ಕರ್ನಾಟಕದ ಮುಖ್ಯಮಂತ್ರಿ ಸಿದ್ದರಾಮಯ್ಯ ತುಮಕೂರಿಗೆ ಭೇಟಿ ನೀಡಿದರು. ಈ ಸಂದರ್ಭದಲ್ಲಿ ಆಪ್ತರಾದ ಮಾಜಿ ಸಚಿವ ಕೆ.ಎನ್.ರಾಜಣ್ಣ ಮನೆಗೆ ಭೇಟಿ ನೀಡಿ ಭೋಜನ ಸವಿದರು.
ಈ ಕುರಿತು ಕೆ.ಎನ್.ರಾಜಣ್ಣ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಾಕಿದ್ದಾರೆ. ಕಾರ್ಯ ನಿಮಿತ್ತ ತುಮಕೂರಿಗೆ ಆಗಮಿಸಿದ ಜನಪ್ರಿಯ ಮುಖ್ಯಮಂತ್ರಿಗಳಾದ ಸನ್ಮಾನ್ಯ ಶ್ರೀ ಸಿದ್ದರಾಮಯ್ಯನವರು ಇಂದು ನಮ್ಮ ಮನೆಗೆ ಸೌಹಾರ್ದಯುತ ಭೇಟಿಯಾದ ಸಂದರ್ಭದಲ್ಲಿ ಗೌರವಪೂರ್ವಕವಾಗಿ ಸ್ವಾಗತದೊಂದಿಗೆ ಅಭಿನಂದಿಸಿ ಉಭಯ ಕುಶಲೋಪರಿ ವಿಚಾರಿಸಲಾಯಿತು.
ಈ ಸಂದರ್ಭದಲ್ಲಿ ತುಮಕೂರು ಉಸ್ತುವಾರಿ ಹಾಗೂ ಗೃಹ ಸಚಿವರಾದ ಡಾ.ಜಿ.ಪರಮೇಶ್ವರ್ ಅವರು, ಶಾಸಕರುಗಳಾದ ಅಶೋಕ್ ಪಟ್ಟಣ್, ಷಡಕ್ಷರಿ, ಗೋವಿಂದರಾಜು, ವೆಂಕಟೇಶ್, ರಾಜೇಂದ್ರ ರಾಜಣ್ಣ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾದ ಚಂದ್ರಶೇಖರ್ ಗೌಡ, ನಿಖಿತ್ ರಾಜ್ ಮೌರ್ಯ ಸೇರಿದಂತೆ ಹಲವು ಮುಖಂಡರು ಉಪಸ್ಥಿತರಿದ್ದರು ಎಂದು ರಾಜಣ್ಣ ತಿಳಿಸಿದ್ದಾರೆ.
ಸಿದ್ದರಾಮಯ್ಯ ಹೇಳಿದ್ದೇನು?: ಕೆ.ಎನ್.ರಾಜಣ್ಣ ನಿವಾಸದಲ್ಲಿ ಸಿದ್ದರಾಮಯ್ಯ, ಇತರ ಸಚಿವರು, ಶಾಸಕರು ಭರ್ಜರಿ ಊಟ ಸವಿದರು. ನಾಟಿ ಕೋಳಿ ಬಾಡೂಟ ತಯಾರಿಸಲಾಗಿತ್ತು. ರಾಗಿ ಮುದ್ದೆ, ನಾಟಿಕೋಳಿ ಸಾರು, ಕಾಲ್ ಸೂಪ್ ಸೇರಿದಂತೆ ವಿವಿಧ ಖಾದ್ಯ ಸಿದ್ಧಪಡಿಸಲಾಗಿತ್ತು.
