ಬೆಂಗಳೂರು-ಮೈಸೂರು ಎಕ್ಸ್ಪ್ರೆಸ್ ವೇನಲ್ಲಿ ವಾಹನ ಸವಾರರು ಸಂಚಾರ ನಿಯಮಗಳನ್ನು ಉಲ್ಲಂಘನೆ ಮಾಡುತ್ತಾರೆ. ಆದರೆ ಅವರ ಮೇಲೆ ಕ್ಯಾಮರಾ ಕಣ್ಗಾವಲು ಇರುತ್ತದೆ. ಅತಿ ವೇಗವಾಗಿ ಹೋದರೆ ಮಾತ್ರ ದಂಡವಲ್ಲ ಎಲ್ಲಾ ಸಂಚಾರ ನಿಯಮ ಉಲ್ಲಂಘನೆ ಟ್ರಾಕ್ ಮಾಡಲಾಗುತ್ತದೆ.
ಗೃಹ ಸಚಿವ ಡಾ.ಜಿ.ಪರಮೇಶ್ವರ ಈ ಕುರಿತು ವಿಧಾನಸಭೆ ಅಧಿವೇಶನದಲ್ಲಿ ಮಾಹಿತಿ ನೀಡಿದ್ದಾರೆ. ಬೆಂಗಳೂರು-ಮೈಸೂರು ರಾಷ್ಟ್ರೀಯ ಹೆದ್ದಾರಿಯಲ್ಲಿ 25 ಐಟಿಎಂಎಸ್ ಕ್ಯಾಮರಾಗಳನ್ನು ಆಳವಡಿಕೆ ಮಾಡಲಾಗಿದ್ದು, ವಾಹನ ಸವಾರರ ಮೇಲೆ ಕಣ್ಗಾವಲು ಇಡಲಾಗಿದೆ ಎಂದು ಹೇಳಿದ್ದಾರೆ.
Intelligent Traffic Management System (ITMS) ಕ್ಯಾಮರಾಗಳು ಸ್ವಯಂ ಚಾಲಿತವಾಗಿ ಸಂಚಾರ ನಿಯಮ ಉಲ್ಲಂಘನೆ ಪ್ರಕರಣಗಳನ್ನು ಸರೆ ಹಿಡಿಯಲಿವೆ. ಅಲ್ಲದೇ ಯಾವ ಮಾದರಿ ಸಂಚಾರ ನಿಯಮ ಉಲ್ಲಂಘನೆ ಮಾಡಲಾಗಿದೆ, ಎಂಬುದನ್ನು ನೋಂದಾಯಿತ ಮೊಬೈಲ್ ನಂಬರ್ ಆಧಾರದ ಮೇಲೆ ವಾಹನದ ಮಾಲೀಕರಿಗೆ ಕಳಿಸಲಿವೆ.
ಸ್ವಯಂ ಚಾಲಿತ ನಂಬರ್ ಪ್ಲೇಟ್ ಓದುವ ಮಾದರಿಯ ಕ್ಯಾಮರಾಗಳು ಇದಾಗಿವೆ. ಈ ಕ್ಯಾಮರಾಗಳು ವಾಹನದ ವೇಗ, ಬೇರೆ ಪಥದಲ್ಲಿ ವಾಹನ ಸಂಚಾರ, ಒಂದು ಕಡೆಯ ಪ್ರವೇಶ ನಿಯಮ ಉಲ್ಲಂಘನೆ, ಸೀಟ್ ಬೆಲ್ಟ್ ಧರಿಸದಿರುವುದು, ವಾಹನ ಪಥ ನಿಯಮ ಉಲ್ಲಂಘನೆ ಮುಂತಾದ ನಿಯಮಗಳ ಕುರಿತು ಕಣ್ಗಾವಲು ಇಡಲಿವೆ.
ಕ್ಯಾಮರಾಗಳು ವಾಹನ ಮತ್ತು ಅದರ ನಂಬರ್ ಪ್ಲೇಟ್ ಕಾಣುವ ಹಾಗೆ ಚಿತ್ರಗಳನ್ನು ಸೆರೆ ಹಿಡಿಯಲಿವೆ. ಲೊಕೇಶನ್, ಸಮಯದ ಮಾಹಿತಿ ಸಹ ದಾಖಲಾಗುತ್ತದೆ. ಆದ್ದರಿಂದ ವಾಹನಗಳ ಮಾಲೀಕರು ನಮ್ಮ ವಾಹನ ಅಲ್ಲಿ ಇರಲಿಲ್ಲ ಎಂದು ಹೇಳಲು ಸಾಧ್ಯವೇ ಇಲ್ಲ ಎಂದು ಸಚಿವರು ವಿವರಿಸಿದರು.
