ಐಸಿಸಿ ಟಿ-20 ಪುರುಷರ ವಿಶ್ವಕಪ್ ಪಂದ್ಯಗಳು ಭಾರತ ಮತ್ತು ಶ್ರೀಲಂಕಾದಲ್ಲಿ ನಡೆಯಲಿವೆ. ಮುಂದಿನ ತಿಂಗಳು ಆರಂಭವಾಗಲಿರುವ ಪಂದ್ಯಗಳಿಗೆ ಭದ್ರತೆ ಒದಗಿಸಲು ಶ್ರೀಲಂಕಾ ವಿಶೇಷ ಪಡೆಯನ್ನು ನಿಯೋಜನೆ ಮಾಡಿದೆ. ಅದರಲ್ಲೂ ಸಂಪ್ರಾದಾಯಿಕ ಎದುರಾಳಿಗಳಾದ ಭಾರತ-ಪಾಕಿಸ್ತಾನ ತಂಡ, ಪಂದ್ಯಕ್ಕೆ ವಿಶೇಷ ಭದ್ರತೆ ಇರಲಿದೆ.
ಟಿ-20 ವಿಶ್ವಕಪ್ ತಂಡಗಳ ಭದ್ರತೆಗೆ ಶ್ರೀಲಂಕಾ ಗಣ್ಯರ ಭದ್ರತೆಗೆ ಬಳಕೆ ಮಾಡುವ ಸಶಸ್ತ್ರ ಪಡೆಗಳನ್ನು ನಿಯೋಜಿಸಲಿದೆ. ಭಾರತ ಮತ್ತು ಪಾಕಿಸ್ತಾನದ ನಡುವಿನ ಪಂದ್ಯಗಳಿಗೆ ವಿಶೇಷ ಒತ್ತು ನೀಡುವ ಭದ್ರತಾ ಕ್ರಮಗಳ ಕುರಿತು ಈಗಾಗಲೇ ಯೋಜನೆ ತಯಾರು ಮಾಡಲಾಗಿದೆ.
ಈ ಕುರಿತು ಎಎಫ್ಪಿ ಜೊತೆ ಅಧಿಕಾರಿಗಳು ಮಾತನಾಡಿದ್ದು, ದ್ವೀಪವು ಭಾರತದೊಂದಿಗೆ ದ್ವೈವಾರ್ಷಿಕ ಕ್ರಿಕೆಟ್ ಪಂದ್ಯಾವಳಿಯನ್ನು ಸಹ-ಆಯೋಜಿಸುತ್ತಿದೆ ಮತ್ತು ಫೆಬ್ರವರಿ 7 ಮತ್ತು ಮಾರ್ಚ್ 8 ರ ನಡುವೆ 20 ಪಂದ್ಯಗಳನ್ನು ನಡೆಸಲಿದೆ ಎಂದು ಹೇಳಿದ್ದಾರೆ.
ಭಾರತ ಮತ್ತು ಪಾಕಿಸ್ತಾನ ತಂಡಗಳು ಫೆಬ್ರವರಿ 15ರಂದು ಶ್ರೀಲಂಕಾದ ರಾಜಧಾನಿ ಕೊಲಂಬೊದಲ್ಲಿ ತಮ್ಮ ಗ್ರೂಪ್ ‘ಎ’ ಪಂದ್ಯಗಳಲ್ಲಿ ಮುಖಾಮುಖಿಯಾಗುತ್ತವೆ. ಕಳೆದ ವರ್ಷದ ಗಡಿ ಸಂಘರ್ಷದ ಬಳಿಕ ನೆರೆಹೊರೆಯ ದೇಶಗಳ ನಡುವಿನ ರಾಜಕೀಯ ಉದ್ವಿಗ್ನತೆ ಇದ್ದು, ಇಂತಹ ಸಂದರ್ಭದಲ್ಲಿಯೇ ಕ್ರಿಕೆಟ್ ಪಂದ್ಯಗಳು ನಡೆಯಲಿವೆ ಎಂದು ತಿಳಿಸಿದ್ದಾರೆ.
ಮ್ಯಾಚ್, ತಂಡಕ್ಕೆ ಭದ್ರತೆ: ಎರಡು ದೇಶಗಳ ತಂಡಗಳು, ಪಂದ್ಯಾವಳಿಯು ಸುಗಮವಾಗಿ ನಡೆಯುವುದನ್ನು ಖಚಿತಪಡಿಸಿಕೊಳ್ಳಲು ಶ್ರೀಲಂಕಾ ಭದ್ರತೆಗೆ ಹೆಚ್ಚಿನ ಆದ್ಯತೆಯನ್ನು ನೀಡಿದೆ. ಭಾರತ-ಪಾಕಿಸ್ತಾನ ಪಂದ್ಯಗಳಿಗೆ ವಿಶೇಷ ಗಮನ ನೀಡಬೇಕು ಎಂದು ಕ್ರೀಡಾ ಸಚಿವ ಸುನಿಲ್ ಕುಮಾರ್ ಗಮಗೆ ಹೇಳಿದ್ದಾರೆ.
