ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ) ನಾಡಪ್ರಭು ಕೆಂಪೇಗೌಡ ಬಡಾವಣೆಯ 4ನೇ ಬ್ಲಾಕ್ ನಿವಾಸಿಗಳಿಗೆ ಸಿಹಿ ಸುದ್ದಿ ನೀಡಿದೆ. ರಸ್ತೆಗಳ ಅಗಲೀಕರಣಕ್ಕೆ ಬಿಡಿಎ ಆಡಳಿತ ಮಂಡಳಿ ಸಭೆಯಲ್ಲಿ ಒಪ್ಪಿಗೆ ನೀಡಲಾಗಿದೆ.
ಬಿಡಿಎ ಅಭಿವೃದ್ಧಿಪಡಿಸಿರುವ ನಾಡಪ್ರಭು ಕೆಂಪೇಗೌಡ ಬಡಾವಣೆಯ 4ನೇ ಬ್ಲಾಕ್‌ನ ನಿವಾಸಿಗಳ ದೀರ್ಘಕಾಲದ ಹೋರಾಟಕ್ಕೆ ಕೊನೆಗೂ ಜಯ ಸಿಕ್ಕಿದೆ. ಈ ಬ್ಲಾಕ್‌ನಲ್ಲಿನ ಕಿರಿದಾದ ರಸ್ತೆಗಳನ್ನು ಅಗಲೀಕರಣಗೊಳಿಸಲು ಅನುಮೋದನೆ ಸಿಕ್ಕಿದೆ.
4ನೇ ಬ್ಲಾಕ್‌ನಲ್ಲಿ ಕೇವಲ 9 ಮೀಟರ್ ಇದ್ದ ಕಿರಿದಾದ ರಸ್ತೆಗಳನ್ನು ಈಗ 18 ಮೀಟರ್‌ವರೆಗೆ ಅಗಲೀಕರಣ ಮಾಡಲು ನಿರ್ಧರಿಸಲಾಗಿದೆ. ಇದರಿಂದ ಸುಮಾರು 2,400 ನಿವೇಶನದಾರರಿಗೆ ಅನುಕೂಲವಾಗಲಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
2025ರ ಡಿಸೆಂಬರ್ 17ರಂದು ಬಡಾವಣೆಯ ನಿವಾಸಿಗಳು ಬಿಡಿಎ ಆಯುಕ್ತ ಪಿ. ಮಣಿವಣ್ಣನ್ ಭೇಟಿ ಮಾಡಿ ಈ ಕುರಿತು ಮನವಿ ಸಲ್ಲಿಸಿದ್ದರು. ಜನವರಿ 7 ರಂದು ನಡೆದ ಸಭೆಯಲ್ಲಿ ಬಿಡಿಎ ಇಂಜಿನಿಯರ್ ಎಚ್.ಆರ್. ಶಾಂತರಾಜಣ್ಣ ಅವರು ರಸ್ತೆ ಅಗಲೀಕರಣಕ್ಕೆ ಮಂಡಳಿಯ ಒಪ್ಪಿಗೆ ಸಿಕ್ಕಿರುವುದನ್ನು ಖಚಿತಪಡಿಸಿದ್ದಾರೆ.
ಉಳಿದ ಬ್ಲಾಕ್‌ಗಳಲ್ಲಿ ವಿಶಾಲವಾದ ರಸ್ತೆಗಳಿದ್ದವು. ಆದರೆ 4ನೇ ಬ್ಲಾಕ್‌ನಲ್ಲಿ ಮಾತ್ರ ಕಿರಿದಾದ ರಸ್ತೆಗಳಿದ್ದವು. ಮುಖ್ಯವಾಗಿ ಆಂಜನೇಯ ದೇವಾಲಯದ ಸಮೀಪವಿರುವ 9 ಮೀಟರ್ ರಸ್ತೆಯನ್ನು 15 ಮೀಟರ್‌ಗೆ ಮತ್ತು ಅರ್ಚಕರ ಬಡಾವಣೆ ಸಮೀಪವಿರುವ 15 ಮೀಟರ್ ರಸ್ತೆಯನ್ನು ವಿಸ್ತರಿಸುವಂತೆ ನಿವಾಸಿಗಳು 2022ರಿಂದಲೂ ಒತ್ತಾಯಿಸುತ್ತಿದ್ದರು.
ಬಿಡಿಎ ಜನಸಂಪರ್ಕ ಸಭೆಯಲ್ಲಿಯೂ ಈ ಕುರಿತು ನಿವಾಸಿಗಳು ಅಧಿಕಾರಿಗಳ ಗಮನ ಸೆಳೆದಿದ್ದರು. ಈಗ ನಿವಾಸಿಗಳ ಬೇಡಿಕೆಗೆ ಸ್ಪಂದಿಸಲಾಗಿದ್ದು, ರಸ್ತೆಗಳನ್ನು ಅಗಲೀಕರಣ ಮಾಡಲಾಗುತ್ತದೆ. ಇದರಿಂದಾಗಿ ಮನೆ ನಿರ್ಮಾಣದ ಯೋಜನೆ ರೂಪಿಸುತ್ತಿರುವ ಜನರಿಗೆ ಅನುಕೂಲವಾಗಲಿದೆ.
ಬಿಡಿಎ ಜನಸಂಪರ್ಕ ಸಭೆಯಲ್ಲಿಅಕ್ರಮ ಕಟ್ಟಡಗಳ ತೆರವು, ಪರ್ಯಾಯ ನಿವೇಶನಗಳಿಗೆ ಹಂಚಿಕೆ ಪತ್ರ ನೀಡುವುದು, ಭೂ ಕಬಳಿಕೆ ಯತ್ನಗಳ ವಿರುದ್ಧ ಸಹ ಜನರು ದೂರುಗಳನ್ನು ನೀಡಿದ್ದಾರೆ.
ದೂರುಗಳನ್ನು ಆಲಿಸಿದ ಆಯುಕ್ತ ಮಣಿವಣ್ಣನ್ ಸಂಬಂಧಪಟ್ಟ ಅಧಿಕಾರಿಗಳಿಗೆ ಕೂಡಲೇ ಕ್ರಮ ಕೈಗೊಳ್ಳುವಂತೆ ಸೂಕ್ತ ನಿರ್ದೇಶನಗಳನ್ನು ನೀಡಿದ್ದಾರೆ. ಆಯುಕ್ತರು ಅಧಿಕಾರ ವಹಿಸಿಕೊಂಡ ನಂತರ ಬಿಡಿಎ ಕಾರ್ಯವೈಖರಿಯಲ್ಲಿ ಸಕಾರಾತ್ಮಕ ಬದಲಾವಣೆಗಳು ಕಾಣುತ್ತಿವೆ ಎಂದು ಸೈಟು ಪಡೆದವರು ಶ್ಲಾಘಿಸಿದ್ದಾರೆ.

