ಚಾಮರಾಜನಗರ: ಜೀವಜಲವೇ ಕಲುಷಿತಗೊಂಡಿದ್ದು, ಅದೇ ನೀರನ್ನು ಸೇವಿಸಿದ ಗ್ರಾಮಸ್ಥರು ತಮ್ಮ ಕಿಡ್ನಿಯನ್ನೇ ಕಳೆದುಕೊಂಡಿರುವ ಕರುಣಾಜನಕ ಘಟನೆ ಚಾಮರಾಜನಗರ ಜಿಲ್ಲೆಯಲ್ಲಿ ನಡೆದಿದೆ.
ಚಾಮರಾಜನಗರ ಜಿಲ್ಲೆಯ ಹನೂರು ತಾಲೂಕಿನ ಮಾರ್ಟಳ್ಳಿ ಹಾಗೂ ಸುಳ್ವಾಡಿ ಗ್ರಾಮದಲ್ಲಿ ಫ್ಲೋರೈಡ್ ಮಿಶ್ರಿತ ನೀರು ಪೂರೈಕೆಯಾಗಿದ್ದು, ಈ ನೀರನ್ನು ಸೇವಿಸಿದ 47 ಜನರ ಕಿಡ್ನಿ ವೈಫಲ್ಯವಾಗಿದೆ. ಅಲ್ಲದೇ ಗ್ರಾಮದ ಹಲವು ವಿವಿಧ ರೀತಿಯ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದಾರೆ ಎಂದು ತಿಳಿದುಬಂದಿದೆ.
ಮಾರ್ಟಳ್ಳಿ ಹಾಗೂ ಸುಳ್ವಾಡಿ ಗ್ರಾಮಗಳಲ್ಲಿ ಕಳೆದ 30 ವರ್ಷಗಳಿಂದ ಗ್ರಾಮ ಪಂಚಾಯಿತಿಯಿಂದ ಸರಬರಾಅಜಾಗುತ್ತಿರುವ ನೀರನ್ನೇ ಜನರು ಸೇವಿಸುತ್ತಿದ್ದಾರೆ. ಈ ನೀರಿನಲ್ಲಿ ಫ್ಲೋರೈಡ್ ಯುಕ್ತವಾಗಿದ್ದು. ಎರಡೂ ಗ್ರಾಮಗಳಲ್ಲಿ ೪೭ ಜನರು ಕಿಡ್ನಿ ವೈಫಲ್ಯದಿಂದ ಬಳಲುತ್ತಿದ್ದು, ಡಯಾಲಿಸಿಸ್ ಚಿಕಿತ್ಸೆ ಪಡೆಯುತ್ತಿದ್ದಾರೆ.
ಗ್ರಾಮದಲ್ಲಿ ಅಂತರ್ಜಲ ನೀರಿನ ಮಟ್ಟ ಕಡಿಮೆಯಾಗಿದ್ದು, ನೀರಿನಲಿ ಫ್ಲೋರೈಡ್ ಪ್ರಮಾಣ ಹೆಚ್ಚಾಗಿದೆ. ಇದರಿಂದಾಗಿ ಅರೋಗ್ಯ ಸಮಸ್ಯೆ ಹೆಚ್ಚಾಗುತ್ತಿದೆ. ನೀರು ಸೇವಿಸಿದ್ದ ಗ್ರಾಮಸ್ಥರಲ್ಲಿ ಹಲವರ ಹಲ್ಲುಗಳು ಹಳದಿ ಬಣ್ಣಕ್ಕೆ ತಿರುಗಿವೆ. 47 ಜನರು ಕಿಡ್ನಿ ಕಳೆದುಕೊಂಡಿದ್ದು, ಹಲವರು ಹೈಪರ್ ಟೆನ್ಶನ್, ಥೈರಾಯ್ಡ್, ಸಂದಿವಾತ ಸೇರಿದಂತೆ ವಿವಿಧ ಕಾಯಿಲೆಗೆ ತುತ್ತಾಗಿದ್ದಾರೆ.
ಎರಡು ಗ್ರಾಮಗಳ ಜನರು ಫ್ಲೋರೈಡ್ ಮಿಶ್ರಿತ ನೀರಿನಿಂದ ಅನಾರೋಗ್ಯದಿಂದ ಬಳಲುತ್ತಿದ್ದರೂ ಜಿಲ್ಲಾಡಳಿತ ಈವರೆಗೂ ಶುದ್ಧ ಕುಡಿಯುವ ನೀರಿನ ವ್ಯವಸ್ಥೆ ಮಾಡಿಲ್ಲ. ಅಧಿಕಾರಿಗಳಿಗೆ ಹಲವು ಬಾರಿ ಮನವಿ ಮಾಡಿದರೂ ಬೇಜವಾಬ್ದಾರಿ, ನಿರ್ಲಕ್ಷ್ಯ ವಹಿಸಿದ್ದಾರೆ. ಇದರಿಂದ ಬೇಸತ್ತ ಗ್ರಾಮಸ್ಥರು ಸಾವಿರಾರು ರೂಪಾಯಿ ಖರ್ಚು ಮಾಡಿ ಟ್ಯಾಂಕರ್ ನೀರು ತರಿಸಿಕೊಳ್ಳುತ್ತಿದ್ದಾರೆ. ಜಿಲ್ಲಾಡಳಿತ, ಸಂಬಂಧ ಪಟ್ಟ ಅಧಿಕಾರಿಗಳು ಇನ್ನಾದರೂ ಈ ಬಗ್ಗೆ ಗಮನಹರಿಸಲಿ ಎಂದು ಗ್ರಾಮದ ಜನರು ಆಗ್ರಹಿಸಿದ್ದಾರೆ.