ರಾಷ್ಟ್ರಕ್ಕೆ ಆಗಮಿಸುವ ವಿವಿಧ ರಾಷ್ಟ್ರಗಳ ಮುಖ್ಯಸ್ಥರ ಭದ್ರತೆಗೆ ನಿಯೋಜನೆ ಮಾಡುವ ‘ಎಲೈಟ್ ಕಮಾಂಡೋ’ ಘಟಕಗಳನ್ನು ಟಿ-20 ಪಂದ್ಯದಲ್ಲಿ ಭಾಗವಹಿಸುವ ಎಲ್ಲಾ ತಂಡಗಳ ರಕ್ಷಣೆಗೆ ನಿಯೋಜಿಸಲಾಗುತ್ತದೆ ಎಂದು ಅವರು ವಿವರಣೆ ನೀಡಿದ್ದಾರೆ.
ಪೊಲೀಸ್ ಮತ್ತು ಭದ್ರತಾ ಅಧಿಕಾರಿಗಳು ತಂಡದವರು ವಿಮಾನ ನಿಲ್ದಾಣದಿಂದ ಹೊರಬರುವ ಸಮಯದಿಂದ ಅವರು ತಮ್ಮ ವಿಮಾನಕ್ಕೆ ಮರಳುವವರೆಗೆ, ಅವರನ್ನು ರಕ್ಷಣೆ ಮಾಡುತ್ತಾರೆ. ಎಂದು ಅಧಿಕಾರಿಯೊಬ್ಬರು ಹೇಳಿದರು.
ರಾಜಕೀಯ ವೈಷಮ್ಯದಿಂದಾಗಿ ಪಾಕಿಸ್ತಾನವು ಭಾರತದಲ್ಲಿ ತಮ್ಮ ಪಂದ್ಯಗಳನ್ನು ಆಡಲು ನಿರಾಕರಿಸಿದೆ. ಆದ್ದರಿಂದ ಅಂತರರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ (ಐಸಿಸಿ) ಪಂದ್ಯಗಳನ್ನು ಶ್ರೀಲಂಕಾಗೆ ಸ್ಥಳಾಂತರಿಸಿದೆ. ಭದ್ರತಾ ಕಾರಣದಿಂದಾಗಿ ಈಗಾಗಲೇ ಬಾಂಗ್ಲಾದೇಶವು ತಮ್ಮ ಪಂದ್ಯಗಳನ್ನು ಭಾರತದಿಂದ ಹೊರಗೆ ಸ್ಥಳಾಂತರಿಸಲು ಬಯಸಿತ್ತು. ಆದರೆ ಐಸಿಸಿ ಈ ವಿನಂತಿಯನ್ನು ತಿರಸ್ಕರಿಸಿತು. ಆದ್ದರಿಂದ ಬಾಂಗ್ಲಾದೇಶವು ಪಂದ್ಯಾವಳಿಯಿಂದ ಹಿಂದೆ ಸರಿದಿದೆ ಮತ್ತು ಅವರ ಬದಲು ಸ್ಕಾಟ್ಲೆಂಡ್ ತಂಡ ಸೇರ್ಪಡೆಯಾಗಿದೆ.
ಪಾಕಿಸ್ತಾನ-ಭಾರತ, ಭಾರತ-ಬಾಂಗ್ಲಾದೇಶ ವಿವಾದಲ್ಲಿ ಶ್ರೀಲಂಕಾ ತಟಸ್ಥ ನೀತಿಯನ್ನು ಅನುಸರಿಸುತ್ತಿದೆ. ನಾವು ಈ ವಿವಾದಗಳಲ್ಲಿ ತಟಸ್ಥವಾಗಿದ್ದೇವೆ, ಇವೆಲ್ಲವೂ ಸ್ನೇಹಪರ ರಾಷ್ಟ್ರಗಳಾಗಿವೆ ಎಂದು ಶ್ರೀಲಂಕಾ ಹೇಳಿದೆ.
ಶ್ರೀಲಂಕಾ ಯಾವುದೇ ದೇಶಗಳ ಭವಿಷ್ಯದ ಪಂದ್ಯಾವಳಿಗಳನ್ನು ಆಯೋಜಿಸಲು ಸಿದ್ಧವಾಗಿದೆ. ಶ್ರೀಲಂಕಾ ತನ್ನ ಅಂತರರಾಷ್ಟ್ರೀಯ ತಾಣಗಳನ್ನು ಅಭಿವೃದ್ಧಿ ಮಾಡಲು ಟಿ-20 ವಿಶ್ವಕಪ್ ಅನ್ನು ಒಂದು ಅವಕಾಶವಾಗಿ ಬಳಸಿಕೊಂಡಿದೆ.
ಕೊಲಂಬೊದ ಎರಡು ಕ್ರೀಡಾಂಗಣಗಳಲ್ಲಿ ಒಂದಾದ ಸಿಂಗಲೀಸ್ ಸ್ಪೋರ್ಟ್ಸ್ ಕ್ಲಬ್ನಲ್ಲಿ ಹೊಸ ಫ್ಲಡ್ಲೈಟ್ ನಿಯೋಜಿಸಿದೆ. ಕ್ಯಾಂಡಿಯ ಪಲ್ಲೆಕೆಲೆ ಕ್ರೀಡಾಂಗಣವು ನವೆಂಬರ್ನಲ್ಲಿನ ಮಾರಣಾಂತಿಕ ಚಂಡಮಾರುತಕ್ಕೆ ಸಿಲುಕಿರಲಿಲ್ಲ. ಶ್ರೀಲಂಕಾ ಮತ್ತು ಇಂಗ್ಲೆಂಡ್ ನಡುವಿನ ಪಂದ್ಯಾವಳಿಯನ್ನು ಇಲ್ಲಿ ಆಯೋಜಿಸಲಾಗುತ್ತದೆ.

