ಉತ್ತರ ಪ್ರದೇಶದಲ್ಲಿ ಕಾನೂನು ರಕ್ಷಕರೆನಿಸಿಕೊಂಡ ಪೊಲೀಸರೇ ಕಾನೂನು ಉಲ್ಲಂಘಿಸಿ ದರ್ಪ ತೋರಿಸಿರುವ ಘಟನೆ ನಡೆದಿದೆ. ಚಲಿಸುತ್ತಿರುವ ರೈಲಿನ ಸೆಕೆಂಡ್ ಎಸಿ ಕೋಚ್ನಲ್ಲಿ ಟಿಕೆಟ್ ಇಲ್ಲದೆ ಪ್ರಯಾಣಿಸುತ್ತಿದ್ದ ಇಬ್ಬರು ಪೊಲೀಸ್ ಪೇದೆಗಳು, ಟಿಕೆಟ್ ಕೇಳಿದ ರೈಲ್ವೆ ಸಿಬ್ಬಂದಿಗೆ (ಟಿಟಿಇ) ಅವಾಜ್ ಹಾಕಿರುವ ವಿಡಿಯೋ ಈಗ ಸೋಷಿಯಲ್ ಮೀಡಿಯಾದಲ್ಲಿ ಭಾರಿ ಆಕ್ರೋಶಕ್ಕೆ ಕಾರಣವಾಗಿದೆ.
ವೈರಲ್ ಆಗಿರುವ ವಿಡಿಯೋದಲ್ಲಿ, ಸಮವಸ್ತ್ರದಲ್ಲಿದ್ದ ಪೊಲೀಸ್ ಅಧಿಕಾರಿಯೊಬ್ಬರು ಟಿಕೆಟ್ ಇಲ್ಲದೆ ಐಷಾರಾಮಿ ಎಸಿ ಕೋಚ್ನಲ್ಲಿ ಕುಳಿತಿರುವುದನ್ನು ಕಾಣಬಹುದು. ಟಿಟಿಇ ಟಿಕೆಟ್ ತೋರಿಸುವಂತೆ ಕೇಳಿದಾಗ, “ನಾನು ಟಿಕೆಟ್ ಏಕೆ ಮಾಡಿಸಬೇಕು? ನಾನು ಆಲಿಗಢ ಮೂಲದವನು ಮತ್ತು ಈಗ ಡ್ಯೂಟಿಯಲ್ಲಿದ್ದೇನೆ” ಎಂದು ಉಡಾಫೆಯಿಂದ ಉತ್ತರಿಸಿದ್ದಾರೆ. ರೈಲ್ವೆ ಇಲಾಖೆ ಪೊಲೀಸರಿಗೆ ಪ್ರಯಾಣಿಸಲು ಪಾಸ್ ನೀಡಿದೆಯೇ ಎಂದು ಪ್ರಶ್ನಿಸಿದಾಗ, ತಮ್ಮ ಬಳಿ ಯಾವುದೇ ಪಾಸ್ ಇಲ್ಲ ಎಂದು ಒಪ್ಪಿಕೊಂಡಿದ್ದಾರೆ.
ಅಷ್ಟಕ್ಕೇ ನಿಲ್ಲದ ಪೊಲೀಸ್ ಅಧಿಕಾರಿ, ಈ ಘಟನೆಯನ್ನು ಮೊಬೈಲ್ನಲ್ಲಿ ಚಿತ್ರೀಕರಿಸುತ್ತಿದ್ದ ವ್ಯಕ್ತಿಗೆ ನೇರವಾಗಿಯೇ ಬೆದರಿಕೆ ಹಾಕಿದ್ದಾರೆ. “ನೀನು ಏನು ಬೇಕಾದರೂ ರೆಕಾರ್ಡ್ ಮಾಡಿಕೊ, ಮುಂದಿನ ಬಾರಿ ನೀನು ನನಗೆ ಸಿಕ್ಕಾಗ ನಾನು ನಿನಗೆ ಏನು ಅಂತ ತೋರಿಸುತ್ತೇನೆ, ಹೊರಗಡೆ ಸಿಗು ನೋಡ್ಕೊತೀನಿ” ಎಂದು ಅಧಿಕಾರ ಪ್ರದರ್ಶಿಸಿದ್ದಾರೆ. ಪೊಲೀಸರ ಈ ಅಸಭ್ಯ ವರ್ತನೆಯನ್ನು ಕಂಡು ರೈಲಿನಲ್ಲಿದ್ದ ಇತರ ಪ್ರಯಾಣಿಕರು ಬೆಚ್ಚಿಬಿದ್ದಿದ್ದಾರೆ.
ಸಾಮಾಜಿಕ ಜಾಲತಾಣಗಳಲ್ಲಿ ಈ ವಿಡಿಯೋ ಹಂಚಿಕೊಂಡಿರುವ ಜನರು, “ರಕ್ಷಕರೇ ಹೀಗೆ ಭಕ್ಷಕರಾದರೆ ಸಾಮಾನ್ಯ ಜನರ ಕಥೆ ಏನು?” ಎಂದು ಪ್ರಶ್ನಿಸುತ್ತಿದ್ದಾರೆ. ತೆರಿಗೆ ಪಾವತಿಸುವ ಸಾಮಾನ್ಯ ಜನರು ಟಿಕೆಟ್ ದರ ಏರಿಕೆಯಿಂದ ಕಷ್ಟಪಡುತ್ತಿದ್ದರೆ, ಇಂತಹ ಅಧಿಕಾರಿಗಳು ಸರ್ಕಾರಿ ಸಂಬಳ ಪಡೆದೂ ಪುಕ್ಕಟೆಯಾಗಿ ಪ್ರಯಾಣಿಸಿ ದರ್ಪ ತೋರಿಸುತ್ತಿರುವುದು ಎಷ್ಟು ಸರಿ ಎಂದು ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ರೈಲ್ವೆ ಸಚಿವಾಲಯ ಮತ್ತು ಉತ್ತರ ಪ್ರದೇಶ ಪೊಲೀಸರು ಈ ಕೂಡಲೇ ಮಧ್ಯಪ್ರವೇಶಿಸಿ ಇಂತಹ ಉದ್ಧಟತನ ತೋರಿದ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.

