ವರ್ಷದ ಎಲ್ಲಾ ದಿನಗಳಲ್ಲೂ ಕೈಗೆಟಕುವ ದರದಲ್ಲಿ ಸಿಗುವ ಹಣ್ಣುಗಳೆಂದರೆ ಕೇವಲ ಬಾಳೆಹಣ್ಣು ಮಾತ್ರವಲ್ಲ, ಪೇರಲ ಹಣ್ಣು ಕೂಡ ಆ ಪಟ್ಟಿಯಲ್ಲಿದೆ. ಪೌಷ್ಟಿಕಾಂಶದ ವಿಷಯಕ್ಕೆ ಬಂದರೆ ಸೇಬಿನ ನಂತರ ವಿಶ್ವದ ಎರಡನೇ ಅತ್ಯಂತ ಶಕ್ತಿಶಾಲಿ ಹಣ್ಣು ಎಂದು ಪೇರಲವನ್ನು ಪರಿಗಣಿಸಲಾಗುತ್ತದೆ.ನೀವು ಪ್ರತಿದಿನ ಪೇರಲ ಹಣ್ಣನ್ನು ಸೇವಿಸಿದರೆ, ನಿಮ್ಮ ಆರೋಗ್ಯ ಉತ್ತಮವಾಗಿರುತ್ತದೆ ಮತ್ತು ಹಲವಾರು ರೋಗಗಳ ಅಪಾಯದಿಂದ ಮುಕ್ತರಾಗಬಹುದು. ಪೇರಲ ಹಣ್ಣಿನ ನಿಯಮಿತ ಸೇವನೆಯಿಂದ ಹಲವಾರು ಆರೋಗ್ಯಕರ ಲಾಭಗಳು ದೊರೆಯುತ್ತವೆ.
ವಿಶೇಷವಾಗಿ, ಅಪರೂಪಕ್ಕೆ ದೊರೆಯುವ ಪಿಂಕ್ ಅಥವಾ ಗುಲಾಬಿ ಬಣ್ಣದ ಪೇರಲ ಆರೋಗ್ಯದ ಪಾಲಿಗೆ ಸಂಜೀವಿನಿ ಎಂದರೆ ತಪ್ಪಾಗಲಾರದು. ಬಿಳಿ ಪೇರಲಕ್ಕಿಂತಲೂ ಹೆಚ್ಚಿನ ಪೋಷಕಾಂಶಗಳನ್ನು ಹೊಂದಿರುವ ಈ ಹಣ್ಣನ್ನು ಆರೋಗ್ಯ ತಜ್ಞರು ‘ಸೂಪರ್ ಫುಡ್’ ಎಂದು ಕರೆಯುತ್ತಾರೆ.
ಗುಲಾಬಿ ಪೇರಲವು ಬೀಟಾ-ಕ್ಯಾರೋಟಿನ್ ಮತ್ತು ಆಂಥೋಸಯಾನಿನ್‌ಗಳಲ್ಲಿ ಸಮೃದ್ಧವಾಗಿದೆ. 100 ಗ್ರಾಂ ಹಣ್ಣಿನಲ್ಲಿ ಸುಮಾರು ಶೇ. 20 ರಷ್ಟು ಫೈಬರ್ (ನಾರಿನಂಶ) ಲಭ್ಯವಿದ್ದು, ಜೀರ್ಣಕ್ರಿಯೆಗೆ ಇದು ರಾಮಬಾಣ.ಇದರಲ್ಲಿ ವಿಟಮಿನ್ ಎ, ಬಿ ಮತ್ತು ಇ ಹೇರಳವಾಗಿದ್ದು, ಕಣ್ಣು ಮತ್ತು ಚರ್ಮದ ಆರೋಗ್ಯವನ್ನು ಕಾಪಾಡುತ್ತದೆ
ಶುಗರ್ ಇರೋರಿಗೆ ವರದಾನ ಈ ಪೇರಲ
