HomeKarnatakaಮಳೆ ಕೊರತೆ, ಬೆಳೆ ಹಾನಿ, ರೈತರ ಸಂಕಷ್ಟ ಸೇರಿ ರಾಜ್ಯದ ಭೀಕರ ಬರ ಪರಿಸ್ಥಿತಿ ಬಗ್ಗೆ...

ಮಳೆ ಕೊರತೆ, ಬೆಳೆ ಹಾನಿ, ರೈತರ ಸಂಕಷ್ಟ ಸೇರಿ ರಾಜ್ಯದ ಭೀಕರ ಬರ ಪರಿಸ್ಥಿತಿ ಬಗ್ಗೆ ಕೇಂದ್ರದ ಅಧ್ಯಯನ ತಂಡಕ್ಕೆ ಸಮಗ್ರ ಚಿತ್ರಣ ನೀಡಲು ಕ್ರಮ: ಡಿಸಿಎಂ ಪರಮೇಶ್ವರ್

 ಬೆಂಗಳೂರು: ಮಳೆ ಕೊರತೆ, ಬೆಳೆ ಹಾನಿ, ರೈತರ ಸಂಕಷ್ಟ ಸೇರಿ ರಾಜ್ಯದ ಭೀಕರ ಬರ ಪರಿಸ್ಥಿತಿ ಬಗ್ಗೆ ಕೇಂದ್ರದ ಅಧ್ಯಯನ ತಂಡಕ್ಕೆ ಸಮಗ್ರ ಚಿತ್ರಣ ನೀಡಲಾಗುವುದು ಎಂದು ಡಿಸಿಎಂ ಡಾ.ಜಿ. ಪರಮೇಶ್ವರ್ ಹೇಳಿದ್ದಾರೆ.

ಕೇಂದ್ರದಿಂದ ರಾಜ್ಯಕ್ಕೆ ಆಗಮಿಸುತ್ತಿರುವ ಬರ ಅಧ್ಯಯನ ತಂಡಕ್ಕೆ ರಾಜ್ಯದ ಬರ ಪರಿಸ್ಥಿತಿಯ ಸಮಗ್ರ ಚಿತ್ರಣವನ್ನು ನೀಡಲಾಗುವುದು. ಕಳೆದ ಜೂನ್‌ನಿಂದ ಈವರೆಗೆ ರಾಜ್ಯದಲ್ಲಿ ಉಂಟಾಗಿರುವ ಮಳೆ ಕೊರತೆ, ಬೆಳೆ ಹಾನಿ ಹಾಗೂ ರೈತರು ಎದುರಿಸುತ್ತಿರುವ ಸಂಕಷ್ಟಗಳ ಕುರಿತು ವಾಸ್ತವಾಂಶಗಳೊಂದಿಗೆ ಮಾಹಿತಿ ಒದಗಿಸಲಾಗುವುದು ಎಂದರು.

ಕಳೆದ ಒಂದೆರಡು ದಿನಗಳಿಂದ ರಾಜ್ಯದ ಕೆಲವೆಡೆ ಮಳೆಯಾಗಿದ್ದರೂ, ಈಗಾಗಲೇ ಉಂಟಾಗಿರುವ ಬೆಳೆ ಹಾನಿಯನ್ನು ಸರಿಪಡಿಸುವಷ್ಟು ಈ ಮಳೆ ರೈತರಿಗೆ ಪ್ರಯೋಜನವಾಗುವುದಿಲ್ಲ. ಬರದಿಂದ ಸಂಕಷ್ಟಕ್ಕೊಳಗಾಗಿರುವ ಅನ್ನದಾತರ ಪರಿಸ್ಥಿತಿಯನ್ನು ಕೇಂದ್ರ ಅಧ್ಯಯನ ತಂಡದ ಗಮನಕ್ಕೆ ಸಮಗ್ರವಾಗಿ ತರಲಾಗುವುದು. ರೈತರ ಹಿತಾಸಕ್ತಿ ಮತ್ತು ರಾಜ್ಯದ ಹಕ್ಕಿನ ಪರಿಹಾರಕ್ಕಾಗಿ ಕೇಂದ್ರದ ಮುಂದೆ ವಾಸ್ತವ ಪರಿಸ್ಥಿತಿಯನ್ನು ಸ್ಪಷ್ಟವಾಗಿ ಮಂಡಿಸಲಾಗುವುದು ಎಂದು ಹೇಳಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ರೈತರಿಗೆ ನೀಡಲಾಗುವ ಇನ್‌ಪುಟ್‌ ಸಬ್ಸಿಡಿಯ ಮಾನದಂಡಗಳು ಸಮರ್ಪಕವಾಗಿಲ್ಲ. ಬೆಳೆಹಾನಿಯಿಂದ ರೈತರು ಅನುಭವಿಸುವ ನಷ್ಟಕ್ಕೆ ತಕ್ಕ ಪರಿಹಾರ ದೊರೆಯಬೇಕಿದೆ. ಈ ಹಿನ್ನೆಲೆಯಲ್ಲಿ SDRF ಮತ್ತು NDRF ಅಡಿಯಲ್ಲಿ ನೀಡಲಾಗುವ ನೆರವಿನ ಮಾನದಂಡಗಳನ್ನು, ವಿಶೇಷವಾಗಿ ರೈತರ ಇನ್‌ಪುಟ್‌ ಸಬ್ಸಿಡಿ ಮಾನದಂಡಗಳನ್ನು ಶೀಘ್ರ ಪರಿಷ್ಕರಿಸುವಂತೆ ಕೇಂದ್ರ ಗೃಹ ಸಚಿವರಾದ ಅಮಿತ್‌ ಶಾ ಅವರಿಗೆ ಮನವಿ ಮಾಡಲಾಗಿದೆ.

