ಕರ್ನಾಟಕದ ಇತಿಹಾಸದಲ್ಲಿಯೇ ಮೊದಲ ಬಾರಿಗೆ ರಾಜ್ಯಪಾಲರು ಕೇವಲ 3 ಸಾಲಿನ ಭಾಷಣವನ್ನು ಓದಿ ವಿಧಾನಸಭೆಯಿಂದ ನಿರ್ಗಮಿಸಿದರು. ಕರ್ನಾಟಕ ವಿಧಾನಮಂಡಲದ ಜಂಟಿ ಅಧಿವೇಶನ ಆರಂಭವಾಗಿದ್ದು, ಮೊದಲ ದಿನವೇ ಭಾರೀ ಹೈಡ್ರಾಮಕ್ಕೆ ವಿಧಾನಸಭೆ ಸಾಕ್ಷಿಯಾಗಿದೆ.
ವಿಧಾನಮಂಡಲ ಜಂಟಿ ಅಧಿವೇಶನವನ್ನು ಉದ್ದೇಶಿಸಿ ತಾವು ಮಾಡಬೇಕಾದ ಭಾಷಣದ ಕೆಲವು ಅಂಶಗಳ ಬಗ್ಗೆ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ತಕರಾರು ತೆಗೆದಿದ್ದರು. ಆದ್ದರಿಂದ ಅವರು ಜಂಟಿ ಅಧಿವೇಶನಕ್ಕೆ ಆಗಮಿಸುವ ಕುರಿತು ಹಲವು ಅನುಮಾನವಿತ್ತು.
ಆದರೆ ಗುರುವಾರ ಸರಿಯಾದ ಸಮಯಕ್ಕೆ ರಾಜ್ಯಪಾಲರು ವಿಧಾನಸೌಧಕ್ಕೆ ಆಗಮಿಸಿದರು. ಮುಖ್ಯಮಂತ್ರಿ ಸಿದ್ದರಾಮಯ್ಯ, ವಿಧಾನ ಸಭೆ ಸ್ಪೀಕರ್ ಯು.ಟಿ.ಖಾದರ್, ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ರಾಜ್ಯಪಾಲರನ್ನು ಸ್ವಾಗತಿಸಿದರು.
ರಾಜ್ಯಪಾಲರು, ಮುಖ್ಯಮಂತ್ರಿಗಳು, ಸಚಿವರು ವಿಧಾನಸೌಧಕ್ಕೆ ತೆರಳಿದರು. ರಾಷ್ಟ್ರಗೀತೆ ನುಡಿಸಿದ ಬಳಿಕ ಕಲಾಪ ಆರಂಭವಾಯಿತು. ಆಗ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಭಾಷಣ ಆರಂಭಿಸಿದರು. ಅಧಿವೇಶನಕ್ಕೆ ಶುಭ ಹಾರೈಸುವ ಕೇವಲ ಮೂರು ಸಾಲಿನ ಭಾಷಣವನ್ನು ಓದಿ ತೆರಳಿದರು.
ಆಗ ಹಲವು ಕಾಂಗ್ರೆಸ್ ಸದಸ್ಯರು ಘೋಷಣೆಗಳನ್ನು ಕೂಗಿದರು. ರಾಜ್ಯಪಾಲರು ಪೂರ್ಣ ಭಾಷಣವನ್ನು ಓದಬೇಕು ಎಂದು ಪಟ್ಟು ಹಿಡಿದರು. ಆದರೆ ಸದಸ್ಯರು ರಾಜ್ಯಪಾಲರ ಸಮೀಪ ಬರದಂತೆ ಮಾರ್ಷಲ್‌ಗಳು ತಡೆದರು. ಅಂತಿಮವಾಗಿ ರಾಜ್ಯಪಾಲರು ಕಾರಿನಲ್ಲಿ ವಿಧಾನಸೌಧದಿಂದ ನಿರ್ಗಮಿಸಿದರು.
ಸರ್ಕಾರದ ಭಾಷಣ ಓದಲೇ ಇಲ್ಲ: ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಸರ್ಕಾರ ತಯಾರು ಮಾಡಿದ ಭಾಷಣ ಓದಲೇ ಇಲ್ಲ. ಅವರು ತಾವೇ ತಯಾರಿಸಿಕೊಂಡು ಬಂದ ಭಾಷಣ ಓದಿ ನಿರ್ಗಮಿಸಿದ್ದಾರೆ. “ಇದು ಸಂವಿಧಾನದ ಉಲ್ಲಂಘನೆಯಾಗಿದೆ” ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.
