ಬೆಂಗಳೂರು: ರಾಸಲೀಲೆ ಪ್ರಕರಣದಲ್ಲಿ ಡಿಜಿಪಿ ರಾಮಚಂದ್ರ ರಾವ್ ಅವರನ್ನು ಸೇವೆಯಿಂದ ಅಮಾನತು ಮಾಡಿ ಆದೇಶ ಹೊರಡಿಸಲಾಗಿದೆ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ ಸ್ಪಷ್ಟಪಡಿಸಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಗೃಹ ಸಚಿವ ಪರಮೇಶ್ವರ್, ಇಂತಹ ಘಟನೆ ಯಾರಿಗೂ ಗೌರವ ತರಲ್ಲ. ಅವರು ಎಷ್ಟೇ ದೊಡ್ಡವರಾಗಿದ್ದರೂ ಅವರ ವಿರುದ್ಧ ಮುಲಾಜಿಲ್ಲದೇ ಕ್ರಮ ಕೈಗೊಳ್ಳಲಾಗುತ್ತದೆ. ಈ ನಿಟ್ಟಿನಲ್ಲಿ ರಾಮಚಂದ್ರ ರಾವ್ ಆವರನ್ನು ಸಸ್ಪೆಂಡ್ ಮಾಡಲಾಗಿದೆ ಎಂದರು.
ಆರೋಗ್ಯ ಸರಿಯಿಲ್ಲದ ಕಾರಣ ನಿನ್ನೆ ವಿಶ್ರಾಂತಿಯಲ್ಲಿದ್ದೆ. ಮಧ್ಯಾಹ್ನ ಊಟಕ್ಕೆ ಎದ್ದಾಗ ವಿಷಯ ತಿಳಿಯಿತು. ಬಳಿಕ ಅಧಿಕಾರಿಗಳಿಂದ ಮಾಹಿತಿ ಪಡೆದು ಮುಖ್ಯಮಂತ್ರಿಗಳ ಜೊತೆ ಮಾತನಾಡಿದೆ. ಇದು ಪೊಲೀಸ್ ಇಲಾಖೆಗೆ ಮಾತ್ರವಲ್ಲ ಯಾವುದೇ ಇಲಾಖೆ ಕೂಡ ಇಂತಹ ಘಟನೆಯನ್ನು ಸಹಿಸುವುದಿಲ್ಲ. ಒಪ್ಪುವುದೂ ಇಲ್ಲ. ಮುಖ್ಯಮಂತ್ರಿಗಳೂ ಕೂಡ ಅಪ್ಸೆಟ್ ಆಗಿದ್ದಾರೆ. ಹಾಗಾಗಿ ಪ್ರಕರಣದಲ್ಲಿ ಅವರನ್ನು ಅಮಾನತುಗೊಳಿಸಲಾಗಿದೆ. ಅವರು ಎಷ್ಟೇ ದೊಡ್ಡ ವ್ಯಕ್ತಿ, ಅಧಿಕಾರಿಯಾದರೂ ಕ್ರಮ ಕೈಗೊಳ್ಳಲು ಆದೇಶ ನೀಡಿದ್ದೇನೆ ಎಂದರು. ಇಂತಹ ಕಠಿಣ ಸನ್ನಿವೇಶದಲ್ಲಿ ನಾವು ಕೂಡ ಕಠಿಣವಾಗಿರಬೇಕು. ಹಾಗಾಗಿ ಅವರನ್ನು ಭೇಟಿ ಮಾಡಿಲ್ಲ ಎಂದರು.
ಇನ್ನು ರಾಮಚಂದ್ರ ರಾವ್ ಅವರನ್ನು ಬಂಧಿಸಬೇಕು ಎಂಬ ವಿಪಕ್ಷ ಬಿಜೆಪಿ ನಾಯಕರ ಆಗ್ರಹ ವಿಚಾರವಾಗಿ ಪ್ರತಿಕ್ರಿಯಿಸಿದ ಗೃಹ ಸಚಿವರು, ತಕ್ಷಣಕ್ಕೆ ಅವರನ್ನು ಅಮಾನತುಗೊಳಿಸಿದ್ದೇವೆ. ತನಿಖೆಗೆ ಆದೇಶಿಸಲಾಗಿದೆ. ತನಿಖೆ ಬಳಿಕ ಏನು ಬೇಕಾದರೂ ಆಗಬಹುದು. ಅವರು ಡಿಸ್ ಮಿಸ್ ಕೂಡ ಆಗಬಹುದು. ಯಾವ ಮುಲಾಜಿಲ್ಲದೇ ಕ್ರಮ ಕೈಗೊಳ್ಳಲಾಗುತ್ತದೆ. ಅವರು ಸೀನಿಯರ್ ಆಫೀಸರ್ ಎಂಬುದನ್ನೂ ನೋಡದೇ ಕ್ರಮ ಕೈಗೊಳ್ಳುತ್ತೇವೆ. ತನಿಖೆಯ ವರದಿ ಏನು ಎಂಬುದು ನೋಡಿಕೊಂಡು ಮುಂದಿನ ಕಾನೂನು ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು.

