ಖಾಸಗಿ ಶಾಲೆಗಳ ಶುಲ್ಕ ವರ್ಷದಿಂದ ವರ್ಷಕ್ಕೆ ಹೆಚ್ಚಾಗುತ್ತದೆ. ಶಾಲಾ ಶುಲ್ಕವನ್ನು ನೋಡಿ ಪೋಷಕರು ಬೆಚ್ಚಿ ಬೀಳುತ್ತಾರೆ. ಸರ್ಕಾರ ಖಾಸಗಿ ಶಾಲಾ ಶುಲ್ಕವನ್ನು ನಿಯಂತ್ರಿಸಬೇಕು ಎಂದು ಪದೇ ಪದೇ ಒತ್ತಾಯವನ್ನು ಮಾಡಲಾಗುತ್ತದೆ.
ಈಗ ರಾಜ್ಯ ಸರ್ಕಾರ ಖಾಸಗಿ ಶಾಲಾ ಶುಲ್ಕ ಏರಿಕೆಗೆ ನಿಯಂತ್ರಣ ಕ್ರಮವನ್ನು ಕಾನೂನಿನ ಮೂಲಕ ಜಾರಿಗೊಳಿಸಲಿದೆ. ಮಹತ್ವದ ಬೆಳವಣಿಗೆಯೊಂದರಲ್ಲಿ ಖಾಸಗಿ ಶಾಲೆಗಳು ವಿಧಿಸುವ ಶುಲ್ಕಗಳನ್ನು ನಿಯಂತ್ರಿಸುವ ಮಸೂದೆಗೆ ತಮಿಳುನಾಡು ಸರ್ಕಾರ ಅನುಮೋದನೆ ನೀಡಿದೆ.
ತಮಿಳುನಾಡು ಶಾಲೆಗಳು (ಶುಲ್ಕ ಸಂಗ್ರಹದ ನಿಯಂತ್ರಣ) ತಿದ್ದುಪಡಿ ಕಾಯ್ದೆ-2026 ಅನ್ನು ರಾಜ್ಯ ವಿಧಾನಸಭೆಯಲ್ಲಿ ಅಂಗೀಕರಿಸಲಾಗಿದೆ. ಈ ಹೊಸ ಕಾನೂನಿನಡಿಯಲ್ಲಿ ರಾಜ್ಯದಾದ್ಯಂತದ ಖಾಸಗಿ ಶಾಲೆಗಳಿಗೆ ಶುಲ್ಕ ರಚನೆಯನ್ನು ನಿರ್ಧರಿಸಲು 7 ಸದಸ್ಯರ ಸಮಿತಿಯನ್ನು ರಚಿಸಲಾಗುತ್ತದೆ.
ಸಮಿತಿಯ ನಿರ್ಧಾರಕ್ಕೆ ಎಲ್ಲಾ ಖಾಸಗಿ ಸಂಸ್ಥೆಗಳು ಬದ್ಧವಾಗಿರಬೇಕು ಒಮ್ಮೆ ಸಮಿತಿ ಒಪ್ಪಿಗೆ ನೀಡಿದ ಅನುಮೋದಿತ ಶುಲ್ಕವು 3 ಶೈಕ್ಷಣಿಕ ವರ್ಷಗಳವರೆಗೆ ಜಾರಿಯಲ್ಲಿರುತ್ತದೆ. ಸಮಿತಿಯ ಮುಖ್ಯಸ್ಥರಾಗಿ ಹೈಕೋರ್ಟ್ನ ನಿವೃತ್ತ ನ್ಯಾಯಾಧೀಶರು ಇರುತ್ತಾರೆ.
ಸಮಿತಿಯ ರಚನೆ: ಖಾಸಗಿ ಶಾಲಾ ಶುಲ್ಕ ನಿಯಂತ್ರಣ ಮಾಡಲು ಸರ್ಕಾರವೇ ಸಮಿತಿ ರಚನೆ ಮಾಡಲಿದೆ. ಸಮಿತಿಯಲ್ಲಿ ರಾಜ್ಯ ಪೋಷಕ-ಶಿಕ್ಷಕರ ಸಂಘವನ್ನು ಪ್ರತಿನಿಧಿಸುವ ಪೋಷಕರು, ಶಾಲಾ ಶಿಕ್ಷಣ ನಿರ್ದೇಶಕರು, ಖಾಸಗಿ ಮತ್ತು ಪ್ರಾಥಮಿಕ ಶಿಕ್ಷಣ ವಲಯಗಳ ಅಧಿಕಾರಿಗಳು, ಲೋಕೋಪಯೋಗಿ ಇಲಾಖೆಯ ಜಂಟಿ ಮುಖ್ಯ ಇಂಜಿನಿಯರ್ ಮತ್ತು ಶಾಲಾ ಶಿಕ್ಷಣ ಇಲಾಖೆಯ ಅಧಿಕಾರಿಗಳು ಇರುತ್ತಾರೆ.
ಶಾಲಾ ಶುಲ್ಕಗಳು ಸಮಂಜಸವಾಗಿರಬೇಕು, ಪಾರದರ್ಶಕ ಮತ್ತು ಶೋಷಣೆ ಮುಕ್ತವಾಗಿರುವುದನ್ನು ಖಚಿತಪಡಿಸಿಕೊಳ್ಳಲು, ಪೋಷಕರನ್ನು ಅನಿಯಂತ್ರಿತ ಶುಲ್ಕ ಹೆಚ್ಚಳದಿಂದ ರಕ್ಷಿಸಲು ಮತ್ತು ಶಿಕ್ಷಣದ ವೆಚ್ಚಕ್ಕೆ ಕಡಿವಾಣ ಹಾಕಲು ಈ ಕಾನೂನು ಜಾರಿಗೊಳಿಸಲಾಗುತ್ತದೆ.
ಶುಲ್ಕ ಮಿತಿಯ ಅನುಷ್ಠಾನದ ದಿನಾಂಕವನ್ನು ಶೀಘ್ರದಲ್ಲೇ ಘೋಷಿಸಲಾಗುವುದು ಎಂದು ಶ್ರುತಿ ಬನ್ಸಾಲ್ ಹೇಳಿದ್ದಾರೆ. ಜನವರಿ 24ರಂದು ಸರ್ಕಾರ ರಾಜ್ಯ ಶಿಕ್ಷಣ ನೀತಿಯನ್ನು ಅನಾವರಣಗೊಳಿಸಿದೆ, ಎನ್ಇಪಿಯನ್ನು ದ್ವಿಭಾಷಾ ವ್ಯವಸ್ಥೆಯೊಂದಿಗೆ ಎದುರಿಸುವಂತೆ ನೀತಿ ರೂಪಿಸಲಾಗಿದೆ.

