ಹಣಕಾಸು ಸಚಿವರೂ ಆಗಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ 202-27ನೇ ಸಾಲಿನ ಬಜೆಟ್ ಮಂಡನೆ ತಯಾರಿ ನಡೆಸುತ್ತಿದ್ದಾರೆ. ವಿವಿಧ ಜಿಲ್ಲೆಗಳಿಂದ ಬಜೆಟ್ ಕುರಿತು ಈಗಾಗಲೇ ಅಪಾರ ನಿರೀಕ್ಷೆ ಇದೆ. ದಕ್ಷಿಣ ಕನ್ನಡ ಜಿಲ್ಲೆಯೂ ಬಜೆಟ್ ಬಗ್ಗೆ ಅಪಾರ ನಿರೀಕ್ಷೆ ಹೊಂದಿದ್ದು, ಮಂಗಳೂರಿಗೆ ಬಂಪರ್ ಕೊಡುಗೆ ನಿರೀಕ್ಷೆ ಮಾಡಲಾಗಿದೆ.
ಮಂಗಳೂರು ದಕ್ಷಿಣ ಕ್ಷೇತ್ರದ ಬಿಜೆಪಿ ಶಾಸಕ ಡಿ.ವೇದವ್ಯಾಸ ಕಾಮತ್ ಮುಖ್ಯಮಂತ್ರಿ ಸಿದ್ದರಾಮಯ್ಯರನ್ನು ಭೇಟಿಯಾಗಿ ಬಜೆಟ್ನಲ್ಲಿ ಮಂಗಳೂರು ನಗರದ ಬೇಡಿಕೆ ಕುರಿತು ಮನವಿ ಸಲ್ಲಿಸಿದ್ದಾರೆ.
ಈ ಕುರಿತು ಶಾಸಕರು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಾಕಿದ್ದು, ‘ಈ ಬಾರಿಯ ಬಜೆಟ್ ನಲ್ಲಿ ಮಂಗಳೂರು ದಸರಾಗೆ ವಿಶೇಷ ಆದ್ಯತೆಯ ಮೇರೆಗೆ 5 ಕೋಟಿ ನೀಡುವಂತೆ ಮಾನ್ಯ ಮುಖ್ಯಮಂತ್ರಿಗಳಿಗೆ ಮನವಿ’ ಎಂದು ಹೇಳಿದ್ದಾರೆ.
‘ಮಂಗಳೂರು ದಸರಾ ದಕ್ಷಿಣ ಕನ್ನಡ ಜಿಲ್ಲೆಯ ಹೆಮ್ಮೆಯ ಸಂಕೇತವಾಗಿದ್ದು ಪ್ರತೀ ವರ್ಷ ದೇಶ-ವಿದೇಶಗಳ ಲಕ್ಷಾಂತರ ಭಕ್ತರನ್ನು ಆಕರ್ಷಿಸುತ್ತಿದ್ದು ಇಂತಹ ವೈಭವದ ಹಬ್ಬಕ್ಕೆ ರಾಜ್ಯ ಸರ್ಕಾರವು ಈ ಬಾರಿಯ 2026-27 ನೇ ಸಾಲಿನ ಬಜೆಟ್ ನಲ್ಲಿ ರೂ.5 ಕೋಟಿ ಅನುದಾನ ಘೋಷಣೆ ಮಾಡುವಂತೆ ಮಾನ್ಯ Chief Minister of Karnataka ಶ್ರೀ Siddaramaiah ನವರನ್ನು ಭೇಟಿ ಮಾಡಿ ಮನವಿ ಮಾಡಲಾಯಿತು’ ಎಂದು ತಿಳಿಸಿದ್ದಾರೆ.
‘ಮೈಸೂರು ನಂತರ ರಾಜ್ಯದಲ್ಲೇ ಅತೀ ಹೆಚ್ಚು ಜನ ಸೇರುವ ಹಬ್ಬ ಮಂಗಳೂರು ದಸರಾ. ನವರಾತ್ರಿಯ ಸಂದರ್ಭದಲ್ಲಿ ಇಲ್ಲಿನ ಪ್ರಸಿದ್ಧ ತೀರ್ಥಕ್ಷೇತ್ರಗಳು ನಾಡಿನ ಭಕ್ತರಿಂದ ತುಂಬಿರುತ್ತವೆ. ರಾಜ್ಯ ಸರ್ಕಾರ ಬಜೆಟ್ ನಲ್ಲಿ 5 ಕೋಟಿ ಘೋಷಣೆ ಮಾಡಿದರೆ ಇನ್ನಷ್ಟು ವಿಜೃಂಭಣೆಯಿಂದ ದಸರಾ ಆಯೋಜನೆ ಮಾಡಬಹುದಾಗಿದ್ದು ಹಬ್ಬದ ಸಂಭ್ರಮವೂ ಹೆಚ್ಚಲಿದೆ. ಆದ್ದರಿಂದ ದಯವಿಟ್ಟು ಈ ಬಗ್ಗೆ ಆದ್ಯತೆಯ ಮೇರೆಗೆ ಕ್ರಮಗೊಳ್ಳಿ ಎಂದು ಮನವಿ’ ಎಂದು ಹೇಳಿದ್ದಾರೆ.
