ಬೆಂಗಳೂರು: ಮೂರು ದಿನಗಳ ಹಿಂದೆ ಇದ್ದಕ್ಕಿದ್ದಂತೆ ನಾಪತ್ತೆಯಾಗಿದ್ದ ಬಾಲಕ ಜಲಮಂಡಳಿಯ ಸಂಪ್ ನಲ್ಲಿ ಶವವಾಗಿ ಪತ್ತೆಯಾಗಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.
ಬೆಂಗಳೂರಿನ ದಕ್ಷಿಣ ತಾಲೂಕಿನ ತಾತಗುಣಿ ಬಳಿ ಈ ದುರಂತ ಸಂಭವಿಸಿದೆ. 14 ವರ್ಷದ ಪ್ರೀತಮ್ ಮೃತ ಬಾಲಕ. ಚಾಮರಾಜನಗರ ಮೂಲದ ರಜನಿಕಾಂತ್ ಎಂಬುವವರ ಪುತ್ರ. ರಜನಿಕಾಂತ್ ಕುಟುಂಬ ತಾತಗುಣಿ ಬಳಿ ಬಾಡಿಗೆ ಮನೆಯಲ್ಲಿ ವಾಸವಾಗಿತ್ತು.
ಕಳೆದ ಮೂರು ದಿನಗಳಿಂದ ಪ್ರೀತಮ್ ನಾಪತ್ತೆಯಾಗಿದ್ದ. ಕಂಗಾಲಾದ ಪೋಷಕರು ಕಗ್ಗಲಿಪುರ ಠಣೆಯಲ್ಲಿ ದೂರು ನೀಡಿದ್ದರು. ಸ್ಥಳೀಯರೊಂದಿಗೆ ಪೊಲೀಸರು ಹುಡುಕಾಟ ನಡೆಸಿದಾಗ ಜಲಮಂಡಳಿ ಕಾಮಗಾರಿಗಾಗಿ ತೆರೆದಿದ್ದ ಸಂಪ್ ನಲ್ಲಿ ಬಾಲಕ ಶವವಾಗಿ ಪತ್ತೆಯಾಗಿದ್ದಾನೆ.
ಹಲವು ದಿನಗಳಿಂದ ಜಲಮಂಡಳಿಯವರು ಸಂಪ್ ಮುಚ್ಚದೇ ಹಾಗೇ ಬಿಟ್ಟಿದ್ದರು. ಬಾಲಕ ಅದೇ ಜಾಗದಲ್ಲಿ ಓಡಾಡುವಾಗ ಆಕಸ್ಮಿಕವಾಗಿ ಸಂಪ್ ಒಳಗೆ ಬಿದ್ದಿದ್ದು, ಮೃತಪಟ್ಟಿದ್ದಾನೆ. ಜಲಮಂಡಳಿಯವರ ನಿರ್ಲಕ್ಷ್ಯಕ್ಕೆ ಬಾಲಕ ಬಲಿಯಾಗಿದ್ದಾನೆ. ಮಗನನ್ನು ಕಳೆದುಕೊಂಡಿರುವ ಕುಟುಂಬದವರ ಆಕ್ರಂದನ ಮುಗಿಲುಮುಟ್ಟಿದೆ.

