ಬೆಂಗಳೂರು: ಬೀದರ್ ನ ಮೊಳಕೇರಾ ಗ್ರಾಮದಲ್ಲಿ ಅನುಮಾನಾಸ್ಪದ ವಸ್ತು ಸ್ಫೋಟಗೊಂಡು ವಿದ್ಯಾರ್ಥಿಗಳು ಸೇರಿ ಆರು ಜನರು ಗಾಯಗೊಂದಿರುವ ಘಟನೆ ಬೆನ್ನಲ್ಲೇ ದೇವನಹಳ್ಲಿಯಲ್ಲಿ ಸರ್ಕಾರಿ ಶಾಲೆಯಲ್ಲಿ ಕೆಮಿಕಲ್ ಸ್ಫೋಟಗೊಂಡು ವಿದ್ಯಾರ್ಥಿ ಗಾಯಗೊಂಡಿರುವ ಘಟನೆ ನಡೆದಿದೆ.
ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ತಾಲೂಕಿನ ವಿಜಯಪುರ ಸರ್ಕಾರಿ ಉರ್ದು ಶಾಲೆಯಲ್ಲಿ ಈ ಘಟನೆ ನಡೆದಿದೆ. ಕೆಮಿಕಲ್ ಸ್ಫೋಟಗೊಂಡು 7ನೇ ತರಗತಿ ವಿದ್ಯಾರ್ಥಿಯೊಬ್ಬ ಗಂಭೀರವಾಗಿ ಗಾಯಗೊಂಡಿದ್ದಾನೆ.
ವಿದ್ಯಾರ್ಥಿ ಕಾರ್ಬನ್ ಕೆಮಿಕಲ್ ಶಾಲೆಗೆ ತಂಡಿದ್ದ. ಶೌಚಾಲಯದಲ್ಲಿ ಜಗ್ ನೀರಿಗೆ ಹಾಕಿ ಪ್ರಯೋಗ ಮಾಡಲು ಮುಂದಾಗಿದ್ದ. ಈ ವೇಳೆ ಕೆಮಿಕಲ್ ಸ್ಫೋಟಗೊಂಡು ವಿದ್ಯಾರ್ಥಿ ಗಂಭೀರವಾಗಿ ಗಾಯಗೊಂಡಿದ್ದಾನೆ.
ಸ್ಫೋಟದ ತೀವ್ರತೆಗೆ ವಿದ್ಯಾರ್ಥಿಯ ಬಟ್ಟೆಗಳು ಸುಟ್ಟು ಕರಕಲಾಗಿವೆ. ಗಾಯಾಳು ವಿದ್ಯಾರ್ಥಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಶಾಲೆಯಲ್ಲಿ ಆತಂಕದ ವಾತಾವರಣ ಸೃಷ್ಟಿಯಾಗಿದೆ.
ವಿಜಯಪುರ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಕೆಮಿಕಲ್ ನ್ನು ವಿದ್ಯಾರ್ಥಿ ಶಾಲೆಗೆ ತಂದಿದ್ದು ಹೇಗೆ? ಎಂಬ ಬಗ್ಗೆ ಪರಿಶೀಲನೆ ನಡೆಸಿದ್ದಾರೆ.