‘ಈ ಹಿಂದೆ ಮಂಗಳೂರು ಮಹಾನಗರ ಪಾಲಿಕೆಯಲ್ಲಿ ಬಿಜೆಪಿ ಆಡಳಿತದಲ್ಲಿದ್ದಾಗ, ದಸರಾ ವೇಳೆ ಕುದ್ರೋಳಿ ಗೋಕರ್ಣನಾಥೇಶ್ವರ ಕ್ಷೇತ್ರದಿಂದ ಆರಂಭವಾಗಿ ಮಂಗಳಾದೇವಿ, ಉರ್ವ ಮಾರಿಗುಡಿ, ಕಾರ್ ಸ್ಟ್ರೀಟ್, ಡೊಂಗರಕೇರಿ, ಹೀಗೆ ಇಡೀ ನಗರಕ್ಕೆ ಪಾಲಿಕೆ ವತಿಯಿಂದಲೇ ದೀಪಾಲಂಕಾರಗೊಳ್ಳಬೇಕು ಎಂದು ಚಿಂತನೆ ನಡೆಸಿ ಅಂದಿನ ಮೇಯರ್, ಕಾರ್ಪೊರೇಟರ್, ಸ್ಥಾಯಿ ಸಮಿತಿ ಸದಸ್ಯರು ಹಾಗೂ ಜಿಲ್ಲಾಧ್ಯಕ್ಷರ ಸಹಿತ ಎಲ್ಲರ ಸಹಕಾರದೊಂದಿಗೆ ಮಹತ್ವದ ನಿರ್ಧಾರವನ್ನು ಕೈಗೊಳ್ಳಲಾಗಿತ್ತು’ ಎಂದು ತಿಳಿಸಿದ್ದಾರೆ.
‘ಇದರಿಂದಾಗಿ ದೇವಸ್ಥಾನಗಳಿಗೆ ದೀಪಾಲಂಕಾರಕ್ಕಾಗಿಯೇ ವರ್ಷಕ್ಕೆ ಸುಮಾರು 50 ರಿಂದ 60 ಲಕ್ಷದವರೆಗಿನ ಬಹುದೊಡ್ಡ ಆರ್ಥಿಕ ಹೊರೆಯಾಗುವುದು ತಪ್ಪಿರುವುದು ಈ ಸಂದರ್ಭದಲ್ಲಿ ಸ್ಮರಣೀಯ’ ಎಂದು ಪೋಸ್ಟ್ ಹಾಕಿದ್ದಾರೆ.
ಮನವಿ ಪತ್ರದ ವಿವರ: ಶಾಸಕ ಡಿ.ವೇದವ್ಯಾಸ ಕಾಮತ್ ಸಲ್ಲಿಕೆ ಮಾಡಿರುವ ಮನವಿ ಪತ್ರವು 2026-27ನೇ ಸಾಲಿನ ಅಯವ್ಯಯದಲ್ಲಿ ಮಂಗಳೂರು ದಸರಾ ಆಚರಣೆಗೆ ರೂ. 5 ಕೋಟಿ ಅನುದಾನ ಮೀಸಲಿಸುವ ಕುರಿತು ಎಂಬ ವಿಷಯವನ್ನು ಒಳಗೊಂಡಿದೆ.
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಪ್ರತಿ ವರ್ಷವೂ ನಮ್ಮ ನಾಡ ಹಬ್ಬವಾಗಿರುವ ದಸರಾ ಹಬ್ಬವನ್ನು ಕಳೆದ 35 ವರ್ಷಗಳಿಂದ ಆಚರಣೆ ಮಾಡುತ್ತಾ ಬಂದಿದ್ದು, ಮೈಸೂರು ದಸರಾ ಹಬ್ಬದಂತೆ ಕರಾವಳಿ ಭಾಗದ ಜನರು ಮಂಗಳೂರಿನಲ್ಲಿ ವಿಜೃಂಭಣೆಯಿದ ಆಚರಣೆ ಮಾಡುತ್ತಾ ಬಂದಿದ್ದು, ಈ ಹಬ್ಬಕ್ಕೆ ರಾಜ್ಯದ ವಿವಿಧ ಕಡೆಗಳಿಂದ ಲಕ್ಷಾಂತರ ಜನರು ಭಾಗವಹಿಸುತ್ತಿದ್ದು, ಇದು ಮಂಗಳೂರಿಗೆ ಹೆಮ್ಮೆಯ ಆಚರಣೆಯಾಗಿದೆ ಎಂದು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.
ಈ ದಸರಾ ಹಬ್ಬವು ಮೈಸೂರು ದಸರಾ ಹಬ್ಬದಂತೆಯೇ ಮಂಗಳೂರು: ದಸರಾ ಹಬ್ಬವು ರಾಜ್ಯದ 2ನೇ ಅತೀ ಹೆಚ್ಚು ಸಾರ್ವಜನಿಕರು ಸೇರುವ ಹಬ್ಬವಾಗಿದೆ. ಈ ಹಬ್ಬಕ್ಕೆ ಇನ್ನೂ ಹೆಚ್ಚಿನ ಮೆರಗು ನೀಡುವ ನಿಟ್ಟಿನಲ್ಲಿ ಪ್ರತಿ ವರ್ಷ ಸರ್ಕಾರದ ವತಿಯಿಂದ ವಿಶೇಷ ಅನುದಾನವನ್ನು ನಿಗದಿಗೊಳಿಸಿ, ರೂ.5 ಕೋಟಿ ಅನುದಾನವನ್ನು 2026-27ನೇ ಸಾಲಿನ ಆಯವ್ಯಯದಲ್ಲಿ ಘೋಷಣೆ ಮಾಡುವಂತೆ ಈ ಮೂಲಕ ಕೋರಲಾಗಿದೆ ಎಂದು ಮನವಿ ಸಲ್ಲಿಸಿದ್ದಾರೆ.