ರೈತರ ಸಮಸ್ಯೆಗೆ ಸ್ಪಂದಿಸುವಂತಹ ಪರಿಹಾರ ವ್ಯವಸ್ಥೆ ರೂಪುಗೊಳ್ಳಬೇಕು. ನಮ್ಮ ಸರ್ಕಾರವು ಈ ಕುರಿತು ತನ್ನ ವಿವರವಾದ ಅಭಿಪ್ರಾಯ ಹಾಗೂ ಸಮರ್ಥನೆಗಳನ್ನು ಕೇಂದ್ರಕ್ಕೆ ಈಗಾಗಲೇ ಸಲ್ಲಿಸಿದ್ದು, ಮಾನದಂಡಗಳ ಪರಿಷ್ಕರಣೆಗೆ ಆದ್ಯತೆ ನೀಡುವಂತೆ ಒತ್ತಾಯಿಸಲಾಗಿದೆ ಎಂದು ತಿಳಿಸಿದ್ದಾರೆ.

ತೀವ್ರ ಬರದಿಂದ ಸಂಕಷ್ಟಕ್ಕೆ ಸಿಲುಕಿರುವ ರಾಜ್ಯದ ರೈತರು ಮತ್ತು ಜನರಿಗೆ ಸಕಾಲದಲ್ಲಿ ನೆರವಾಗುವಂತೆ ಆಗ್ರಹಿಸಿ ಕೇಂದ್ರ ಕೃಷಿ ಸಚಿವರಾದ ಶಿವರಾಜ್‌ ಸಿಂಗ್‌ ಚೌಹಾಣ್‌ ಅವರನ್ನು ಪತ್ರದ ಮೂಲಕ ಒತ್ತಾಯಿಸಿದ್ದೇನೆ. ಪತ್ರದಲ್ಲಿ ಕೇಂದ್ರದ ಮೌಲ್ಯಮಾಪನ ಪ್ರಕ್ರಿಯೆಯನ್ನು ತ್ವರಿತಗೊಳಿಸಿ, ರಾಜ್ಯಕ್ಕೆ ಅಗತ್ಯವಿರುವ ಪರಿಹಾರ ನೆರವನ್ನು ಶೀಘ್ರ ಬಿಡುಗಡೆ ಮಾಡುವಂತೆ ಮನವಿ ಮಾಡಿದ್ದೇನೆ ಎಂದು ಹೇಳಿದ್ದಾರೆ.

ಬರದ ಸಂಕಷ್ಟದಲ್ಲಿ ಜನರನ್ನು ಒಂಟಿಯಾಗಲು ನಮ್ಮ ಸರ್ಕಾರ ಎಂದಿಗೂ ಬಿಡುವುದಿಲ್ಲ. ರೈತರ ನೋವಿಗೆ ಸ್ಪಂದಿಸಿ, ಅಗತ್ಯ ನೆರವು ತಲುಪಿಸುವ ಪ್ರತಿಯೊಂದು ಹೆಜ್ಜೆಯಲ್ಲೂ ನಮ್ಮ ಸರ್ಕಾರ ರಾಜ್ಯದ ಜನರ ಜೊತೆಗಿದೆ. ಕಷ್ಟದ ಸಮಯದಲ್ಲಿ ಜನರ ಕೈ ಹಿಡಿಯುವುದು ನಮ್ಮ ಸರ್ಕಾರದ ಬದ್ಧತೆ ಎಂದು ತಿಳಿಸಿದ್ದಾರೆ.

