ಕಾಂಗ್ರೆಸ್‌ನ ಹಿರಿಯ ನಾಯಕರಾಗಿದ್ದ ಶಾಮನೂರು ಶಿವಶಂಕರಪ್ಪ ನಿಧನದ ಕಾರಣಕ್ಕೆ ದಾವಣಗೆರೆ ದಕ್ಷಿಣ ಕ್ಷೇತ್ರದ ಉಪ ಚುನಾವಣೆ ಎದುರಾಗಿದೆ. ಆದರೆ ಉಪ ಚುನಾವಣೆ ಟಿಕೆಟ್ ಯಾರಿಗೆ? ಎಂಬುದು ಬಹು ಚರ್ಚಿತ ವಿಚಾರ. ಶಾಮನೂರು ಶಿವಶಂಕರಪ್ಪ ಕುಟುಂಬಕ್ಕೆ ಟಿಕೆಟ್ ಸಿಗಲಿದೆಯೇ?, ಅಭ್ಯರ್ಥಿ ಯಾರು? ಎಂಬ ಚರ್ಚೆಗಳು ನಡೆಯುತ್ತಿವೆ.
ಶಾಮನೂರು ಶಿವಶಂಕರಪ್ಪ ಕುಟುಂಬಕ್ಕೆ ಟಿಕೆಟ್ ಬೇಡ. ಈ ಬಾರಿ ಮುಸ್ಲಿಂ ಅಭ್ಯರ್ಥಿಗಳಿಗೆ ಟಿಕೆಟ್ ಕೊಡಿ ಎಂಬುದು ಬೇಡಿಕೆಯಾಗಿದೆ. ಈ ಕುರಿತು ಕ್ಷೇತ್ರದ ಹಲವು ಕಾಂಗ್ರೆಸ್ ಮುಖಂಡರು ರಾಜ್ಯಮಟ್ಟದಲ್ಲಿ ಟಿಕೆಟ್‌ಗಾಗಿ ಲಾಬಿ ಮಾಡುತ್ತಿದ್ದಾರೆ.
ದಾವಣಗೆರೆ ದಕ್ಷಿಣದ ಟಿಕೆಟ್ ವಿಚಾರ ವಸತಿ, ವಕ್ಫ್ ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಸಚಿವ ಜಮೀರ್ ಅಹ್ಮದ್ ಖಾನ್ ತನಕ ಹೋಗಿದೆ. ದಾವಣಗೆರೆಗೆ ಆಗಮಿಸಿದ್ದ ಅವರಿಗೆ ಮಾಧ್ಯಮಗಳು ಈ ಕುರಿತು ಪ್ರಶ್ನಿಸಿವೆ.
ಜಮೀದ್ ಅಹ್ಮದ್ ಖಾನ್ ಹೇಳಿಕೆ: ದಾವಣಗೆರೆಯಲ್ಲಿ ಮಾತನಾಡಿದ ಜಮೀರ್ ಅಹ್ಮದ್ ಖಾನ್, “ಶಾಮನೂರು ಶಿವಶಂಕರಪ್ಪ ನಮ್ಮ ಪಕ್ಷದ ಹಿರಿಯ ನಾಯಕರಾಗಿದ್ದರು” ಎಂದು ಹೇಳಿದರು.
“2023ರ ವಿಧಾನಸಭೆ ಚುನಾವಣೆ ಪ್ರಚಾರದ ಸಮಯದಲ್ಲಿ ಅವರು ಅಲ್ಪಸಂಖ್ಯಾತರು ಇರುವ ಬಡಾವಣೆಗಳಲ್ಲಿ ಇದು ನನ್ನ ಕೊನೆಯ ಚುನಾವಣೆ. ಮುಂದಿನ ಚುನಾವಣೆಯಲ್ಲಿ ಅಲ್ಪ ಸಂಖ್ಯಾತರಿಗೆ ಟಿಕೆಟ್ ಕೊಡಿಸಿ, ಗೆಲ್ಲಿಸಿಕೊಂಡು ಬರುತ್ತೇನೆ ಎಂದು ಹೇಳಿದ್ದರು” ಎಂದರು.
“ಈ ಹಿನ್ನಲೆಯಲ್ಲಿ ಅಲ್ಪಸಂಖ್ಯಾತ ಸಮುದಾಯದ ಬೇರೆ ಬೇರೆ ಮುಖಂಡರು ನನ್ನ ಭೇಟಿಗೆ ಆಗಮಿಸಿದ್ದರು. ಕ್ಷೇತ್ರದಲ್ಲಿ 80 ಸಾವಿರದಷ್ಟು ಮುಸ್ಲಿಂ ಮತಗಳಿವೆ. ಬೇರೆ ಬೇರೆ ಸಮಯದಾಯದ ಜನರು ಇದ್ದಾರೆ. ಎಲ್ಲರೂ ಬಂದು ಟಿಕೆಟ್‌ಗಾಗಿ ಮನವಿ ಮಾಡಿದ್ದಾರೆ” ಎಂದು ಜಮೀರ್ ಅಹ್ಮದ್ ಖಾನ್ ತಿಳಿಸಿದರು.
“ನಾನು ವರದಿ ತೆಗೆದುಕೊಂಡು ಮುಖ್ಯಮಂತ್ರಿಗಳಿಗೆ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರಿಗೆ ಕೊಡುತ್ತೇನೆ. ಎಐಸಿಸಿಗೂ ನನಗೆ ಏನು ಮನವಿ ಬಂದಿದೆ ಅದನ್ನು ಹೇಳುತ್ತೇನೆ” ಎಂದು ಸ್ಪಷ್ಟಪಡಿಸಿದರು.
