ಕೋಲಾರ : ಪಾಗಲ್ ಪ್ರೇಮಿಯೋರ್ವ ಮಹಿಳೆಯನ್ನು ಚಾಕು ಇರಿದು ಬರ್ಬರವಾಗಿ ಕೊಲೆಗೈದ ಘಟನೆ ಕೋಲಾರದ ಬಂಗಾರಪೇಟೆ ರಸ್ತೆಯಲ್ಲಿ ನಡೆದಿದೆ.
ಚಾಕು ಇರಿದು ಸುಜಾತಾ (27) ಎಂಬ ಮಹಿಳೆಯನ್ನು ಪ್ರಿಯತಮ ಚಿರಂಜೀವಿ ಕೊಲೆ ಮಾಡಿದ್ದಾನೆ.ಕೊಲೆಯಾದ ಮಹಿಳೆ ಸುಜಾತಾ ಬಂಗಾರಪೇಟೆ ತಾಲೂಕಿನ ದಾಸರ ಹೊಸಹಳ್ಳಿ ಗ್ರಾಮದ ನಿವಾಸಿ ಎಂದು ತಿಳಿದು ಬಂದಿದೆ. ಯುವತಿ ನರಸಾಪುರ ಕೈಗಾರಿಕಾ ಪ್ರದೇಶದಲ್ಲಿ ಕೆಲಸ ಮಾಡುತ್ತಿದ್ದಳು. ರಸ್ತೆಯಲ್ಲಿ ಹೋಗುವಾಗ ಸುಜಾತಾಳನ್ನು ಮಾತನಾಡಿಸಲು ಚಿರಂಜೀವಿ ಮುಂದಾಗುತ್ತಾನೆ. ಸಿಟ್ಟಾದ ಸುಜಾತಾ ಆತನಿಗೆ ಬೈಯುತ್ತಾಳೆ. ಇದರಿಂದ ರೊಚ್ಚಿಗೆದ್ದ ಚಿರಂಜೀವಿ ಕೀ ಬಂಚ್ ನಲ್ಲಿದ್ದ ಚಾಕು ತೆಗೆದು ಆಕೆಯ ಹೊಟ್ಟೆಗೆ ಇರಿಯುತ್ತಾನೆ. ಪರಿಣಾಮ ಸ್ಥಳದಲ್ಲೇ ಯುವತಿ ಮೃತಪಡುತ್ತಾಳೆ.
ಕೂಡಲೇ ಸ್ಥಳೀಯರು ಸ್ಥಳಕ್ಕೆ ಧಾವಿಸಿ ಆರೋಪಿಯನ್ನು ಹಿಡಿದು ಥಳಿಸಿ ಪೊಲೀಸರಿಗೆ ಒಪ್ಪಿಸಿದ್ದಾರೆ.ಸುಜಾತಾಗೆ ಈಗಾಗಲೇ ಮದುವೆ ಆಗಿ ಮಕ್ಕಳಿರುತ್ತಾರೆ. ಆದರೆ ಯುವಕ ಚಿರಂಜೀವಿ ಸುಜಾತಾಳ ಹಿಂದೆ ಬಿದ್ದಿರುತ್ತಾನೆ. ಪ್ರೀತಿಸುವಂತೆ ಕಿರುಕುಳ ನೀಡುತ್ತಿರುತ್ತಾನೆ ಎನ್ನಲಾಗಿದೆ. ಈ ಸಂಬಂಧ ಕೋಲಾರ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಯನ್ನು ವಶಕ್ಕೆ ಪಡೆದ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

