ಹಾವೇರಿ : ರಾಜ್ಯದಲ್ಲಿ ಮಲ ಹೊರುವ ಪದ್ದತಿ ಇನ್ನೂ ಜೀವಂತವಾಗಿದ್ದು, ಕಾರ್ಮಿಕರಿಂದ ಶೌಚಾಲಯದ ಗುಂಡಿ ಸ್ವಚ್ಚ ಮಾಡಿಸುತ್ತಿದ್ದ ಘಟನೆ ಹಾವೇರಿಯಲ್ಲಿ ನಡೆದಿದೆ.
ಹೌದು, ಹಾವೇರಿ ಜಿಲ್ಲೆಯ ಕುಸನೂರು ಗ್ರಾಮದಲ್ಲಿ ಈ ಘಟನೆ ನಡೆದಿದೆ. ಕುಸನೂರು ಗ್ರಾಮದ ನಿವಾಸಿಗಳಾದ ಬಸವರಾಜ ಪೂಜಾರ ಮತ್ತು ಸುರೇಶ್ ಪೂಜಾರ ಎಂಬುವವರ ಮನೆಯಲ್ಲಿ ಈ ಘಟನೆ ನಡೆದಿದೆ. ಶೌಚ ಗೃಹದ ಗುಂಡಿ ತುಂಬಿದ್ದರಿಂದ ಮಾಲೀಕರು ಕಾರ್ಮಿಕರಿಂದ ಶೌಚಗುಂಡಿಯ ಮಲ ತೆರವು ಮಾಡಿಸಿದ್ದಾರೆ. ಶೌಚಾಲಯದ ಗುಂಡಿ ಕ್ಲೀನ್ ಮಾಡಲು ಈಗ ಯಂತ್ರಗಳನ್ನು ಬಳಕೆ ಮಾಡಲಾಗುತ್ತಿದೆ. ಆದರೆ ಇಲ್ಲಿ ಕಾರ್ಮಿಕರನ್ನೇ ಗುಂಡಿಗೆ ಇಳಿಸಿ ಕ್ಲೀನ್ ಮಾಡಿಸಲಾಗಿದೆ.
ಘಟನೆ ಬೆಳಕಿಗೆ ಬರುತ್ತಿದ್ದಂತೆ ಸ್ಥಳಕ್ಕೆ ದೌಡಾಯಿಸಿದ ತಹಶೀಲ್ದಾರ್ ಇಬ್ಬರು ಕಾರ್ಮಿರನ್ನು ವಶಕ್ಕೆ ಪಡೆದು ಆರೋಗ್ಯ ತಪಾಸಣೆ ನಡೆಸಿದ್ದಾರೆ. ಮಾಲೀಕರ ವಿರುದ್ಧ ಆಡೂರು ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಾಗಿದೆ. ಸ್ಥಳಕ್ಕೆ ತಾಲೂಕು ಅಧಿಕಾರಿಗಳು ಸಹ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಸಾತೇನಹಳ್ಳಿಯ ಇಬ್ಬರು ಕಾರ್ಮಿಕರಿಂದ ಸ್ವಚ್ಚತಾ ಕೆಲಸ ಮಾಡಿಸಿದ್ದಾರೆ.
ರಾಜ್ಯದಲ್ಲಿ ಮಲ ಹೊರುವ ಪದ್ದತಿ ಇನ್ನೂ ಜೀವಂತವಾಗಿರುವ ವಿಚಾರಕ್ಕೆ ಸಂಬಂಧಿಸಿದಂತೆ ಗ್ರಾಮದ ಜನ ಆಕ್ರೋಶ ಹೊರ ಹಾಕಿದ್ದು, ಮಾಲೀಕರ ವಿರುದ್ಧ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ.