ಊಟದ ಬಳಿಕ ಮಾಧ್ಯಗಳ ಜೊತೆ ಮಾತನಾಡಿದ ಸಿದ್ದರಾಮಯ್ಯ, “ರಾಜಣ್ಣ ನಿವಾಸದಲ್ಲಿ ಸಿದ್ಧಪಡಿಸಿದ್ದ ಊಟ ಚೆನ್ನಾಗಿತ್ತು. ಕಾಲ್ ಸೂಪ್, ನಾಟಿ ಕೋಳಿ ತಂದು ಅಡುಗೆ ಮಾಡಿಸಿದ್ದರು. ನನಗೆ ಹುಷಾರಿರಲಿಲ್ಲ. ಜ್ವರ ಇದ್ದುದರಿಂದ ಬಾಯಿ ಕೆಟ್ಟೋಗಿತ್ತು. ನಾನ್ ವೆಜ್ ಇತ್ತಲ್ಲ ಚೆನ್ನಾಗಿತ್ತು ಊಟ ಮಾಡಿದ್ದೇನೆ” ಎಂದರು.
ಮಧುಗಿರಿ ಕ್ಷೇತ್ರದ ಶಾಸಕ, ಕಾಂಗ್ರೆಸ್ನ ಹಿರಿಯ ನಾಯಕ ಕೆ.ಎನ್.ರಾಜಣ್ಣ ಸಿದ್ದರಾಮಯ್ಯ ಆಪ್ತ ನಾಯಕರಲ್ಲಿ ಒಬ್ಬರು. ಮುಖ್ಯಮಂತ್ರಿಯಾದ ಸಿದ್ದರಾಮಯ್ಯ ರಾಜಣ್ಣ ಅವರಿಗೆ ಸಹಕಾರಿ ಖಾತೆ ಮತ್ತು ಹಾಸನ ಜಿಲ್ಲಾ ಉಸ್ತುವಾರಿಯನ್ನು ನೀಡಿದ್ದರು.
ಹೈಕಮಾಂಡ್ ನಾಯಕರ ವಿರುದ್ಧ ಪದೇ ಪದೇ ಬಹಿರಂಗ ಹೇಳಿಕೆಗಳನ್ನು ನೀಡುತ್ತಿದ್ದ ಕೆ.ಎನ್.ರಾಜಣ್ಣ ಅವರನ್ನು ಸಚಿವ ಸ್ಥಾನದಿಂದ ಕೈ ಬಿಡುವಂತೆ ಹೈಕಮಾಂಡ್ ಸೂಚನೆ ನೀಡಿತ್ತು. ಆದ್ದರಿಂದ ಅವರು ಸಚಿವ ಸ್ಥಾನ ಕಳೆದುಕೊಂಡಿದ್ದಾರೆ.
ಈ ಹಿಂದೆ ಒಮ್ಮೆ ಸಿದ್ದರಾಮಯ್ಯ ರಾಜಣ್ಣ ನಿವಾಸಕ್ಕೆ ಭೋಜನಕ್ಕೆ ಹೋಗಲು ಸಕಲ ತಯಾರಿ ನಡೆದಿತ್ತು. ಅಡುಗೆಯೂ ಸಿದ್ಧವಾಗಿತ್ತು. ಆದರೆ ಆಗ ಬೆಳಗಾವಿ ರೈತ ಹೋರಾಟದ ಕುರಿತು ಸರಣಿ ಸಭೆಯಲ್ಲಿ ಪಾಲ್ಗೊಂಡ ಸಿದ್ದರಾಮಯ್ಯ ತುಮಕೂರು ಪ್ರವಾಸ ರದ್ದುಗೊಂಡಿತ್ತು.
ಅಂದಹಾಗೆ ಇಂದು ಸಿದ್ದರಾಮಯ್ಯ ತುಮಕೂರು ನಗರದ ಮಹಾತ್ಮ ಗಾಂಧಿ ಕ್ರೀಡಾಂಗಣದಲ್ಲಿ ‘ಕರ್ನಾಟಕ ಕ್ರೀಡಾಕೂಟ 2025-26’ ಕಾರ್ಯಕ್ರಮದ ಉದ್ಘಾಟನೆಗೆ ಆಗಮಿಸಿದ್ದರು. ಈ ಸಂದರ್ಭದಲ್ಲಿ ಅವರು ಮಾಜಿ ಸಚಿವ ಕೆ.ಎನ್.ರಾಜಣ್ಣ ನಿವಾಸಕ್ಕೆ ಭೇಟಿ ನೀಡಿದರು.

