ಸಂಕ್ರಾಂತಿ ಹಬ್ಬದ ಸಂಭ್ರಮ ದೇಶದಲ್ಲಿ ಜೋರಾಗಿದೆ. ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ವಿವಿಧ ರಾಜಕೀಯ ನಾಯಕರು ಜನರಿಗೆ ಈ ವರ್ಷದ ಮೊದಲ ಹಬ್ಬದ ಶುಭಾಶಯಗಳನ್ನು ಕೋರಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಸಾಮಾಜಿಕ ಜಾಲತಾಣದ ಪೋಸ್ಟ್ ಮೂಲಕ ಕನ್ನಡದಲ್ಲಿಯೇ ಹಬ್ಬದ ಶುಭಾಶಯಗಳನ್ನು ಸಲ್ಲಿಸಿದ್ದಾರೆ. ‘ಸಂಕ್ರಾಂತಿ ಹಬ್ಬದ ಈ ಸಂದರ್ಭದಲ್ಲಿ ಎಲ್ಲರಿಗೂ ಹಾರ್ದಿಕ ಶುಭಾಶಯಗಳು’ ಎಂದು ಹೇಳಿದ್ದಾರೆ.
ಮೋದಿ ತಮ್ಮ ಪೋಸ್ಟ್ನಲ್ಲಿ, ‘ಈ ಹಬ್ಬವನ್ನು ಭಾರತದಾದ್ಯಂತ ಅತ್ಯಂತ ಸಡಗರ ಸಂಭ್ರಮದಿಂದ ಆಚರಿಸಲಾಗುತ್ತದೆ. ಇದು ತನ್ನೊಂದಿಗೆ ಸಂತೋಷ ಮತ್ತು ಕೃತಜ್ಞತೆಯ ಭಾವವನ್ನು ಹೊತ್ತು ತರುತ್ತದೆ. ಪ್ರಕೃತಿಯೊಂದಿಗೆ ಈ ಹಬ್ಬಕ್ಕಿರುವ ಸಂಬಂಧವೂ ಎಲ್ಲರಿಗೂ ತಿಳಿದಿರುವ ಸಂಗತಿ’ ಎಂದು ಬಣ್ಣಿಸಿದ್ದಾರೆ.
‘ಸಂಕ್ರಾಂತಿಯು ಎಲ್ಲರ ಜೀವನದಲ್ಲಿ ಶಾಂತಿ ಮತ್ತು ಉತ್ತಮ ಆರೋಗ್ಯವನ್ನು ತರಲಿ. ನಿಮ್ಮೆಲ್ಲಾ ಕನಸುಗಳು ನನಸಾಗಲಿ’ ಎಂದು ಶುಭ ಹಾರೈಸಿದ್ದಾರೆ.
ನರೇಂದ್ರ ಮೋದಿ ಪತ್ರ: ಜನವರಿ 14ರಂದು ಸಹ ಪ್ರಧಾನಿ ನರೇಂದ್ರ ಮೋದಿ ಪತ್ರದ ಮೂಲಕ ಸಂಕ್ರಾಂತಿ ಶುಭಾಶಯಗಳನ್ನು ಕೋರಿದ್ದರು. ಈ ಪತ್ರ ಪ್ರಧಾನಮಂತ್ರಿಯವರಿಂದ ಸಂಕ್ರಾಂತಿ ಶುಭಾಶಯಗಳು ಎಂಬ ವಿಷಯ ಒಳಗೊಂಡಿತ್ತು.
ಆತ್ಮೀಯ ಸಹ ನಾಗರಿಕರೇ, ಸಂಕ್ರಾಂತಿಯ ಈ ಶುಭ ಸಂದರ್ಭದಲ್ಲಿ, ನಿಮಗೆ ಮತ್ತು ನಿಮ್ಮ ಕುಟುಂಬಕ್ಕೆ ನನ್ನ ಹೃತ್ತೂರ್ವಕ ಶುಭಾಶಯಗಳನ್ನು ಕೋರುತ್ತೇನೆ.
ಸೂರ್ಯನ ಪಥ ಬದಲಾವಣೆಯ ಹೊಸ ಆರಂಭವನ್ನು ಸೂಚಿಸುವ ಸಂಕ್ರಾಂತಿಯು ಭರವಸೆ ಮತ್ತು ಸಕಾರಾತ್ಮಕತೆಯ ಸಂಕೇತವಾಗಿದೆ. ದೇಶಾದ್ಯಂತ ವಿವಿಧ ರೂಪಗಳಲ್ಲಿ, ಆದರೆ ಅಷ್ಟೇ ಉತ್ಸಾಹದಿಂದ ಆಚರಿಸಲಾಗುವ ಈ ಹಬ್ಬವು ನಮ್ಮ ಸಾಂಸ್ಕೃತಿಕ ಶ್ರೀಮಂತಿಕೆಯನ್ನು ಪ್ರತಿಬಿಂಬಿಸುತ್ತದೆ ಮತ್ತು ನಮ್ಮನ್ನೆಲ್ಲ ಒಟ್ಟಾಗಿ ಬೆಸೆಯುವ ಒಗ್ಗಟ್ಟಿನ ಭಾವನೆಯನ್ನು ನೆನಪಿಸುತ್ತದೆ.