ಬೆಂಗಳೂರು-ಮೈಸೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಹಲವು ಕಡೆ ಈ ಮಾದರಿ ಕ್ಯಾಮರಾಗಳನ್ನು ಅಳವಡಿಕೆ ಮಾಡಲಾಗಿದೆ. ಅದರಲ್ಲೂ ಬೆಂಗಳೂರು ದಕ್ಷಿಣ (ರಾಮನಗರ), ಮಂಡ್ಯ ಜಿಲ್ಲೆ ಮತ್ತು ಮೈಸೂರು ನಗರದಲ್ಲೂ ಕ್ಯಾಮರಾಗಳಿವೆ.
ದಂಡ ಕಟ್ಟದ ವಾಹನ ಸವಾರರು: ಗೃಹ ಸಚಿವರು ನೀಡಿದ ಮಾಹಿತಿ ಪ್ರಕಾರ 2024-2025ರಲ್ಲಿ ಈ ಕ್ಯಾಮರಾಗಳು 19.27 ಲಕ್ಷ ಸಂಚಾರಿ ನಿಯಮ ಉಲ್ಲಂಘನೆ ಪ್ರಕರಣಗಳನ್ನು ಪತ್ತೆ ಹಚ್ಚಿವೆ. ಆದರೆ ಈ ನಿಯಮ ಉಲ್ಲಂಘನೆ ಪ್ರಕರಣಗಳಲ್ಲಿ ಶೇ 90ರಷ್ಟು ದಂಡ ಇನ್ನೂ ಪಾವತಿಯಾಗಿಲ್ಲ.
2024ರಲ್ಲಿ 13,83,861 ಸಂಚಾರಿ ನಿಯಮ ಉಲ್ಲಂಘನೆ ಪ್ರಕರಣಗಳನ್ನು ದಾಖಲು ಮಾಡಲಾಗಿದೆ. ಇದಕ್ಕಾಗಿ ಪಾವತಿ ಮಾಡಬೇಕಾದ ದಂಡದ ಮೊತ್ತ 93.75 ಕೋಟಿ ರೂ.ಗಳು. ಆದರೆ ಇನ್ನೂ ಮಾಲೀಕರು ದಂಡ ಪಾವತಿ ಮಾಡುವುದು ಬಾಕಿ ಇದೆ.
2025ರಲ್ಲಿ 5,493,175 ಪ್ರಕರಣ ಪತ್ತೆ ಹಚ್ಚಲಾಗಿದ್ದು, 40.10 ಕೋಟಿ ರೂ. ದಂಡ ಪಾವತಿಸಬೇಕಿದೆ. 2024ರಲ್ಲಿ 8.38 ಕೀಟಿ ಮತ್ತು 2025ರಲ್ಲಿ 4.30 ಕೋಟಿ ರೂ. ದಂಡವನ್ನು ಮಾತ್ರ ಪಾವತಿ ಮಾಡಲಾಗಿದೆ.
2024 ಮತ್ತು 2025 ಸೇರಿ ಒಟ್ಟು 12.69 ಕೋಟಿ ರೂ. ದಂಡ ಸಂಗ್ರಹ ಮಾಡಲಾಗಿದ್ದು, 121.16 ಕೋಟಿ ರೂ. ದಂಡದ ಪಾವತಿ ಇನ್ನೂ ಸಹ ಬಾಕಿ ಇದೆ.
ಸಂಚಾರಿ ನಿಯಮ ಉಲ್ಲಂಘನೆ ಮಾಡಿ, ಅದರ ವಿವರಗಳು ಮಾಲೀಕರ ಪೋನ್ಗೆ ಎಸ್ಎಂಎಸ್ ರೂಪದಲ್ಲಿ ಬಂದರೂ ಸಹ ಅದನ್ನು ಜನರು ಪಾವತಿ ಮಾಡುತ್ತಿಲ್ಲ. ಪುನಃ ಪದೇ ಪದೇ ಸಂಚಾರ ನಿಯಮ ಉಲ್ಲಂಘನೆ ಮಾಡುತ್ತಲೇ ಇದ್ದಾರೆ.

