ದರ ನಿಗದಿ ಸಮಿತಿ (FFC) ಪ್ರಕಾರ ವಾರ್ಷಿಕ ದರ ಪರಿಷ್ಕರಣೆ ಪ್ರಕಟಿಸಿದೆ ಎಂದು ಬಿಎಂಆರ್‌ಸಿಎಲ್ ತಿಳಿಸಿತ್ತು.
ದರ ನಿಗದಿ ಸಮಿತಿ ಪ್ರಕಾರ BMRCLಗೆ 7.5 ವರ್ಷಗಳ ನಂತರ ಪರಿಷ್ಕೃತ ದರ ರಚನೆಯನ್ನು ಮತ್ತು 29 ರಿಂದ 10 ರವರೆಗಿನ ದರದ ವಲಯಗಳನ್ನು ಶಿಫಾರಸು ಮಾಡುವಾಗ ದರ ಪರಿಷ್ಕರಣೆ ಸರಾಸರಿ ಶೇ 51.55 ರಷ್ಟು ಹೆಚ್ಚಳಕ್ಕೆ ಕಾರಣವಾಯಿತು.
ಭವಿಷ್ಯದಲ್ಲಿ ಇಂತಹ ದರ ಹೆಚ್ಚಳದ ಪರಿಸ್ಥಿತಿಯನ್ನು ತಪ್ಪಿಸುವ ದೃಷ್ಟಿಯೊಂದಿಗೆ, ಸಮಿತಿಯು ತನ್ನ ವರದಿಯಲ್ಲಿ ಪಾರದರ್ಶಕ ವಾರ್ಷಿಕ ಸ್ವಯಂಚಾಲಿತ ದರ ಪರಿಷ್ಕರಣೆ ಸೂತ್ರವನ್ನು ವಾರ್ಷಿಕ ಕಾರ್ಯಾಚರಣೆ ಮತ್ತು ನಿರ್ವಹಣೆಯ ಶೇಕಡಾವಾರು ವೆಚ್ಚ ಅಥವಾ ವಾರ್ಷಿಕ ಶೇ 5 ಯಾವುದು ಕಡಿಮೆಯೋ ಮತ್ತು ಮುಂದಿನ ಒಂದು ರೂಪಾಯಿಗೆ ಪೂರ್ಣಾಂಕಗೊಳಿಸಿ ದರವನ್ನು ಪರಿಷ್ಕರಿಸಲು ಶಿಫಾರಸು ಮಾಡಿದೆ. ಈ ಕಾರ್ಯವಿಧಾನವು, ವಾರ್ಷಿಕವಾಗಿ ಅಲ್ಪ ದರ ಹೆಚ್ಚಳಕ್ಕೆ ಸಹಾಯ ಮಾಡುತ್ತದೆ ಎಂದು ವಿವರಿಸಿತ್ತು.
ಬಿಎಂಆರ್‌ಸಿಎಲ್ FFCಯ ಶಿಫಾರಸುಗಳನ್ನು ಗಮನದಲ್ಲಿಟ್ಟುಕೊಂಡು ಶಿಫಾರಸು ಮಾಡಲಾದ ದರಗಳನ್ನು ಜಾರಿಗೆ ತಂದ ದಿನಾಂಕದಿಂದ 1 ವರ್ಷ (9 ಫೆಬ್ರವರಿ 2025) ಮುಕ್ತಾಯಗೊಂಡ ನಂತರ, ಫೆಬ್ರವರಿ 9, 2026 ರಿಂದ ಜಾರಿಗೆ ಬರುವಂತೆ ವಾರ್ಷಿಕ ಸ್ವಯಂಚಾಲಿತ ದರ ಪರಿಷ್ಕರಣೆಯನ್ನು ಜಾರಿಗೆ ತರಲಾಗುವುದು ಎಂದು ತಿಳಿಸಿತ್ತು.
96.10 ಕಿಮೀಗಳ ಸಂಪೂರ್ಣ ಜಾಲದಲ್ಲಿರುವ 10 ದರ ವಲಯಗಳಲ್ಲಿ ಕನಿಷ್ಠ ರೂ.1 ಮತ್ತು ಗರಿಷ್ಠ ರೂ.5 ರಷ್ಟು ಅಲ್ಪ ಹೆಚ್ಚಳವಾಗಿದೆ. 2024-25 (31 ಮಾರ್ಚ್ 2025) ಹಣಕಾಸು ವರ್ಷದ ಅಂಕಿ ಅಂಶಗಳನ್ನು, ಹಣಕಾಸು ವರ್ಷ 2023-24 (31 ಮಾರ್ಚ್ 2024) ರ ಅಂಕಿ ಅಂಶಗಳಿಗೆ ಹೋಲಿಸಿದರೆ, ಸೂತ್ರ-ಆಧಾರಿತ ದರ ಪರಿಷ್ಕರಣೆ ಶೇ 10.20ರಷ್ಟು ವೆಚ್ಚ ಹೆಚ್ಚಳವನ್ನು ಸೂಚಿಸುತ್ತದೆ.
ಆದಾಗ್ಯೂ, FFC ನಿಬಂಧನೆಗೆ ಅನುಗುಣವಾಗಿ ದರ ಪರಿಷ್ಕರಣೆಯನ್ನು ಕೇವಲ ಶೇ 5ಕ್ಕೆ ಸೀಮಿತಗೊಳಿಸಲಾಗಿದೆ. ದಿನಾಂಕ 09.02.2026 ರಿಂದ ಹೊಸ ದರ ಜಾರಿಗೆ ಬರಲಿದೆ ಎಂದು ಬಿಎಂಆರ್‌ಸಿಎಲ್ ಪ್ರಕಟಣೆಯಲ್ಲಿ ಹೇಳಿತ್ತು.