ಈ ಹಬ್ಬವು ನಮ್ಮರೈತರು ಮತ್ತು ಅವರ ಕುಟುಂಬಗಳ ಜೀವನದಲ್ಲಿ ವಿಶೇಷ ಸ್ಥಾನವನ್ನು ಹೊಂದಿದೆ. ಇದು ನಮ್ಮ ಅನ್ನದಾತರಿಗೆ ಕೃತಜ್ಞತೆಯನ್ನು ಸಲ್ಲಿಸುವ ಮತ್ತು ಆ ಮೂಲಕ ನಮ್ಮ ಸಮಾಜವನ್ನು ಬಲಪಡಿಸುವ ಸಂದರ್ಭವಾಗಿದೆ.
ಸಂಕ್ರಾಂತಿಯು ನಮ್ಮನ್ನು ಆತ್ಮವಿಶ್ವಾಸ ಮತ್ತು ಅಶಾವಾದದೊಂದಿಗೆ ಮುನ್ನಡೆಯಲು ಪ್ರೋತ್ಸಾಹಿಸುತ್ತದೆ. ನಿಮ್ಮ ಮುಂದಿನ ದಿನಗಳು ಯಾವಾಗಲೂ ಸಮೃದ್ಧಿ, ಸಕಾರಾತ್ಮಕತೆ ಮತ್ತು ಉತ್ತಮ ಆರೋಗ್ಯದಿಂದ ಕೂಡಿರಲಿ. ನಿಮ್ಮ ಮನೆಯಲ್ಲಿ ಸಂತೋಷ ನೆಲೆಸಲಿ, ನಿಮ್ಮೆಲ್ಲಾ ಪ್ರಯತ್ನಗಳಲ್ಲಿ ಯಶಸ್ಸು ಸಿಗಲಿ ಮತ್ತು ಸಮಾಜದಲ್ಲಿ ಸಾಮರಸ್ಯ ಮೂಡಲಿ.
ಇಂತಿ ನಿಮ್ಮ
ನರೇಂದ್ರ ಮೋದಿ
ಸಿದ್ದರಾಮಯ್ಯ ಶುಭಾಶಯ: ಕರ್ನಾಟಕದ ಮುಖ್ಯಮಂತ್ರಿ ಸಿದ್ದರಾಮಯ್ಯ ಸಹ ರಾಜ್ಯದ ಜನರಿಗೆ ಸಂಕ್ರಾಂತಿ ಹಬ್ಬದ ಶುಭಾಶಯ ತಿಳಿಸಿದ್ದಾರೆ.
ಸಾಮಾಜಿಕ ಜಾಲತಾಣದ ಪೋಸ್ಟ್ನಲ್ಲಿ ಅವರು, ‘ಋತು ಮನ್ವಂತರದ ಹಬ್ಬವಾದ ಮಕರ ಸಂಕ್ರಾಂತಿಯು ಸಮಾಜದ ದ್ವೇಷ – ಅಸೂಯೆ – ಅಪನಂಬಿಕೆಗಳನ್ನು ಕಳೆದು ಶಾಂತಿ, ಸೌಹಾರ್ದತೆ, ಪ್ರೀತಿಯ ಹೊಸ ಹಾದಿಯಲ್ಲಿ ಮುನ್ನಡೆಸಲಿ. ಅನ್ನದಾತನ ವರ್ಷದ ಶ್ರಮವೆಲ್ಲ ಬೆಳೆಯ ರೂಪದಲ್ಲಿ ಕೈಸೇರುವ ಕಾಲವಿದು. ಈ ಸಂಭ್ರಮದ ಹಬ್ಬವು ರೈತಾಪಿ ಜನರ ಬಾಳಲ್ಲಿ ಸಮೃದ್ಧಿಯನ್ನು ತರಲಿ ಎಂದು ಹಾರೈಸುತ್ತೇನೆ. ಎಳ್ಳು – ಬೆಲ್ಲದ ಜೊತೆಗೆ ಪ್ರೀತಿ, ವಿಶ್ವಾಸ ಮಿಳಿತಗೊಳ್ಳಲಿ, ನಾಡು ಸರ್ವಜನಾಂಗದ ಶಾಂತಿಯ ಬೀಡಾಗಲಿ. ನಾಡಬಂಧುಗಳಿಗೆ ಮಕರ ಸಂಕ್ರಾಂತಿಯ ಶುಭಾಶಯಗಳು’ ಎಂದು ಹೇಳಿದ್ದಾರೆ.