ಪೇರಲ ಹಣ್ಣಿನಲ್ಲಿ ನಾರಿನಂಶ (ಫೈಬರ್) ಅಧಿಕವಾಗಿದ್ದು, ಇದು ಕಡಿಮೆ ಗ್ಲೈಸೆಮಿಕ್ ಇಂಡೆಕ್ಸ್ (Low GI) ಹೊಂದಿದೆ. ಇದರಿಂದಾಗಿ ರಕ್ತದಲ್ಲಿ ಸಕ್ಕರೆಯ ಮಟ್ಟವು ದಿಢೀರನೆ ಏರಿಕೆಯಾಗದಂತೆ ತಡೆಯುತ್ತದೆ. ಅಲ್ಲದೆ, ಇದು ಕೆಟ್ಟ ಕೊಲೆಸ್ಟ್ರಾಲ್ ಅನ್ನು ಕಡಿಮೆ ಮಾಡಿ, ದೇಹಕ್ಕೆ ಬೇಕಾದ HDL (ಒಳ್ಳೆಯ ಕೊಲೆಸ್ಟ್ರಾಲ್) ಅನ್ನು ಸುಮಾರು ಶೇ. 8 ರಷ್ಟು ಹೆಚ್ಚಿಸಲು ಸಹಾಯ ಮಾಡುತ್ತದೆ ಎಂದು ಸಂಶೋಧನೆಗಳು ತಿಳಿಸಿವೆ.
ಪೇರಲ ಹಣ್ಣಿನಲ್ಲಿರುವ ಫೋಲಿಕ್ ಆಸಿಡ್ ಅಂಶವು ಸಂತಾನೋತ್ಪತ್ತಿ ಸಾಮರ್ಥ್ಯ ಅಥವಾ ಫಲವತ್ತತೆಯನ್ನು ಹೆಚ್ಚಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಗರ್ಭಿಣಿಯರು ಇದನ್ನು ಸೇವಿಸುವುದರಿಂದ ಗರ್ಭದಲ್ಲಿರುವ ಮಗುವಿನ ನರಮಂಡಲದ ಬೆಳವಣಿಗೆಗೆ ಮತ್ತು ಆರೋಗ್ಯಕ್ಕೆ ಬಹಳ ಒಳ್ಳೆಯದು ಎಂದು ತಜ್ಞರು ಶಿಫಾರಸು ಮಾಡುತ್ತಾರೆ.
ಹೊಳೆಯುವ ಚರ್ಮ ಮತ್ತು ಮೊಡವೆ ಮುಕ್ತಿ
ಪೇರಲ ಹಣ್ಣಿನಲ್ಲಿರುವ ಕ್ಯಾರೋಟಿನ್, ಲೈಕೋಪೀನ್, ವಿಟಮಿನ್ ಎ ಮತ್ತು ಸಿ ಚರ್ಮದ ಆರೋಗ್ಯಕ್ಕೆ ಪೂರಕವಾಗಿವೆ.ನಿಯಮಿತ ಸೇವನೆಯಿಂದ ಚರ್ಮದಲ್ಲಿ ನೈಸರ್ಗಿಕ ಹೊಳಪು ಮೂಡುತ್ತದೆ.ಚರ್ಮದ ಸೋಂಕಿನ ವಿರುದ್ಧ ಹೋರಾಡುವ ಇದು, ಮುಖದ ಮೇಲಿನ ಮೊಡವೆಗಳನ್ನು ಕಡಿಮೆ ಮಾಡಿ ಸೌಂದರ್ಯವನ್ನು ಹೆಚ್ಚಿಸುತ್ತದೆ.