ರಾಜ್ಯಪಾಲರು ವಾಪಸ್ ಆದ ಬಳಿಕ ಮಾತನಾಡಿದ ಸಿದ್ದರಾಮಯ್ಯ, ‘ವರ್ಷದ ಮೊದಲ ಅಧಿವೇಶನಕ್ಕೆ ರಾಜ್ಯಪಾಲರನ್ನು ಆಹ್ವಾನಿಸಲಾಗಿತ್ತು. ಸಂಪ್ರದಾಯ ಮತ್ತು ಸಂವಿಧಾನದ ನಿಯಮದಂತೆ ರಾಜ್ಯಪಾಲರು ತಮ್ಮ ಭಾಷಣ ಓದುವಂತಿಲ್ಲ. ಸರ್ಕಾರ ತಯಾರಿಸಿಕೊಟ್ಟ ಭಾಷಣ ಓದಬೇಕು” ಎಂದು ಹೇಳಿದರು.
ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಬುಧವಾರ ಸಂಜೆ 5 ಗಂಟೆಗೆ ಜಂಟಿ ಅಧಿವೇಶನ ಉದ್ದೇಶಿಸಿ ಮಾತನಾಡುವುದಿಲ್ಲ ಎಂದು ಹೇಳಿದ್ದರು. ಬಳಿಕ ಸ್ಪೀಕರ್ ಯು.ಟಿ.ಖಾದರ್, ಸಭಾಪತಿ ಬಸವರಾಜ ಹೊರಟ್ಟಿ, ಕಾನೂನು ಸಚಿವ ಎಚ್.ಕೆ.ಪಾಟೀಲ್ ಲೋಕಭವನಕ್ಕೆ ತೆರಳಿ ರಾಜ್ಯಪಾಲರನ್ನು ಭೇಟಿ ಮಾಡಿದ್ದರು.
ಬಳಿಕ ರಾಜ್ಯಪಾಲರು ಜಂಟಿ ಅಧಿವೇಶನಕ್ಕೆ ಆಗಮಿಸಲು ಒಪ್ಪಿಗೆ ನೀಡಿದ್ದರು. ಆದರೆ ಸರ್ಕಾರ ತಯಾರು ಮಾಡಿದ ಭಾಷಣದ ಕೆಲವು ಅಂಶಗಳನ್ನು ಬದಲಾವಣೆ ಮಾಡಬೇಕು ಎಂದು ಸೂಚಿಸಿದ್ದರು. ಸರ್ಕಾರ ಇದಕ್ಕೆ ವಿರೋಧ ವ್ಯಕ್ತಪಡಿಸಿತ್ತು.
ಗುರುವಾರ ರಾಜ್ಯಪಾಲರು ಜಂಟಿ ಅಧಿವೇಶನಕ್ಕೆ ಆಗಮಿಸಿದರು. ಆದರೆ ಸರ್ಕಾರ ತಯಾರು ಮಾಡಿದ ಭಾಷಣವನ್ನು ಓದದೇ ನಿರ್ಗಮಿಸಿದ್ದಾರೆ. ಈ ಮೂಲಕ ಕರ್ನಾಟಕದ ಕಾಂಗ್ರೆಸ್ ಸರ್ಕಾರ ಮತ್ತು ಲೋಕಭವನದ ನಡುವೆ ಜಟಾಪಟಿ ಜೋರಾಗಿದೆ.
“ರಾಜ್ಯಪಾಲರು ಕೇಂದ್ರ ಸರ್ಕಾರದ ಕೈಗೊಂಬೆ. ಅವರು ಶಾಸನ ಸಭೆಗೆ ಅಪಮಾನ ಮಾಡಿದ್ದಾರೆ. ಈ ಕುರಿತು ನಾವು ಹೋರಾಟ ಮಾಡುತ್ತೇವೆ. ನಮ್ಮ ಪಕ್ಷ ಪ್ರತಿಭಟನೆ ಮಾಡಲಿದೆ” ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.
ರಾಜ್ಯದಲ್ಲಿ ಹೊಸ ಸರ್ಕಾರ ರಚನೆಯಾಗಿ ಮೊದಲ ಅಧಿವೇಶನ ನಡೆಯುವಾಗ ಮತ್ತು ಪ್ರತಿ ವರ್ಷದ ಮೊದಲ ಅಧಿವೇಶನ ನಡೆಯುವಾಗ ರಾಜ್ಯಪಾಲರು ಜಂಟಿ ಅಧಿವೇಶನ ಉದ್ದೇಶಿಸಿ ಮಾತನಾಡಬೇಕು.
ಈ ಭಾಷಣವನ್ನು ಸರ್ಕಾರ ತಯಾರು ಮಾಡಿರುತ್ತದೆ. ಸಚಿವ ಸಂಪುಟದ ಅನುಮೋದನೆ ಸಿಕ್ಕಿರುತ್ತದೆ. ಆದರೆ ಇಂದು ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಸರ್ಕಾರ ತಯಾರು ಮಾಡಿದ ಭಾಷಣವನ್ನು ಓದಿಲ್ಲ.

