ಬೆಂಗಳೂರು: ಮಕರ ಸಂಕ್ರಾಂತಿ ಬಂತೆಂದರೆ ಸಾಕು, ನಾಡಿನಾದ್ಯಂತ ಸಂಭ್ರಮದ ಅಲೆ. ಸೂರ್ಯನು ಮಕರ ರಾಶಿಗೆ ಪ್ರವೇಶಿಸಿ, ಉತ್ತರಾಯಣದ ಶುಭಕಾಲ ಆರಂಭವಾಗುವ ಈ ಸುದಿನವು ಕೃಷಿಕರಿಗೆ ಸುಗ್ಗಿಯ ಹಬ್ಬ. ಪ್ರಕೃತಿ ಮತ್ತು ದನಕರುಗಳಿಗೆ ಕೃತಜ್ಞತೆ ಸಲ್ಲಿಸುವ ಈ ದಿನದಂದು, ಮನೆಯಲ್ಲಿ ಬಗೆಬಗೆಯ ಸಿಹಿ ಅಡುಗೆಗಳ ಘಮ ಇರಲೇಬೇಕು. ಈ ಸಂಕ್ರಾಂತಿಗೆ ನಿಮ್ಮ ಅಡುಗೆಮನೆಯಲ್ಲಿ ತಯಾರಿಸಬಹುದಾದ ಸ್ವಾದಿಷ್ಟ ತಿನಿಸುಗಳ ವಿವರ ಇಲ್ಲಿದೆ:
1.ಮುತ್ತಿನಂತಹ ‘ಎಳ್ಳು-ಬೆಲ್ಲ
ಸಂಕ್ರಾಂತಿಯ ಅಸಲಿ ರುಚಿಯೇ ಎಳ್ಳು-ಬೆಲ್ಲದಲ್ಲಿ. ಇದನ್ನು ತಯಾರಿಸುವುದು ಒಂದು ಕಲೆ:
ವಿಧಾನ: ಮೊದಲು ಕಡಲೆಕಾಯಿಯನ್ನು ಹುರಿದು, ಸಿಪ್ಪೆ ತೆಗೆದು ಎರಡು ಭಾಗ ಮಾಡಿ. ಕೊಬ್ಬರಿಯ ಮೇಲಿನ ಕಂದು ಪದರ ತೆಗೆದು ಸಣ್ಣ ಚೂರುಗಳಾಗಿ ಕತ್ತರಿಸಿ ಹುರಿಯಿರಿ. ಬೆಲ್ಲವನ್ನೂ ಸಣ್ಣ ಚೂರುಗಳನ್ನಾಗಿ ಮಾಡಿ. ಈಗ ಎಲ್ಲವನ್ನೂ ಹುರಿದ ಬಿಳಿ ಎಳ್ಳಿನೊಂದಿಗೆ ಬೆರೆಸಿದರೆ, ಸಂಪ್ರದಾಯದ ಎಳ್ಳು-ಬೆಲ್ಲ ಸಿದ್ಧ
2.ನಾಲಿಗೆಯಲ್ಲಿ ಕರಗುವ ‘ಅಕ್ಕಿ ಪಾಯಸ’
ವಿಧಾನ: ಅಕ್ಕಿಯನ್ನು ತೆಂಗಿನ ಹಾಲಿನಲ್ಲಿ ಮೆತ್ತಗೆ ಬೇಯಿಸಿಕೊಳ್ಳಿ. ನಂತರ ಗಟ್ಟಿಯಾದ ತೆಂಗಿನ ಹಾಲು ಮತ್ತು ಬೆಲ್ಲ ಸೇರಿಸಿ 5 ನಿಮಿಷ ಕುದಿಸಿ. ತುಪ್ಪದಲ್ಲಿ ಕರಿದ ಗೋಡಂಬಿ, ದ್ರಾಕ್ಷಿ, ಏಲಕ್ಕಿ ಪುಡಿ ಮತ್ತು ಕೇಸರಿ ದಳ ಸೇರಿಸಿದರೆ ರುಚಿಕರ ಪಾಯಸ ರೆಡಿ.
3.ಖಾರ ಮತ್ತು ಸಿಹಿ ಪೊಂಗಲ್
ಖಾರ ಪೊಂಗಲ್: ಹೆಸರುಬೇಳೆಯನ್ನು ತುಪ್ಪದಲ್ಲಿ ಹುರಿದು ಅಕ್ಕಿಯೊಂದಿಗೆ ಬೇಯಿಸಿ. ಅದಕ್ಕೆ ಮೆಣಸು, ಜೀರಿಗೆ, ಶುಂಠಿ, ಗೋಡಂಬಿ ಮತ್ತು ಲವಂಗದ ಒಗ್ಗರಣೆ ನೀಡಿದರೆ ಘಮಘಮಿಸುವ ಪೊಂಗಲ್ ಸವಿಯಲು ಸಿದ್ಧ.
ಸ್ವೀಟ್ ಪೊಂಗಲ್: ಹುರಿದ ಹೆಸರುಬೇಳೆ ಮತ್ತು ಅಕ್ಕಿಯನ್ನು ಬೇಯಿಸಿ, ನಂತರ ಬೆಲ್ಲದ ಪಾಕವನ್ನು ಅದಕ್ಕೆ ಸೇರಿಸಿ. ಏಲಕ್ಕಿ ಮತ್ತು ತುಪ್ಪದಲ್ಲಿ ಕರಿದ ಡ್ರೈ ಫ್ರೂಟ್ಸ್ ಸೇರಿಸುವ ಮೂಲಕ ಸಂಕ್ರಾಂತಿ ಹಬ್ಬಕ್ಕೆ ಸಿಹಿ ಸ್ಪರ್ಶ ನೀಡಿ.
4.ರಾಜಮನೆತನದ ರುಚಿಯ ‘ಕ್ಯಾರೆಟ್ ಹಲ್ವಾ
ವಿಧಾನ: ತುರಿದ ತಾಜಾ ಕ್ಯಾರೆಟ್ ಅನ್ನು ತುಪ್ಪದಲ್ಲಿ ಹಸಿ ವಾಸನೆ ಹೋಗುವವರೆಗೆ ಹುರಿಯಿರಿ. ನಂತರ ಹಾಲು ಸೇರಿಸಿ ಚೆನ್ನಾಗಿ ಬೇಯಿಸಿ. ಹಾಲು ಆವಿಯಾದ ನಂತರ ಸಕ್ಕರೆ ಮತ್ತು ಏಲಕ್ಕಿ ಪುಡಿ ಸೇರಿಸಿ ಕೈಯಾಡಿಸಿ. ಕೊನೆಯಲ್ಲಿ ತುಪ್ಪದಲ್ಲಿ ಕರಿದ ಡ್ರೈ ಫ್ರೂಟ್ಸ್ ಸೇರಿಸಿದರೆ ಬಣ್ಣ ಬಣ್ಣದ ಹಲ್ವಾ ಸಿದ್ಧ.