ತೂಕ ಇಳಿಕೆಗೆ ಸುಲಭ ಹಾದಿ
ತೂಕ ಇಳಿಸಿಕೊಳ್ಳಲು ಜಿಮ್ ಅಥವಾ ಕಟ್ಟುನಿಟ್ಟಿನ ಡಯಟ್ ಮಾಡುವವರಿಗೆ ಪೇರಲ ಅತ್ಯುತ್ತಮ ಆಯ್ಕೆ.ಇದರಲ್ಲಿ ನಾರಿನಂಶ (ಫೈಬರ್) ಹೆಚ್ಚಿರುವುದರಿಂದ, ಸ್ವಲ್ಪ ತಿಂದರೂ ಹೊಟ್ಟೆ ತುಂಬಿದಂತಾಗುತ್ತದೆ. ಇದು ಅತಿಯಾಗಿ ತಿನ್ನುವುದನ್ನು ತಡೆಯುತ್ತದೆ.ಫೈಬರ್ ಮತ್ತು ಪ್ರೋಟೀನ್ ಸಮೃದ್ಧವಾಗಿದ್ದರೂ, ಕ್ಯಾಲೋರಿ ಪ್ರಮಾಣ ಕಡಿಮೆ ಇರುವುದರಿಂದ ತೂಕ ಇಳಿಕೆಗೆ ಇದು ಪೌಷ್ಟಿಕ ಆಹಾರವಾಗಿದೆ.
ಹೃದಯಕ್ಕೆ ಹಿತಕಾರಿ
ಹೃದಯದ ಆರೋಗ್ಯವನ್ನು ಕಾಪಾಡಿಕೊಳ್ಳಲು ಪೇರಲ (ವಿಶೇಷವಾಗಿ ಗುಲಾಬಿ ಪೇರಲ) ರಾಮಬಾಣ.ಇದರಲ್ಲಿರುವ ಪೊಟ್ಯಾಸಿಯಮ್ ರಕ್ತದೊತ್ತಡವನ್ನು ಸಮತೋಲನದಲ್ಲಿಡುತ್ತದೆ.ವಿಟಮಿನ್ ಸಿ ಮತ್ತು ಆ್ಯಂಟಿಆಕ್ಸಿಡೆಂಟ್‌ಗಳು ದೇಹವನ್ನು ಸೋಂಕುಗಳಿಂದ ರಕ್ಷಿಸಿ, ಜೀವಕೋಶಗಳನ್ನು ಸುರಕ್ಷಿತವಾಗಿಡುತ್ತವೆ.
ಜೀರ್ಣಕ್ರಿಯೆ ಮತ್ತು ಮಲಬದ್ಧತೆ ನಿವಾರಣೆ
ಜೀರ್ಣಾಂಗ ವ್ಯವಸ್ಥೆಯು ಸುಗಮವಾಗಿ ಕೆಲಸ ಮಾಡಲು ಪೇರಲ ಹಣ್ಣು ಸಹಕಾರಿ.ನಾರಿನಂಶ ಹೆಚ್ಚಿರುವುದರಿಂದ ಕರುಳಿನ ಚಲನೆ ಸರಾಗವಾಗುತ್ತದೆ.ಮಲಬದ್ಧತೆ ಸಮಸ್ಯೆಯಿಂದ ಬಳಲುವವರು ದೈನಂದಿನ ಆಹಾರದಲ್ಲಿ ಪೇರಲ ಸೇರಿಸುವುದರಿಂದ ಉತ್ತಮ ಫಲಿತಾಂಶ ಪಡೆಯಬಹುದು.
ಪೇರಲ ಹಣ್ಣು ಕೇವಲ ಹಣ್ಣಲ್ಲ, ಅದು ನಿಮ್ಮ ಸೌಂದರ್ಯ ಮತ್ತು ಆರೋಗ್ಯದ ರಕ್ಷಾ ಕವಚ. ಹಾಗಾಗಿ, ದಿನಕ್ಕೊಂದು ಪೇರಲ ತಿನ್ನುವ ಅಭ್ಯಾಸ ಮಾಡಿಕೊಳ್ಳುವುದು ಇಂದಿನ ಒತ್ತಡದ ಜೀವನಕ್ಕೆ ಅತ್ಯಗತ್ಯ.

