ನವದೆಹಲಿ: ವಿದ್ಯುತ್ ವಿತರಣಾ ಕಂಪನಿಗಳನ್ನು ಸಾಲದ ಸುಳಿಯಿಂದ ಪಾರು ಮಾಡಿ ಆರ್ಥಿಕ ಚೇತರಿಕೆ ನೀಡಲು ಕೇಂದ್ರ ಸರ್ಕಾರ 2025ರ ವಿದ್ಯುತ್ ತಿದ್ದುಪಡಿ ಮಸೂದೆ ಸಿದ್ಧಪಡಿಸಿದೆ.
ಇದರ ಅನುಸಾರ ಇನ್ನು ಮುಂದೆ ವಿದ್ಯುತ್ ದರಗಳು ವಿದ್ಯುತ್ ಉತ್ಪಾದನಾ ವೆಚ್ಚಕ್ಕೆ ಅನುಕೂಲವಾಗಿ ನಿರ್ಧಾರವಾಗುತ್ತದೆ. ವಿದ್ಯುತ್ ನಿಯಂತ್ರಕರು ವಾರ್ಷಿಕ ದರ ಪರಿಷ್ಕರಣೆ ಮಾಡದಿದ್ದಲ್ಲಿ ಸ್ವಯಂಚಾಲಿತವಾಗಿ ದರ ಬದಲಾವಣೆಯಾಗುವ ವ್ಯವಸ್ಥೆ ಜಾರಿಗೆ ಬರುತ್ತದೆ.
ಲೋಕಸಭೆಯಲ್ಲಿ ಈ ಕುರಿತಾಗಿ ಮಾಹಿತಿ ನೀಡಿದ ಸಚಿವ ಶ್ರೀಪಾದ್ ನಾಯ್ಕ್, ಪ್ರತಿ ವರ್ಷ ಏಪ್ರಿಲ್ 1ರಿಂದ ಜಾರಿಗೆ ಬರುವಂತೆ ದರ ನಿಗದಿಪಡಿಸಲು ಆಯೋಗಗಳಿಗೆ ವಿಶೇಷ ಅಧಿಕಾರ ನೀಡಲಾಗುವುದು. ವಿದ್ಯುತ್ ವಿತರಣಾ ಕಂಪನಿಗಳ ಆರ್ಥಿಕ ಚೇತರಿಕೆಗೆ ಅನುಕೂಲವಾಗುವಂತೆ ವಿದ್ಯುತ್ ಉತ್ಪಾದನಾ ವೆಚ್ಚಕ್ಕೆ ಅನುಗುಣವಾಗಿ ದರ ನಿಗದಿಪಡಿಸಲು ತಿದ್ದುಪಡಿ ಮಸೂದೆ ಸಿದ್ಧಪಡಿಸಲಾಗಿದೆ ಎಂದು ಹೇಳಿದ್ದಾರೆ.