ಉಪ ಚುನಾವಣೆಯಲ್ಲಿ ಅವರ ಕುಟುಂಬಕ್ಕೆ ಟಿಕೆಟ್ ಕೊಡುವುದು ಸಂಪ್ರದಾಯವಾಗಿದೆ. ಆದ್ದರಿಂದ ಶಾಮನೂರು ಶಿವಶಂಕರಪ್ಪ ಕುಟುಂಬಕ್ಕೆ ಟಿಕೆಟ್ ಸಿಗುತ್ತದೆಯೇ? ಎಂಬ ಪ್ರಶ್ನೆಗೆ ಉತ್ತರಿಸಿ, “ಟಿಕೆಟ್‌ಗಾಗಿ ಮನವಿಗಳು ಬಂದಿವೆ, ಆ ಬಗ್ಗೆ ನಾವು ತೀರ್ಮಾನ ಮಾಡಲು ಆಗುವುದಿಲ್ಲ. ಹೈಕಮಾಂಡ್ ತೀರ್ಮಾನ ಮಾಡಬೇಕು” ಎಂದರು.
“ನಮ್ಮ ಪಕ್ಷ ಹೈಕಮಾಂಡ್ ಪಕ್ಷ. ಅದು ಯಾರಿಗೆ ಟಿಕೆಟ್ ಕೊಡಬೇಕು ಎಂದು ತೀರ್ಮಾನ ಮಾಡಲಿದೆ. ಶಾಮನೂರು ಶಿವಶಂಕರಪ್ಪ ಅವರು ಈಗ ಇಲ್ಲ. ಅವರೇ ಹೇಳಿದ್ದಾರೆ ಮುಂದಿನ ಚುನಾವಣೆಯಲ್ಲಿ ಅಲ್ಪಸಂಖ್ಯಾತರಿಗೆ ಟಿಕೆಟ್ ಸಿಗಬೇಕು ಎಂದು. ಈ ಕುರಿತು ಹಲವಾರು ಸಂಘಟನೆಗಳು ನನ್ನ ಬಳಿ ಬಂದು ಹೇಳಿದ್ದಾರೆ. ಪಕ್ಷ ತೀರ್ಮಾನ ಮಾಡಬೇಕು” ಎಂದು ಸಚಿವರು ಹೇಳಿದರು.
ದಾವಣಗೆರೆ ದಕ್ಷಿಣದಲ್ಲಿ ಕಾಂಗ್ರೆಸ್ ಟಿಕೆಟ್‌ಗಾಗಿ ಸೈಯದ್ ಸೈಫುಲ್ಲಾ, ಸೈಯದ್ ಸೈಫುಲ್ಲಾ ಪುತ್ರ, ರಾಷ್ಟ್ರೀಯ ಯೂತ್ ಕಾಂಗ್ರೆಸ್ ಕಾರ್ಯದರ್ಶಿ ಸೈಯದ್ ಖಾಲಿದ್ ಅಹ್ಮದ್, ಎಮ್ಎಲ್ಸಿ ಅಬ್ದುಲ್ ಜಬ್ಬಾರ್ ಹಾಗೂ ಅಯೂಬ್ ಪೈಲ್ವಾನ್ ಇನ್ನಿತರರು ಟಿಕೆಟ್ ಆಕಾಂಕ್ಷಿಗಳು.
ಶಾಮನೂರು ಶಿವಶಂಕರಪ್ಪ ಪುತ್ರ ಎಸ್.ಎಸ್.ಮಲ್ಲಿಕಾರ್ಜುನ್ ದಾವಣಗೆರೆ ಉತ್ತರ ಕ್ಷೇತ್ರದ ಶಾಸಕರು ಮತ್ತು ಸಿದ್ದರಾಮಯ್ಯ ಸಂಪುಟದಲ್ಲಿ ಸಚಿವರು. ಎಸ್.ಎಸ್.ಮಲ್ಲಿಕಾರ್ಜುನ್ ಪತ್ನಿ ಡಾ.ಪ್ರಭಾ ಮಲ್ಲಿಕಾರ್ಜುನ್ ದಾವಣಗೆರೆ ಸಂಸದರು.
ಆದ್ದರಿಂದ ಶಾಮನೂರು ಶಿವಶಂಕರಪ್ಪ ಕುಟುಂಬಕ್ಕೆ ಟಿಕೆಟ್ ಬೇಡ. ಶಾಮನೂರು ಶಿವಶಂಕರಪ್ಪ ಅವರು ಈ ಹಿಂದೆ ಹೇಳಿದ್ದಂತೆ ಮುಸ್ಲಿಂ ಸಮುದಾಯಕ್ಕೆ ಟಿಕೆಟ್ ನೀಡಬೇಕು ಎಂದು ಬೇಡಿಕೆ ಇಡಲಾಗುತ್ತಿದೆ.
ಬಿಜೆಪಿ-ಜೆಡಿಎಸ್ ಮೈತ್ರಿಕೂಟ ಸಹ ಇನ್ನೂ ದಾವಣಗೆರೆ ದಕ್ಷಿಣಕ್ಕೆ ಅಭ್ಯರ್ಥಿಯನ್ನು ಅಂತಿಮಗೊಳಿಸಿಲ್ಲ. ಮಾರ್ಚ್ ಅಥವ ಏಪ್ರಿಲ್‌ನಲ್ಲಿ ಉಪ ಚುನಾವಣೆ ನಡೆಯುವ ನಿರೀಕ್ಷೆ ಇದ್ದು, ಶೀಘ್ರವೇ ಅಭ್ಯರ್ಥಿಗಳ ಘೋಷಣೆಯಾಗುವ ನಿರೀಕ್ಷೆ ಇದೆ.