ರಾಜ್ಯದ ಬರ ಪರಿಸ್ಥಿತಿಯನ್ನು ನಿರಂತರವಾಗಿ ಮೌಲ್ಯಮಾಪನ ನಡೆಸಲಾಗುತ್ತಿದ್ದು, ರೈತರ ಸಂಕಷ್ಟಕ್ಕೆ ತ್ವರಿತವಾಗಿ ಸ್ಪಂದಿಸುವ ನಿಟ್ಟಿನಲ್ಲಿ ಹಂತ ಹಂತವಾಗಿ ಕ್ರಮ ಕೈಗೊಳ್ಳುತ್ತಿದ್ದೇವೆ. ಈವರೆಗೆ 177 ತಾಲೂಕುಗಳನ್ನು ಬರಪೀಡಿತ ಎಂದು ಘೋಷಿಸಿದ್ದೆವು. ಇದೀಗ ಮತ್ತೆ 40 ತಾಲೂಕುಗಳನ್ನು ʼಬರಪೀಡಿತʼ ಎಂದು ಘೋಷಿಸಿ ಆದೇಶಿಸಿದ್ದೇವೆ. ಈ ಪೈಕಿ 24 ತಾಲೂಕುಗಳು ತೀವ್ರ ಬರಪೀಡಿತ ಹಾಗೂ 16 ತಾಲೂಕುಗಳು ಮಧ್ಯಮ ಬರಪೀಡಿತವಾಗಿದ್ದು, ಇದರೊಂದಿಗೆ ರಾಜ್ಯದಲ್ಲಿ ಬರಪೀಡಿತ ಎಂದು ಘೋಷಿಸಲಾದ ತಾಲೂಕುಗಳ ಸಂಖ್ಯೆ 217ಕ್ಕೆ ಏರಿಕೆಯಾಗಿದೆ.

ಮುಂಗಾರು ಹಂಗಾಮು ಮುಗಿಯುವವರೆಗೂ ಬರ ಪರಿಸ್ಥಿತಿಯ ಮೇಲ್ವಿಚಾರಣೆ ಮುಂದುವರಿಯಲಿದ್ದು, ಅಗತ್ಯ ಕಂಡುಬಂದಲ್ಲಿ ಮುಂದಿನ ಹಂತದಲ್ಲಿಯೂ ಹೆಚ್ಚುವರಿ ತಾಲೂಕುಗಳನ್ನು ಗ್ರೌಂಡ್ ಟ್ರೂಥಿಂಗ್‌ಗೆ ಸೇರಿಸಲಾಗುವುದು. ರೈತರ ಸಂಕಷ್ಟಕ್ಕೆ ಸ್ಪಂದಿಸುವುದು ಸರ್ಕಾರದ ಮೊದಲ ಆದ್ಯತೆ. ಬೆಳೆ ಹಾನಿಯ ನೈಜ ಚಿತ್ರಣ ಆಧರಿಸಿ, ನಿಯಮಾನುಸಾರ ಅಗತ್ಯ ನೆರವು ತಲುಪಿಸಲು ನಾವು ಬದ್ಧರಿದ್ದೇವೆ ಎಂದು ಡಿಸಿಎಂ ಪರಮೇಶ್ವರ್ ತಿಳಿಸಿದ್ದಾರೆ.

For Latest News Updates, Join Our Whatsapp Community🚩
niranjan
niranjan
Niranjan working in media filed from 24 years. He worked in Hubballi Udayavani and local newspapers in Shivamogga. ನಿರಂಜನ ಮೂರ್ತಿ ಎಚ್.ಸಿ. 24 ವರ್ಷಗಳಿಂದ ಮಾಧ್ಯಮ ಕ್ಷೇತ್ರದಲ್ಲಿದ್ದಾರೆ. ಎಂಎ ಕನ್ನಡ, ಪಿಜಿ ಡಿಪ್ಲೊಮಾ ಇನ್ ಜರ್ನಲಿಸಂ ವ್ಯಾಸಂಗ ಮಾಡಿದ್ದಾರೆ. ಶಿವಮೊಗ್ಗದ ಎಚ್ಚರಿಕೆ, ನಮ್ಮನಾಡು, ಜೈ ಕರುನಾಡು, ನುಡಿಗಿಡ, ಕ್ರಾಂತಿ ಭಗತ್ ಸ್ಥಳೀಯ ಪತ್ರಿಕೆಗಳಲ್ಲಿ ವರದಿಗಾರನಾಗಿ, ಹುಬ್ಬಳ್ಳಿಯ ಉದಯವಾಣಿಯಲ್ಲಿ ಉಪ ಸಂಪಾದಕರಾಗಿ ಕಾರ್ಯ ನಿರ್ವಹಣೆ ಮಾಡಿದ್ದಾರೆ.
RELATED ARTICLES

LEAVE A REPLY

Please enter your comment!
Please enter your name here

Most Popular